ಕನ್ನಡಪ್ರಭ ವಾರ್ತೆ ಬಂಟ್ವಾಳ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ‘ಚಿಣ್ಣರಲೋಕ ಮೋಕೆದ ಕಲಾವಿದೆರ್’ ಸೇವಾ ಟ್ರಸ್ಟ್ ಬಂಟ್ವಾಳ , ಚಿಣ್ಣರ ಲೋಕ ಸೇವಾಬಂಧು ಇವುಗಳ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2024- 25 ಮತ್ತು ಬಹುಸಂಸ್ಕೃತಿ ಸಂಭ್ರಮ ಕಾರ್ಯಕ್ರಮವು ಡಿ. 20 ರಿಂದ ಜನವರಿ 26ರ ವರೆಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ ಎಂದು ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ.ಬಿ.ಸಿ. ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕಲೋತ್ಸವ ಮತ್ತು ಬಹು ಸಂಸ್ಕೃತಿ ಸಂಭ್ರಮ, ಕರ್ನಾಟಕ ಸುವರ್ಣ ಸಂಭ್ರಮ ಎಂಬ ಶೀರ್ಷಿಕೆಯೊಂದಿಗೆ ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯ ಮಟ್ಟದ ಫಿಲ್ಕಿ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ (ಚೆಂಡೆ) ಸ್ಪರ್ಧೆ, ಜಾನಪದ ನೃತ್ಯ, ಭರತನಾಟ್ಯ. ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಚಿಣ್ಣರಲೋಕ ನೋಂದಾಯಿತಗೊಂಡ ಸಂಸ್ಥೆಯಾಗಿದ್ದು ಕೇವಲ ಬಂಟ್ವಾಳ ತಾಲೂಕಿಗೆ ಮಾತ್ರ ಸೀಮಿತವಾಗದೆ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ತನ್ನ ಶಾಖೆಯನ್ನು ಹೊಂದಿ ತನ್ನ ಚಟುವಟಿಕೆಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದೆ. ನುರಿತ ವಿಷಯ ಪರಿಣತದಿಂದ ಈ ಕ್ಷೇತ್ರಗಳಲ್ಲಿ ಎಳೆಯ ಮಕ್ಕಳಿಗೆ ತರಬೇತಿ ನೀಡುತ್ತಾ ಬರುತ್ತಿದೆ.ಇದೀಗ ಈ ಸಂಸ್ಥೆ ತನ್ನ ಕಾರ್ಯಕ್ಷೇತ್ರದ ಸಾಧನೆಯನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು. ಎಳೆಯರ ಮುಂದಾಳುತನಕ್ಕೆ ಹಿರಿಯರು ಸಹಕರಿಸಿ ಎಳೆಯರಿಂದ ಒಂದು ಸುಂದರ ಕಾರ್ಯಕ್ರಮ ಜರುಗಿಸಿ ಅವರಿಗೆ ಹೊಸ ಮಕ್ಕಳ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರ್ವಕವಾಗಿ, ಸ್ಫೂರ್ತಿ ತುಂಬಬೇಕು ಎಂಬ ಸದುದ್ದೇಶದಿಂದ ಕರಾವಳಿ ಕಲೋತ್ಸವ ಕಾರ್ಯಕ್ರಮ ಪ್ರತಿ ವರ್ಷವೂ ಮಾಡುತ್ತಿದೆ ಎಂದರು.
ಜ.20 ರಂದು ಬಿಸಿರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಜಾನಪದ ದಿಬ್ಬಣದ ಮೆರವಣಿಗೆಯು ಸುಮಾರು 250 ಮಂದಿ ಕಲಾವಿದರ ಜೊತೆ ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳೊಂದಿಗೆ, ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಬಿ. ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನಕ್ಕೆ ಆಗಮಿಸಲಿದೆ ಎಂದು ಸುದರ್ಶನ್ ಜೈನ್ ಮಾಹಿತಿ ನೀಡಿದರು.ಅಂದು ಸಂಜೆ ಗಂಟೆ 6.3ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನೆ, ಕೀರ್ತಿಶೇಷ ರಘು ಸಪಲ್ಯ ಮೊಗರ್ನಾಡು ಕಲಾ ವೇದಿಕೆ ದಿ. ಫಾರೂಕ್ ಗೂಡಿನ ಬಳಿ ಸಭಾಂಗಣ ಉದ್ಘಾಟನೆ, ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟನೆ ಹಾಗೂ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಉದಯ ಚೌಟ ಸಾಧನ ಪ್ರಶಸ್ತಿ ಪ್ರದಾನ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಿಲಿನಲಿಕೆ ನಡೆಯಲಿದೆ.
ಡಿ.21 ರಿಂದ ಪ್ರತಿನಿತ್ಯ ಸಭಾ ಕಾರ್ಯಕ್ರಮ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಚಿಣ್ಣರಲೋಕ ಸೇವಾಬಂಧು ಅಧ್ಯಕ್ಷ ಮೋಹನ್ ದಾಸ ಕೊಟ್ಟಾರಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಉಪಾಧ್ಯಕ್ಷೆ ಪೌಝಿಯಾ, ಗೌರವಸಲಹೆಗಾರ ಅಶೋಕ್ ಶೆಟ್ಟಿ ಸರಪಾಡಿ, ನಿರ್ದೇಶಕ ಇಬ್ರಾಹಿಂ ಕೈಲಾರ್ ಇದ್ದರು.