ಕನ್ನಡ ಸಾಹಿತ್ಯ ನಮ್ಮ ಸಂಸ್ಕೃತಿ ಸಂವರ್ಧನೆಯ ಶಕ್ತಿ: ವಿಜಯಲಕ್ಷ್ಮೀ ತಿರ್ಲಾಪುರ

KannadaprabhaNewsNetwork | Updated : Mar 11 2024, 01:16 AM IST

ಸಾರಾಂಶ

ಅನುಭವ, ಅನುಭಾವದ ಕನ್ನಡ ಸಾಹಿತ್ಯ ನಮ್ಮ ಸಂಸ್ಕೃತಿ ಸಂವರ್ಧನೆಯ ಶಕ್ತಿಯಾಗಿದೆ.

ಕವನ ಸಂಕಲನ ಬಿಡುಗಡೆ, ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗೆ ಚಾಲನೆಕನ್ನಡಪ್ರಭ ವಾರ್ತೆ ಹಾವೇರಿ

ಅನುಭವ, ಅನುಭಾವದ ಕನ್ನಡ ಸಾಹಿತ್ಯ ನಮ್ಮ ಸಂಸ್ಕೃತಿ ಸಂವರ್ಧನೆಯ ಶಕ್ತಿಯಾಗಿದ್ದು, ಕಾಲಕಾಲಕ್ಕೆ ಬರವಣಿಗೆಯ ರೂಪ ಬದಲಾಗಿದ್ದರೂ ಕನ್ನಡತನದ ಸಂವೇದನೆಗಳ ಅಭಿವ್ಯಕ್ತಿಯೇ ಆಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.

ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮಧು ಕಾರಗಿ ಅವರ ತೆರೆಯದ ಬಾಗಿಲು ಕವನ ಸಂಕಲನ ಬಿಡುಗಡೆ, ಕರ್ನಾಟಕ ಸಂಘದ ಕಾರ್ಯ ಚಟುವಟಿಕೆ ಚಾಲನೆ, ಪ್ರಥಮ ವರ್ಷದ ಎಂಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಹಿತ್ಯ ಸದಾ ಕಾಲಕ್ಕೂ ಮುದ ನೀಡುವಂತಹದ್ದು, ಸೃಜನಶೀಲತೆ ಎಲ್ಲ ಎಲ್ಲೆಗಳನ್ನು ಮೀರಿರುವಂತಹದ್ದು. ಸಾಹಿತ್ಯ ಅಭಿರುಚಿಯಿಂದ ನಮ್ಮ ಉತ್ತಮ ಸಂಸ್ಕಾರ ಸೃಷ್ಟಿಯಾಗುತ್ತದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಭಾಷೆ ಇಲ್ಲದೆ ಏನೂ ಬೆಳೆಯದು. ಬರಹಗಾರರಿಗೆ ನ್ಯಾಯ ಒದಗಿಸುವ ಕಾರ್ಯ ಆಗಬೇಕು. ಸಾಹಿತ್ಯ ಸಂಗೀತ, ನಾಟಕ ನಮ್ಮ ವ್ಯಕ್ತಿತ್ವ ಕಟ್ಟಿ ಕೊಡುತ್ತವೆ. ಅಕ್ಷರ ಸಂಸ್ಕೃತಿ ಅತ್ಯಂತ ಶಕ್ತಿಯುತವಾದುದು. ಜಾತಿ ಗೋಡೆಗಳನ್ನು ಒಡೆಯಬೇಕಾಗಿದೆ. ಸಮಾಜವಾದ ನಮ್ಮನ್ನು ಆವರಿಸಬೇಕಾಗಿದೆ. ಬಂಡಾಯ ಸಾಹಿತ್ಯದ ನಡೆ ಎಲ್ಲ ಕಾಲಕ್ಕೂ ನ್ಯಾಯಕ್ಕಾಗಿ ನಡೆದ ಅಕ್ಷರ ಹೋರಾಟ ಹಾಗೂ ಬೀದಿಗಿಳಿದು ಹೋರಾಟ ಮಾಡಿದೆ ಎಂದರು.

ಡಾ. ಸಂಗಮ್ಮ ಪರಡ್ಡಿ ಮಧು ಕಾರಗಿ ಅವರ ತೆರೆಯದ ಬಾಗಿಲು ಕೃತಿ ಪರಿಚಯಿಸಿ, ಕಾಲೇಜು ಹಂತದಲ್ಲಿಯೇ ಪದ್ಯ ಗೀಚಿ, ಪುಸ್ತಕ ತಂದು, ಅಚ್ಚು ಮೆಚ್ಚಿನ ಸಾಹಿತ್ಯ ಒದಗಿಸಿದ ಮಧು ಕಾರಗಿ ಒಂದು ಆದರ್ಶ. ತನ್ನ ನೋವು ನಲಿವುಗಳನ್ನು, ವೈಚಾರಿಕ ಕವಿತೆಗಳನ್ನು ಅಪ್ಪಟವಾಗಿ ಕಟ್ಟಿಟ್ಟು ಮಾದರಿಯಾಗಿದ್ದಾರೆ ಎಂದರು.

ಡಾ. ಎಚ್.ಬಿ. ಪುಟ್ಟಸ್ವಾಮಿ, ಡಾ. ಗೀತಾಂಜಲಿ ಕುರಡಗಿ, ಡಾ. ಚಿದಾನಂದ ಕಮ್ಮಾರ, ಡಾ. ಚಿಂತಾಮಣಿ, ಮಹದೇವಕ್ಕ, ಕನ್ನಡ ಸಂಘದ ಪದಾಧಿಕಾರಿಗಳಾದ ಕಲ್ಮೇಶ ಹೊಸಳ್ಳಿ, ಸುವರ್ಣ ವಡ್ನಿಕೊಪ್ಪ, ಶಿವಕುಮಾರ ಪಿಚ್ಚಿ, ಶೃತಿ ಹೊಲಬಿಕೊಂಡ ಪಾಲ್ಗೊಂಡಿದ್ದರು.

ಕನ್ನಡ ಎಂಎ ವಿದ್ಯಾರ್ಥಿಗಳಾದ ಪ್ರಿಯಾಂಕಾ, ಶ್ರುತಿ ಹುಲಬಿಕೊಂಡ ಶೈಕ್ಷಣಿಕ ಅನುಭವ ಹಂಚಿಕೊಂಡರು. ಇದೇ ಸಂದರ್ಭ ಕವಯಿತ್ರಿ ಮಧು ಕಾರಗಿ ಅವರನ್ನು ಸನ್ಮಾನಿಸಲಾಯಿತು.

Share this article