ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನ ಮಂಗಳವಾರ ನಡೆಯಿತು.ಕಸಾಪದ 111 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಜನರಡೆಗೆ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ, ಪುಸ್ತಕಗಳನ್ನು ಖರೀದಿಸುವ ಕಡೆಗೆ ಗಮನ ಹರಿಸಬೇಕು. ಆ ಮೂಲಕ ಕನ್ನಡ ಮತ್ತು ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕಿದೆ: ಕನ್ನಡ ಭಾಷೆಯ ಅಸ್ಮಿತೆಯ ಪ್ರತೀಕವಾದ ನಾಡಿನ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಅವುಗಳನ್ನು ಉಳಿಸಿ ಪುನ:ಶ್ಚೇತನಗೊಳಿಸುವ ದಿಸೆಯಲ್ಲಿ ಜನಾಂದೋಲನ ನಡೆಸಲು ಶ್ರಮಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಅಭಿರುಚಿ ಬೆಳೆಸುವ ದಿಸೆಯಲ್ಲಿ ಸಾಹಿತ್ಯದ ನಡಿಗೆ ಶಾಲೆಯೆಡೆಗೆ ಎಂಬ ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಭ್ರಮ ಬೆಳೆಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದರು.
ಕೊಡಗಿನಲ್ಲಿ ಕಸಾಪ ವತಿಯಿಂದ ಸಾಹಿತ್ಯದ ನಡಿಗೆ ಹಳ್ಳಿಯೆಡೆಗೆ, ಗ್ರಾಮಸಿರಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರೆಡೆಗೆ ಸಾಹಿತ್ಯ ಚಳವಳಿಯನ್ನು ನಡೆಸಲಾಗುತ್ತಿದೆ. ಈಗ ತಾಲೂಕು, ಹೋಬಳಿ ಮಟ್ಟದಲ್ಲೂ ಪರಿಷತ್ತಿನ ವತಿಯಿಂದ ನಿರಂತರವಾಗಿ ಕನ್ನಡದ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಹೊರ ರಾಜ್ಯಗಳಲ್ಲೂ ಘಟಕಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲವೂ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ ಎಂದರು.ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 5 ನೇ ಮೇ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು ಎಂದು ಪ್ರೇಮಕುಮಾರ್ ಬಣ್ಣಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆಗೆ ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದರು.ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಕುರಿತು ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದ ಪರಿಷತ್ತಿನ ವತಿಯಿಂದ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು’ ಎಂದರು.ಹೆಮ್ಮೆಯ ಸಂಗತಿ: ಜಿಲ್ಲೆಯಲ್ಲಿ ಕಸಾಪ ವತಿಯಿಂದ ಕನ್ನಡ ಸಾಹಿತ್ಯವನ್ನು ಬೆಳೆಸುವ ದಿಸೆಯಲ್ಲಿ ಹಲವಾರು ವೈವಿಧ್ಯ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾಹಿತ್ಯ ಪರ ಚಟುವಟಿಕೆಗಳಿಂದ ಉದಯೋನ್ಮುಖ ಸಾಹಿತಿಗಳು, ಲೇಖಕರು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಉತ್ತಮವಾಗಿ ಸಂಘಟನೆಯಾಗುತ್ತಿರುವ ಬಗ್ಗೆ ಪ್ರಶಂಸಿದರು. ಕನ್ನಡ ನಿಘಂಟು ರಚಿಸಿದ ಕಿಟ್ಟಲ್ ನಂತಹ ಮೇಧಾವಿ ಸಾಹಿತಿ ಸೇರಿದಂತೆ ಸಾಹಿತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಬೇಕು ಎಂದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಜಿಲ್ಲೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಮೆಲುಕು ಹಾಕಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಚಂದನ ಬಿ.ದೇವ್, ತಾವು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಅನುಭವ ಹಂಚಿಕೊಂಡರು.ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ನಾಪೋಕ್ಲು ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಕಸಾಪ ಕಚೇರಿ ಸಿಬ್ಬಂದಿ ರೇಣುಕ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.