ತಮಿಳುನಾಡಿಗರಂತೆ ಕನ್ನಡಿಗರು ಕನ್ನಡದ ಅಭಿಮಾನ ತಳೆಯಲಿ । ಕನ್ನಡ ವಿವಿ ಘಟಿಕೋತ್ಸವ ಭಾಷಣ
ಈಗ ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಅವಶ್ಯಕತೆ ಇದೆ. ತಮಿಳುನಾಡಿಗರಂತೆ ಕನ್ನಡಿಗರು ಕನ್ನಡದ ಅಭಿಮಾನ ತಳೆದು ಕಾರ್ಯರೂಪಗೊಳಿಸಬೇಕು. ಕನ್ನಡ ಸಂಶೋಧನೆಯು ಎಲ್ಲೆ ದಾಟಿ, ಹೊಸಲಿನಿಂದ ಹೊರ ಹೋಗಿ ಎಲ್ಲ ಅಧ್ಯಯನ ಶಾಖೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎ.ಎಚ್. ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬದಲ್ಲಿ ಶುಕ್ರವಾರ ಘಟಿಕೋತ್ಸವ ಭಾಷಣ ಮಾಡಿದ ಅವರು, ಕನ್ನಡ ಜ್ಞಾನವನ್ನು ಡಿಜಿಟಲೀಕರಣಗೊಳಿಸುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಅವುಗಳನ್ನು ಎಷ್ಟು ವೇಗವಾಗಿ ಸಾಧ್ಯವಾಗಿಸುತ್ತೇವೆಯೋ ಅಷ್ಟು ವೇಗವಾಗಿ ಕನ್ನಡ ಹಿಗ್ಗುತ್ತದೆ. ಕನ್ನಡ ಪುಸ್ತಕಗಳ ಡಿಜಿಟಲೀಕರಣ, ಕನ್ನಡೇತರ ಭಾಷೆಗಳಿಗೆ ಅನುವಾದ ಇತ್ಯಾದಿ ಮೂಲಕ ಕನ್ನಡವು ತನ್ನ ಭೌಗೋಳಿಕ ವ್ಯಾಪ್ತಿಯನ್ನು ಮೀರಬೇಕಾಗಿದೆ ಎಂದರು.ಕನ್ನಡದ ವರ್ಣಮಾಲೆಗಳನ್ನು ಸರಳಗೊಳಿಸಬೇಕು, ಒತ್ತು ಮತ್ತು ದೀರ್ಘಗಳನ್ನು ಕಡಿಮೆಯಾಗಿಸಬೇಕು. ಈ ದಿಸೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಇನ್ನಷ್ಟು ಶ್ರಮಿಸಬೇಕಾಗಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಅನೇಕ ಸಂಶೋಧನೆಗಳು ಪ್ರಸಾರಾಂಗದ ಪ್ರಕಟಣೆಯ ಮೂಲಕ ಹೊರ ಜಗತ್ತಿಗೆ ತಲುಪುತ್ತಿವೆ. ಕಳೆದ ಮೂರು ದಶಕಗಳಲ್ಲಿ ಸಾರ್ವಜನಿಕರಿಗೂ ಇವು ಬಹುಮುಖ್ಯ ಭೌತಿಕ ಆಕರಗಳಿವೆ. ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಜಾಗತಿಕ ಮಟ್ಟದ ಎಲ್ಲ ತಿಳಿವಳಿಕೆಯನ್ನು ನಮ್ಮದಾಗಿಸಿಕೊಳ್ಳುವ ಸೌಲಭ್ಯಗಳಿವೆ. ಹಾಗೆಯೇ ತಂತ್ರಜ್ಞಾನದ ತಿಳಿವಳಿಕೆ ಮಾತ್ರ ಜ್ಞಾನವಾಗಬಾರದು. ಜ್ಞಾನಕ್ಕೆ ಬೆಲೆ ಬರಬೇಕಾದರೆ ನೆಲದ ಜನಪದದ ಪರಂಪರಾಗತ ತಿಳಿವಳಿಕೆಯ ಜತೆಗೆ ಸಮನ್ವಯವನ್ನು ಸಾಧಿಸುವತ್ತ ಆಧುನಿಕ ಜ್ಞಾನವನ್ನು ವಿಸ್ತರಿಸಬೇಕಾಗಿದೆ. ಇದಕ್ಕೆ ಬೇಕಾದ ಶೋಧಗಳು ಇಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದರು.
ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯವು ತನ್ನ ಕಾರ್ಯಚಟುವಟಿಕೆಯನ್ನು ವಿದೇಶದಲ್ಲೂ ವಿಸ್ತರಿಸಿದೆ. ಅಮೆರಿಕದ ಕ್ಯಾಲಿಪೋರ್ನಿಯಾದ ಪದಾಂತರಂಗ ಸಂಸ್ಥೆಯ ಸಹಯೋಗದಲ್ಲಿ ಅಲ್ಲಿನ ಕನ್ನಡಿಗರಿಗೆ ಕನ್ನಡ ಕಲಿಕೆಗೆ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಮೆರಿಕದ ಬ್ರಿಡ್ಜ್ ವಾಟರ್ ಸ್ಟೇಟ್ ಯೂನಿರ್ವಸಿಟಿಯೊಂದಿಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜ್ಞಾನ ವಿನಿಮಯಕ್ಕೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯವನ್ನು ಬೆಳೆಸಲು, ಉನ್ನತ ಸಂಶೋಧನೆಯ ಉತ್ಕೃಷ್ಟ ಕೇಂದ್ರವನ್ನಾಗಿ ರೂಪಿಸಲು ಸರ್ಕಾರದ ನೆರವು ಮತ್ತು ಅಕ್ಷರಪ್ರೇಮಿಗಳ ಬೆಂಬಲ ಅತ್ಯಗತ್ಯವಾಗಿದೆ ಎಂದರು.