ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮರಾಠಿ ಲೇಖಕರು ತಮ್ಮ ಆತ್ಮಕಥೆಗಳಲ್ಲಿ ನಿರ್ಭಿಡೆಯಿಂದ ಹಾಗೂ ವಾಸ್ತವ ಕಹಿಸತ್ಯಗಳನ್ನು ಹೇಳಿದ ಹಾಗೆ ಕನ್ನಡದ ದಲಿತ ಲೇಖಕರಿಗೆ ಸಾಧ್ಯವಾಗಿಲ್ಲ ಎಂದು ಹಿರಿಯ ಲೇಖಕಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.ಇಲ್ಲಿನ ಚರಂತಿಮಠದಲ್ಲಿ ಶಿವಾನುಭವ ಸಮಿತಿ, ಗೆಳೆಯರ ಬಳಗ ಹಾಗೂ ಮೈಸೂರಿನ ಕವಿತಾ ಪ್ರಕಾಶನ ವತಿಯಿಂದ ಆಯೋಜಿಸಿದ್ದ ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಹಾಗೂ ಅವರ ಆತ್ಮಕಥೆ ದೇವರಗೆಣ್ಣೂರ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಾದ ಔದ್ಯೋಗೀಕರಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇರವಾದ ಪ್ರಭಾವದಿಂದ ಮರಾಠಿ ಲೇಖಕರು ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುವ ಹಾಗೆ ಸಾಹಿತ್ಯ ಬರೆದರು. ಆದರೆ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕು ಸಂಪೂರ್ಣವಾಗಿ ಜಮೀನ್ದಾರಿ ಪದ್ಧತಿ ಒಳಗೊಂಡಿದ್ದಿಲ್ಲ. ಅಲ್ಲದೆ ಔದ್ಯೋಗೀಕರಣ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ಇದರಿಂದ ತಣ್ಣಗಿರುವ ಅವಮಾನಗಳನ್ನು ತಲ್ಲಣಗಳನ್ನು ಹಾಗೂ ನೋವುಗಳನ್ನು ಹೇಳಿಕೊಳ್ಳುವ ಒತ್ತಡಗಳು ನಮ್ಮ ಕರ್ನಾಟಕ ಲೇಖಕರಿಗಿಲ್ಲ ಎಂದರು.ಅಪರೂಪಗಳಿವೆ ನಿಜ, ಆದರೆ ಪ್ರಸ್ತುತ ಲೇಖಕರಾದ ಸೋಮಲಿಂಗ ಗೆಣ್ಣೂರ ಅವರು ತಮ್ಮ ಊರಿನ ಹೆಸರಿನ ಮೂಲಕ ತಮ್ಮ ಬದುಕನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮೂಲತಃ ಲೇಖಕರು ಗಾಂಧಿವಾದ, ಬಸವಣ್ಣನ ಸಿದ್ಧಾಂತ ಕಾರಣಗಳಿಗಾಗಿ ಅವರೊಳಗೆ ಸಾತ್ವಿಕತೆ ಮನೆ ಮಾಡಿದೆ. ಈ ಸಾತ್ವಿಕತೆ ಅವರ ಅತ್ಯಂತ ಬಡತನದ ಭಯಾನಕತೆ ಬಿಚ್ಚಿಡುವಲ್ಲಿ ಗಾಂಧಿ ಮತ್ತು ಬಸವಣ್ಣ ತಡೆಗೋಡೆಯಾಗಿ ನಿಲ್ಲುತ್ತಾರೆ. ಹೀಗಾಗಿ ಸಂಘರ್ಷಕ್ಕೆ ಇಳಿಯುವ ಮನೋಭಾವ ಅವರದಲ್ಲ ಎಂದು ಅವರು ವಿವರಿಸಿದರು.ಗೆಣ್ಣೂರ ಅವರಿಗೆ ಅವರ ಅಜ್ಜಿ ಭಿಕ್ಷೆ ಬೇಡಿ ಊಟ ಹಾಕಿದ್ದಾರೆ. ಈ ಅವಮಾನ ಮತ್ತು ಕ್ರೌರ್ಯವನ್ನು ಹಿಡಿದಿಡುವಲ್ಲಿ ಗೆಣ್ಣೂರ ಅವರ ಭಾಷೆ ಸೋತಿದೆ. ಅಂಥ ಪ್ರಸಂಗಗಳನ್ನು ನಮ್ಮ ಸಮಾಜ, ಇವತ್ತಿನ ಅವರ ಸ್ಥಾನಮಾನ, ಅವರ ಮಕ್ಕಳ ಭವಿಷ್ಯ ಈ ಎಲ್ಲ ಕಾರಣಗಳಿಗೆ ಭಿಕ್ಷೆ ಬೇಡಿದ ಅಜ್ಜಿಯ ಅವಮಾನಗಳು ಸ್ವತಃ ಲೇಖಕರು ಬಾವಿಯಲ್ಲಿ ಜಳಕ ಮಾಡುವ ಹೊತ್ತಿನಲ್ಲಿ ಹೊಲೆಯ ಜಳಕ ಮಾಡ್ತಾನೆಂದಾಗ ಭಯ ಕಾಣಿಸಿಕೊಂಡಿದೆ ವಿನಃ ಆಕ್ರೋಶ ಮೂಡಿಲ್ಲ. ಹೀಗಾಗಿ ಅವರ ತಂದೆಯ ತತ್ವಪದಗಳ ಹಾಡುಗಾರಿಕೆಯ ಪ್ರಭಾವದಿಂದಾಗಿ ಅವರು ಸಾತ್ವಿಕರಾಗಿದ್ದಾರೆ ಎಂದು ಹೇಳಿದರು.
ಕೃತಿಯನ್ನು ಹಿರಿಯ ಲೇಖಕ ಡಾ.ಪ್ರಕಾಶ ಖಾಡೆ ಪರಿಚಯಿಸಿದರು. ಜಿಲ್ಲಾಧಿಕಾರಿ ಸಂಗಪ್ಪ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಯುಐಐಸಿ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ಎಂ.ಎಸ್.ಚಲವಾದಿ ಭಾಗವಹಿಸಿದ್ದರು. ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಸ್ಥಾಪಕ ಪರಶುರಾಮ ನೀಲನಾಯಕ ಅವರನ್ನು ಸನ್ಮಾನಿಸಲಾಯಿತು.ಚರಂತಿಮಠದ ಡಾ.ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೇಯಾ ಜೋರಾಪುರ ವಚನಗಳನ್ನು ಹಾಡಿದರು. ಕವಿತಾ ಪ್ರಕಾಶನದ ಗಣೇಶ ಅಮೀನಗಡ ಸ್ವಾಗತಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಎಂ.ಎಸ್.ಗುಡಗುಂಟಿ ವಂದಿಸಿದರು. ಡಾ.ಸುಮಂಗಲಾ ಮೇಟಿ ಕಾರ್ಯಕ್ರಮ ನಿರೂಪಿಸಿದರು.