ಕಸಾಪ ಸಂದಿಗ್ಧತೆ ಎದುರಿಸುವ ಇಚ್ಛಾಶಕ್ತಿ ತೋರಿಸಲಿ: ಸಾಹಿತಿ ಸತೀಶ ಕುಲಕರ್ಣಿ

KannadaprabhaNewsNetwork | Published : May 7, 2024 1:09 AM

ಸಾರಾಂಶ

ಚುನಾವಣೆಯ ಈ ಸಂದರ್ಭದಲ್ಲಿ ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಾಷೆಗೆ ಸಂಬಂಧಿಸಿದ ಘೋಷಣೆ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಕಸಾಪ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಸಂದಿಗ್ಧತೆಯನ್ನು ಎದುರಿಸುವ ಇಚ್ಛಾಶಕ್ತಿ ತೋರಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯ ರೂವಾರಿಗಳಾದ ಮೈಸೂರ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ, ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಸದಾ ಸ್ಮರಣೀಯರು. ಅವರು ಸ್ಥಾಪಿಸಿದ ಈ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಂತೆಯೇ ಅದಕ್ಕೆ ಸವಾಲುಗಳು ಸಹ ಎದುರಾಗಿವೆ. ಚುನಾವಣೆಯ ಈ ಸಂದರ್ಭದಲ್ಲಿ ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಾಷೆಗೆ ಸಂಬಂಧಿಸಿದ ಘೋಷಣೆ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಕಸಾಪ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಸಂದಿಗ್ಧತೆಯನ್ನು ಎದುರಿಸುವ ಇಚ್ಛಾಶಕ್ತಿ ತೋರಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಎಂದು ಹೇಳಿದರು.

ನಗರದ ದಾನೇಶ್ವರಿ ನಗರದ ಪದವಿಪೂರ್ವ ನೌಕರರ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೦ ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಾಮನ ಮೂರ್ತಿಯಿಂದ ತ್ರಿವಿಕ್ರಮ ಸ್ವರೂಪವಾಗಿ ಬೆಳೆದು ನಿಂತ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಹಲವಾರು ಮಹನೀಯರ ತ್ಯಾಗ ಮತ್ತು ದೂರದರ್ಶಿತ್ವದ ಫಲವಾಗಿ ಸ್ಥಾಪನೆಯಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ತೇರನ್ನು ಎಳೆದಂತೆಯೇ, ಕಸಾಪವು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಯುವ ಸಾಹಿತಿಗಳ, ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಆಗಬೇಕು. ಜೊತೆಗೆ ಪ್ರಕಟಣೆಗೆ ಹೆಚ್ಚು ಒತ್ತನ್ನು ನೀಡಬೇಕು. ಅಂದಾಗ ಮಾತ್ರ ಕಸಾಪ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಸಿ.ಎಸ್. ಮರಳಿಹಳ್ಳಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಉಳಿಸುವುದಕ್ಕಾಗಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕನ್ನಡದ ನಂದಾ ದೀಪ ಹಚ್ಚಿ ಹೋಗಿದ್ದಾರೆ. ಅನ್ಯ ಭಾಷೆಗಳ ವ್ಯಾಮೋಹವನ್ನು ತೊರೆದು ನಮ್ಮತನದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿಯನ್ನು ಪಾಲಿಸಬೇಕಾದುದ್ದು ನಮ್ಮ ಕರ್ತ್ಯವ್ಯವಾಗಿದ್ದು, ನೂರಾರು ಭಾಷಾ ವೈವಿಧ್ಯತೆಯ ಈ ದೇಶದಲ್ಲಿ ಯಾವುದೇ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ. ಕಸಾಪ ಇತ್ತೀಚೆಗೆ ಹೊಸ ಸ್ವರೂಪವನ್ನು ಪಡೆಯುತ್ತಿದ್ದು, ಆಧುನಿಕತೆ ತಕ್ಕಂತೆ ಬದಲಾಗುತ್ತಿದೆ. ಸಮ್ಮೇಳನದ ಯಶಸ್ಸಿನ ನಂತರ ಹಲವಾರು ಕಮ್ಮಟಗಳನ್ನು ಏರ್ಪಡಿಸುವುದರ ಮೂಲಕ ಯುವ ಪ್ರತಿಭಾವಂತ ಸಾಹಿತಿಗಳಿಗೆ, ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ದತ್ತಿದಾನಿ ಡಾ.ವಿ.ಪಿ. ದ್ಯಾಮಣ್ಣನವರ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವುದು ಕೇವಲ ಮಾತಿನಿಂದಲ್ಲ, ಕೃತಿಯಿಂದ ಆಗಬೇಕು ಎಂದು ಹೇಳಿದರು. ರೇಣುಕಾ ಗುಡಿಮನಿ ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ಬೇವಿನಮರದ, ಎಸ್.ಎನ್ ದೊಡ್ಡಗೌಡರ, ಅಮೃತಮ್ಮ ಶೀಲವಂತರ, ಎಂ.ಎಸ್.ಕೋರಿಶೆಟ್ಟರ, ಈರಣ್ಣ ಬೆಳವಡಿ, ಅಕ್ಕಮಹಾದೇವಿ ಹಾನಗಲ್ಲ, ದಾಕ್ಷಾಯಣಿ ಗಾಣಗೇರ, ಗೀತಾ ಸುತ್ತಕೋಟಿ,ಶಂಕರ ಸುತಾರ, ಎಸ್.ಸಿ.ಮರಳಿಹಳ್ಳಿ,ಜುಬೇದಾ ನಾಯ್ಕ, ಹನುಮಂತಗೌಡ ಗೊಲ್ಲರ, ಮತ್ತಿತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಅಕ್ಕಮಹಾದೇವಿ ಹಾನಗಲ್ಲ ಪ್ರಾರ್ಥಿಸಿದರು. ತಾಲೂಕ ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಬಿ. ಕಾಳೆ ನಿರೂಪಿಸಿದರು. ಕಾರ್ಯದರ್ಶಿ ಬಿ.ಪಿ.ಶಿಡೇನೂರ ವಂದಿಸಿದರು.

ನಾಡು ನುಡಿ ರಕ್ಷಣೆಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಕನ್ನಡ ನಾಡು ನುಡಿ ಸಾಂಸ್ಕೃತಿಕ ಪರಂಪರೆ ಉಳಿವಿಗೆ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ವೀರೇಶ ಜಂಬಗಿ ಹೇಳಿದರು.

ನಗರದ ಮೆಡ್ಲೇರಿ ರಸ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕ ಕಸಾಪ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜಕೀಯವಾಗಿ ಆಡಳಿತಾತ್ಮಕವಾಗಿ ಹಲವು ಪ್ರಾಂತಗಳಲ್ಲಿ ಹರಿದು ಹಂಚು ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಮೇ 5, 1915ರಂದು ಸ್ಥಾಪಿಸಿದರು. ಹಲವಾರು ಸಾಮಾಜಿಕ ಶೈಕ್ಷಣಿಕ ಹಾಗೂ ಕೈಗಾರಿಕೆಗಳು. ವಯಸ್ಕರ ಶಿಕ್ಷಣ ಮೀಸಲಾತಿ ಹೀಗೆ ಹಲವು ಜನಪರ ಕಾರ್ಯಗಳ ಮೂಲಕ ನಾಡಿನ ಅಭ್ಯುದಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಡಾ. ಕೆ.ಎಚ್. ಮುಕ್ಕಣ್ಣನವರ, ಪ್ರಭಾಕರ ಶಿಗ್ಲಿ, ಎ.ಬಿ. ರತ್ನಮ್ಮ, ಮಾರುತಿ ತಳವಾರ, ಎಸ್.ಎಚ್. ಮುದಿಗೌಡರ, ಜಗದೀಶ ಮಳಿಮಠ, ಚಂದ್ರಶೇಖರ್ ಮಡಿವಾಳರ ಮತ್ತಿತರರಿದ್ದರು.

Share this article