ಕನ್ನಡ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

KannadaprabhaNewsNetwork |  
Published : Mar 19, 2024, 12:47 AM IST
೧೮ ಎಚ್‌ಆರ್‌ಆರ್ ೧ಹರಿಹರದಲ್ಲಿ ಸೋಮವಾರ ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಸ್.ಎಸ್.ಲೈಫ್ ಕೇರ್ ಟ್ರಸ್ಟ್ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೆವಪ್ಪ, ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಹಾಗೂ ಕಸಾಪಪದಾಧಿಕಾರಿಗಳಿದ್ದರು.೧೮ ಎಚ್‌ಆರ್‌ಆರ್ ೧ಎಹರಿಹರದಲ್ಲಿ ಸೋಮವಾರ  ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆ ಮೂಲಕ ಸಮ್ಮೇಳನಾ ಸ್ಥಳಕ್ಕೆ ಕರೆತರಲಾಯಿತು. ೧೮ ಎಚ್‌ಆರ್‌ಆರ್ ೧ಬಿಹರಿಹರದಲ್ಲಿ ಸೋಮವಾರ  ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ತಹಸೀಲ್ದಾರ್ ಗುರುಬಸವರಾಜ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೇರಳದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳ ಖರೀದಿಸಲು ಹಣ ಮೀಸಲು ಇಡುತ್ತಾರೆ. ಇದೇ ರೀತಿ ಕನ್ನಡಿಗರೂ ಮಾಡಿದರೆ ಕನ್ನಡದ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡವೂ ಬೆಳೆಯುತ್ತದೆ. ಮಹಾನಗರಗಳಲ್ಲಿ ಕನ್ನಡ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಹರಿಹರ

ಕೇರಳ ನಿವಾಸಿಗಳಂತೆ ಕರ್ನಾಟಕದ ಜನರು ಕೂಡ ದಿನ ಪತ್ರಿಕೆ, ಪುಸ್ತಕಗಳಿಗೆ ಹಣ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಬೆಂಗಳೂರು ಸಂಸ್ಕೃತ ವಿವಿಯ ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸಲಹೆ ನೀಡಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್‌ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಸೋಮವಾರ ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಪ್ರಧಾನ ಭಾಷಣ ಮಾಡಿ, ಕೇರಳದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳ ಖರೀದಿಸಲು ಹಣ ಮೀಸಲು ಇಡುತ್ತಾರೆ. ಇದೇ ರೀತಿ ಕನ್ನಡಿಗರೂ ಮಾಡಿದರೆ ಕನ್ನಡದ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡವೂ ಬೆಳೆಯುತ್ತದೆ. ಮಹಾನಗರಗಳಲ್ಲಿ ಕನ್ನಡ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ಕಂಪು ಉಳಿದಿದೆ. ಈ ವಾತಾವರಣ ಬದಲಾಯಿಸುವ ಶಕ್ತಿ ಮತ್ತು ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲೆಯೇ ಇದೆ ಎಂದರು.

ಕರ್ನಾಟಕದಲ್ಲಿ ನಿರ್ಮಲ ವಾತಾವರಣವಿದೆ, ಕನ್ನಡಿಗರು ಮೂಲತಃ ಸಹಿಷ್ಣುಗಳಾಗಿದ್ದಾರೆ, ಕನ್ನಡ ಉಳಿದರೆ ಕನ್ನಡಿಗರು ಉಳಿಯುತ್ತಾರೆ, ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ, ಶ್ರೀಮಂತವಾದ ಕನ್ನಡ ಭಾಷಾ ಪರಂಪರೆ ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು.

೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿದ್ದ ಯುಗಧರ್ಮ ರಾಮಣ್ಣ ನೂತನ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲರಿಗೆ ಕನ್ನಡದ ಧ್ವಜ ಹಸ್ತಾಂತರಿಸಿ, ಶಿಕ್ಷೆ ಮತ್ತು ಶಿಕ್ಷಣ ಕನ್ನಡದಲ್ಲಿರಬೇಕು ಸಾಧನೆ ಮಾಡುವ ಜೊತೆಗೆ ಸಾಕ್ಷಾತ್ಕಾರ ಮಾಡಿಸಬೇಕು, ೧ನೇ ತರಗತಿಯಲ್ಲಿ ೫ ಬಾರಿ ಅನುತ್ತೀರ್ಣ ಆದ ನನ್ನಂತಹ ವ್ಯಕ್ತಿಗೆ ೧೨ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ಉಂಟು ಮಾಡಿದೆ ಎಂದರು.

ಸಾಂಸ್ಕೃತಿಕ ಹೆಬ್ಬಾಗಿಲು:

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಹೆಳವನಕಟ್ಟೆ ಗಿರಿಯಮ್ಮ ಹಾಗೂ ಪ್ರೊ.ಬಿ.ಕೃಷ್ಣಪ್ಪರ ಸ್ಮರಿಸುತ್ತಾ ಮಾತನಾಡಿ, ಹತ್ತಿಗಿರಣಿಗೆ ಹೆಸರುವಾಸಿಯಾಗಿದ್ದ ದಾವಣಗೆರೆ ಈಗ ವಿದ್ಯಾಕಾಶಿಯಾಗಿ ರೂಪಾಂತರವಾಗಿದೆ. ಹರಿಹರವನ್ನು ನಡುನಾಡು, ಅಥವಾ ಮದ್ಯಾನಡು ಎಂದು ಗುರುತಿಸಲಾಗಿದ್ದು ದಕ್ಷಿಣ ಮತ್ತು ಉತ್ತರ ನಾಡಿನ ಸಾಂಸ್ಕೃತಿಕ ಹೆಬ್ಬಾಗಿಲಾಗಿದೆ ಎಂದರು.

ಒಂದು ಮೂರ್ತಿ ದೇವರಿಬ್ಬರು ಎಂಬ ಹಿರಿಮೆ ಹೊಂದಿರುವ ಹರಿಹರೇಶ್ವರ ದೇವಾಲಯ ಹರಿಹರದ ಐತಿಹಾಸಿಕ ಹಿನ್ನೆಲೆ ವ್ಯಕ್ತಪಡಿಸುತ್ತದೆ. ಇಲ್ಲಿರುವ ಶಾಸನಗಳು ೭ರಿಂದ ೧೯ನೇ ಶತಮಾನದ ಅವಧಿಯದ್ದಾಗಿವೆ. ನಾಡಿನ ಖ್ಯಾತ ಸಾಹಿತಿಗಳಾದ ತ.ರಾ.ಸು., ನಾಡಿಗೇರ್ ಕೃಷ್ಣರಾಯರು, ದಾಶರತಿ ದೀಕ್ಷಿತರು, ಪ್ರೊ.ಎಚ್.ಎಂ.ಶಂಕರ ನಾರಾಯಾಣರು, ಡಾ.ಪೊಲಂಕಿ ರಾಮಮೂರ್ತಿ, ಪಿ.ಲಂಕೇಶ್‌ರ ಪೂರ್ವಜರು ಹರಿಹರದವರಾಗಿದ್ದಾರೆ ಎಂದರು.

ಸಮ್ಮೇಳನ ಉದ್ಘಾಟಿಸಿದ ಎಸ್.ಎಸ್.ಲೈಫ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯುತ್ತಾರೆ. ಬೇರೆ ರಾಜ್ಯಗಳಲ್ಲಿ ಶಿಕ್ಷಣ ಪಡೆದು ಮರಳಿದ ನನ್ನ ಹಿರಿಯ ಪುತ್ರನಿಗೆ, ನನ್ನ ಕಿರಿಯ ಪುತ್ರನೇ ಗುರುವಾಗಿ ಕನ್ನಡ ಭಾಷೆ ಕಲಿಸುತ್ತಿದ್ದಾನೆ ಎಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಎನ್.ಟಿ.ಎರ‍್ರಿಸ್ವಾಮಿ ರಚಿತ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಜೀವನ ಚರಿತ್ರೆ, ಸೀತಾ ಎಸ್.ನಾರಾಯಣ ರಚಿತ ಜ್ಞಾನವಾರದಿ ಪ್ರಬಂಧ, ಎಚ್.ಎನ್.ಶಿವಕುಮಾರ್ ರಚಿತ ಶ್ರಾವಣ ಸಂಭ್ರಮ ಕವನ ಸಂಕಲನಗಳ ಲೋಕಾರ್ಪಣೆ ಮಾಡಲಾಯಿತು. ಸಂಗಮ ಸಿರಿ ಸ್ಮರಣ ಸಂಚಿಕೆ ಕುರಿತು ಸಂಚಿಕೆಯ ಸಂಪಾದಕ ಪ್ರೊ.ಎಚ್.ಎ.ಭಿಕ್ಷಾವರ್ತಿ ಮಠ ಮಾತನಾಡಿದರು. ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ಮತ್ತು ಕೆ.ರಾಘವೇಂದ್ರ ನಾಯರಿ ನಿರೂಪಿಸಿದರು, ಜಿಗಳಿ ಪ್ರಕಾಶ್ ವಂದಿಸಿದರು. ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಿಸಿದರು.

ಬೆಳಿಗ್ಗೆ ೮ಕ್ಕೆ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾದ್ಯಕ್ಷ ಬಿ.ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ, ಪೌರಾಯುಕ್ತ ಐಗೂರು ಬಸವರಾಜ್ ನಾಡ ಧ್ವಜಾರೋಹಣ ಮಾಡಿದರು. ನಂತರ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಚಾಲನೆ ನೀಡಿದರು.

ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಕೆ.ಬಿ.ಕೊಟ್ರೇಶ್, ಹಾವೇರಿ ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ.ಲಿಂಗಯ್ಯ, ಕಸಾಪ ಹರಿಹರ ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಎ.ರಿಯಾಜ್ ಅಹ್ಮದ್, ಚಿದಾನಂದ ಕಂಚಿಕೇರಿ, ಕುಂಬಳೂರು ಸದಾನಂದ, ವೀರೇಶ್ ಎಸ್.ಒಡೇನಪುರ, ಎ.ಕೆ.ಭೂಮೇಶ್, ಡಾ.ಬಿಟ.ಇ.ಸಿದ್ದಪ್ಪ, ಬಿ.ಬಿ.ರೇವಣನಾಯ್ಕ್, ಶಶಿಕುಮಾರ್ ಮೆರ‍್ವಾಡೆ, ಎಸ್.ಕೆ.ಡಿ.ಆರ್.ಡಿ.ಪಿ.ಯ ಪಿ.ಓ ಗಣಪತಿ ಮಾಳಂಜಿ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ರಮೇಶ್ ಮಾನೆ, ಎಂ.ಇಲಿಯಾಸ್ ಅಹ್ಮದ್, ಎಚ್.ಸುಧಾಕರ, ಪ್ರೀತಮ್ ಬಾಬು, ಈಶಪ್ಪ ಬೂದಿಹಾಳ್, ರಾಜೇಶ್, ಶಶಿನಾಯ್ಕ್, ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಕಸಾಪ ಅಧ್ಯಕ್ಷರಾದ ಎ.ಜಿ.ಸುಮತಿ ಜಯಪ್ಪ, ಜಿ.ಮುರುಗೆಪ್ಪ ಗೌಡ, ಎಲ್.ಜಿ.ಮಧುಕುಮಾರ್, ಡಿ.ಎಂ.ಹಾಲಾರಾದ್ಯ, ಕೆ.ಸುಜಾತಮ್ಮ ಇದ್ದರು.

ಸರ್ಕಾರದ ಮೇಲೆ ಒತ್ತಡ ತನ್ನಿ

ಭೌಗೋಳಿಕ, ಪೌರಾಣಿಕ ಹಾಗೂ ಚಾರಿತ್ರಿಕವಾಗಿ ವಿಶೇಷ ಮಹತ್ವ ಹೊಂದಿದ ಹರಿಹರ ಅಭಿವೃದ್ಧಿ ಪಡೆಯಲು ಎಲ್ಲಾ ಅರ್ಹತೆ ಹೊಂದಿದೆ. ನದಿ ಇದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು ಅಗಸನಕಟ್ಟೆ ಕೆರೆ ಪರ್ಯಾಯ ನೀರಿನ ಮೂಲವಾಗಿ ಅಭಿವೃದ್ಧಿಪಡಿಸಬೇಕು, ಭೈರನಪಾದ ನೀರಾವರಿ ಯೋಜನೆ ಕೈಗೂಡಬೇಕು, ಕೈಗಾರಿಕಾ ಘಟಕಗಳನ್ನು, ಜವಳಿ ಪಾರ್ಕ್, ಪವನ ವಿದ್ಯುತ್ ಸ್ಥಾವರ ಘಟಕಗಳ ಸ್ಥಾಪನೆಯಾಗಿ ನಗರವು ಸಂತುಷ್ಟಗೊಳ್ಳಬೇಕು, ಈ ದಿಸೆಯಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಲಿ.

ಪ್ರೊ.ಸಿ.ವಿ.ಪಾಟೀಲ್, ಸಮ್ಮೇಳನದ ಸರ್ವಾಧ್ಯಕ್ಷ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ