ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಮಾಡುವುದನ್ನು ಕಡ್ಡಾಯವಾಗಿ ಪಾಲಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸಲಾಯಿತು.ಈ ವೇಳೆ ಮಾತನಾಡಿದ ಮುಖಂಡರು, ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಹಲವು ರಾಜ್ಯದ, ಹಲವು ಭಾಷೆಯ ಎಲ್ಲಾ ಧರ್ಮದ ಜನರು ಇಲ್ಲಿ ಬಂದು ತಮ್ಮ ಜೀವನೋಪಾಯಕ್ಕೆ ಒಂದಲ್ಲ ಒಂದು ರೀತಿಯ ಉದ್ಯೋಗ ಮಾಡಿಕೊಂಡಿದ್ದಾರೆ. ಅದರಲ್ಲೂ ಮಗ್ಗಗಳ ನೇಕಾರಿಕೆಯಲ್ಲಿ ಸುಮಾರು ಸಾವಿರಾರು ಜನ ಬಂದು ನೆಲೆಸಿದ್ದಾರೆ. ಅದೇ ರೀತಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೈಗಾರಿಕಾ ನಿಯಮದ ಪ್ರಕಾರ ನಮ್ಮ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ಇಂದು ಇಲ್ಲಿ ನೆಲೆಸಿರುವ ಬೇರೆ ರಾಜ್ಯದ ಜನ ಸ್ಥಳೀಯ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಗೌರವ ಕೊಡುವುದು ಅವರ ಕರ್ತವ್ಯ. ತಪ್ಪಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ.60ರಷ್ಟು ಕಡ್ಡಾಯವಾಗಿ ಇರಬೇಕು ಎಂಬ ಆದೇಶವನ್ನು ವ್ಯಾಪಾರಸ್ಥರು ಪಾಲಿಸಬೇಕು. ಹಲವೆಡೆ ಇನ್ನೂ ಸರ್ಕಾರದ ಆದೇಶದಂತೆ ನಾಮಫಲಕಗಳನ್ನು ಬದಲಾಯಿಸಿಲ್ಲ. ನಗರಸಭೆ ಅಧಿಕಾರಿಗಳು ಅಂಗಡಿ ಪರವಾನಗಿ ನೀಡುವಾಗ ಕನ್ನಡ ಕಡ್ಡಾಯದ ಬಗ್ಗೆ ವಿವರಿಸಿಲ್ಲ ಎಂದು ಆರೋಪಿಸಿದರು. ಸಂಪೂರ್ಣ ಕನ್ನಡ ಬಳಕೆ ಮಾಡಿದವರಿಗೆ ಅಭಿನಂದನೆ ತಿಳಿಸಿದ ಸಂಘಟನೆಗಳ ಮುಖಂಡರು, ನಿಯಮ ಪಾಲಿಸದವರಿಗೆ 15 ದಿನಗಳ ಕಾಲಾವಕಾಶ ನೀಡಿ, ಪಾಲಿಸದೆ ಹೋದರೆ ಕಾನೂನು ಮೂಲಕ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.ನೆಲದಾಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು. ಕನ್ನಡ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕನ್ನಡ ಜಾಗೃತಿ ವೇದಿಕೆ, ನೊಂದವರ ಬಂಧು ಸೇವಾ ಸಂಸ್ಥೆ, ಜಯ ಕರ್ನಾಟಕ, ಕೆಆರ್‌ಎಸ್ ಪಕ್ಷ, ಮಹಾಕರ್ನಾಟಕ ಸಮಾಜ ಸೇವಾ ಸಂಘ, ಡಾ.ವಿಷ್ಣು ಸೇನಾ ಸಮಿತಿ, ಧೃವಸರ್ಜಾ ಅಭಿಮಾನಿ ಸಂಘ, ಕರ್ನಾಟಕ ನವ ನಿರ್ಮಾಣ ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಿಂಹ ಗರ್ಜನೆ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.