ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಖಂಡಿಸಿ ಹಾಗೂ ಬೆಂಗಳೂರಿನಲ್ಲಿ ಬಂಧಿಸಿರುವ ಕರವೇ ಕಾರ್ಯಕರ್ತರು ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ನಾಡು, ನುಡಿ, ನೆಲ, ಭಾಷೆ, ವಿದ್ಯಾರ್ಥಿ ಹಾಗೂ ರೈತರ ಸಮಸ್ಯೆಗಳ ನಿವಾರಣೆಗೆ ನಾಡಿನಾದ್ಯಂತ ಕಾನೂನಾತ್ಮಕವಾಗಿ ಚಳುವಳಿ ನಡೆಸುತ್ತಿರುವ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ ಎಂದರು.ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಹಿಂದಿ ಭಾಷಾ ಸಮಿತಿ ಕಾರ್ಯಕ್ರಮ ವಿರೋಧಿಸಿ ಕರವೇ ಕಾರ್ಯಕರ್ತರು ಚಳುವಳಿ ನಡೆಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಹಿಂದಿ ಭಾಷಿಗರನ್ನು ಬೆಂಬಲಿಸಿ ಅನ್ಯಾಯವಾಗಿ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಭಾಷೆ ಹೊರತಾಗಿ ದ್ವಿಭಾಷಾ ನೀತಿ ಜಾರಿಗೊಳಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಕನ್ನಡಕ್ಕಿಂತ, ಹಿಂದಿ ಮೇಲಿನ ಪ್ರೇಮ ಹೆಚ್ಚಾಗಿ ಪ್ರಚಾರಕ್ಕೆ ಮುಂದಾಗಿರುವುದು ವಿಪರ್ಯಾಸ. ಇದರಿಂದ ಭಾಷಾಭಿಮಾನ ಅಳವಡಿಸಿಕೊಂಡಿರುವ ಕೋಟ್ಯಂತರ ಕನ್ನಡಿಗರಿಗೆ ನೋವುಂಟಾಗಿದೆ ಎಂದು ತಿಳಿಸಿದರು.ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಎಲ್ಲಾ ಭಾಷೆಗಳಿಗಿಂತ ಹಿರಿತನ ಹೊಂದಿದೆ. ನಾಡಿನಲ್ಲಿ ಕವಿ ಸಂತರು, ದಾರ್ಶನಿಕರು, ವಚನಕಾರರು, ಕೀರ್ತನಾಕಾರರು ಜನಿಸಿದ ಪುಣ್ಯಭೂಮಿ. ಈ ಕನ್ನಡ ಭೂಮಿಯಲ್ಲಿ ಹಿಂದಿ ಭಾಷೆ ಏರಿಕೆಗೊಳಿಸುವ ಮೂಲಕ ಕನ್ನಡ ಭಾಷೆ ನಶಿಸುವಂಥ ಕೆಲಸವಾಗುತ್ತಿದೆ ಎಂದು ಹೇಳಿದರು.ಕೂಡಲೇ ರಾಜ್ಯ ಸರ್ಕಾರ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಿ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಕನ್ನಡದ ಪರವಾಗಿ ಚಳುವಳಿ ನಡೆಸಿರುವ ಪ್ರಾಮಾಣಿಕ ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಕೋಟೆ ಮಲ್ಲೇಶ್, ದಶರತ್ ರಾಜ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ ಹಲ್ಮಿಡಿ, ತಾಲೂಕು ಅಧ್ಯಕ್ಷ ಮನೋಜ್, ಸಂಘಟನಾ ಕಾರ್ಯದರ್ಶಿ ಶಶಿ, ಸಹ ಕಾರ್ಯದರ್ಶಿ ಮಧು, ಸಂಚಾಲಕ ಯುವರಾಜ್, ತಾಲೂಕು ಮಹಿಳಾಧ್ಯಕ್ಷೆ ಪೂರ್ಣಿಮಾ, ಮುಖಂಡರಾದ ಅಶೋಕ್ ಶೆಟ್ಟಿ, ಮಂಜುಳಾಬಾಯಿ, ಇರ್ಷಾದ್ ಅಹ್ಮದ್, ಸಾದಿಕ್, ಪ್ರಸನ್ನ ಹಾಗೂ ಕಾರ್ಯಕರ್ತರು ಇದ್ದರು. 27 ಕೆಸಿಕೆಎಂ 2ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಖಂಡಿಸಿ ಕರವೇ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.