ನಾಡು, ನುಡಿ, ರಕ್ಷಣೆಯಲ್ಲಿ ಕರವೇ ಪಾತ್ರ ಅಪಾರ

KannadaprabhaNewsNetwork | Published : Dec 2, 2024 1:19 AM

ಸಾರಾಂಶ

ಕರ್ನಾಟಕ ಸಂಭ್ರಮಕ್ಕೆ 50ವರ್ಷ ತುಂಬಿದ ಹಿನ್ನೆಲೆಯಲ್ಲಿ 2023ರಲ್ಲಿ ಸುಮಾರು 22 ಸಚಿವರು ಒಂದೇ ವೇದಿಕೆಯಲ್ಲಿ ಸೇರಿಸಿದ ಹೆಗ್ಗಳಿಕೆ ಗದಗ ನಗರಕ್ಕೆ ಸಲ್ಲುತ್ತದೆ

ಗದಗ: ಭಾರತರತ್ನ ಪಂ.ಭೀಮ ಸೇನ ಜೋಶಿ, ಹುಯಿಲಗೋಳ ನಾರಾಯಣರಾವ, ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು ನಡೆದಾಡಿದ ನಾಡು ಗದಗ ಜಿಲ್ಲೆಯಾಗಿದೆ. ಏಕಿಕರಣಕ್ಕಾಗಿ ಕನ್ನಡಿಗರು ಒಂದಾಗಬೇಕು ಅಂತ ಹೋರಾಡಿದ ಸತ್ವಯುತ ಭೂಮಿ ಗದಗ ಜಿಲ್ಲೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರವೇ ನಾರಾಯಣಗೌಡ್ರ ಬಣದಿಂದ ಆಯೋಜಿಸಿದ್ದ ಗದಗ ಕನ್ನಡೋತ್ಸವ ಸಾಂಸ್ಕೃತಿಕ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸಂಭ್ರಮಕ್ಕೆ 50ವರ್ಷ ತುಂಬಿದ ಹಿನ್ನೆಲೆಯಲ್ಲಿ 2023ರಲ್ಲಿ ಸುಮಾರು 22 ಸಚಿವರು ಒಂದೇ ವೇದಿಕೆಯಲ್ಲಿ ಸೇರಿಸಿದ ಹೆಗ್ಗಳಿಕೆ ಗದಗ ನಗರಕ್ಕೆ ಸಲ್ಲುತ್ತದೆ. ನವೆಂಬರ್ ಅಂತ್ಯದಲ್ಲಿಯೂ ಕರವೇ ಕಾರ್ಯಕರ್ತರ ಕನ್ನಡದ ಸಂಭ್ರಮ ವರ್ಷವಿಡೀ ಇದ್ದಂತೆ ಕಾಣುತ್ತದೆ. ಕನ್ನಡ ನಾಡು, ನುಡಿ, ಜಲಕ್ಕಾಗಿ ಕರವೇ ಕೊಡುಗೆ ಅಪಾರವಾದದ್ದು ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶ ಎಲ್ಲಿಯೂ ಇಲ್ಲ. ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 1,200 ಪ್ರಾಚ್ಯಾವಶೇಷ, 300 ವರ್ಷಗಳ ಶಿಲಾವಶೇಷ ಜನರು ನೀಡಿದ್ದಾರೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿ ವರ್ಷ 1 ಕೋಟಿ 20 ಲಕ್ಷ ಜನ ಭೇಟಿ ಕೊಡುತ್ತಾರೆ. ಭಾರತ ಹುಣ್ಣಿಮೆ ದಿನ 10 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ. ಇಡೀ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಭಕ್ತರು ಸೇರುವ ಏಕೈಕ ಸ್ಥಳ ಉತ್ತರ ಕರ್ನಾಟಕದ ಯಲ್ಲಮ್ಮನಗುಡ್ಡ ಎನ್ನುವುದು ಹೆಮ್ಮೆಯ ವಿಷಯವಾಗಿದ್ದು, ಆ ಕ್ಷೇತ್ರದ ಹಿರಿಮೆ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ 100 ಕೋಟಿ ಮಂಜೂರು ಮಾಡಿದೆ ಜತೆಗೆ ದಾಸೋಹ ನೀಡಲು ತಿರ್ಮಾನಿಸಲಾಗಿದೆ. ಜಾತ್ರೆಗೆ ಬರುವ ಎತ್ತುಗಳಿಗೆ ಹೊಟ್ಟು-ಮೇವಿನ ವ್ಯವಸ್ಥೆ ಮಾಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೀದರ್ ಜಿಲ್ಲೆಯಿಂದ ಚಾಮರಾಜನಗರ ವರೆಗೂ ಕನ್ನಡದ ಪರ ಹೋರಾಟ ಮಾಡುವ ಏಕೈಕ ಸಂಘಟನೆ ಎಂದರೇ ಟಿ.ಎ. ನಾರಾಯಣಗೌಡ್ರ ಕರವೇಯಾಗಿದೆ. ಕಳೆದ 25 ವರ್ಷಗಳಿಂದ ಕರವೇ ನಾಡು, ನುಡಿ, ಜಲಕ್ಕಾಗಿ ಹೋರಾಟ ಮಾಡುತ್ತಿದೆ. ಜತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ರಾಜ್ಯದಲ್ಲಿ ಶೇ. 60% ಕನ್ನಡ ನಾಮಫಲಕ ಅಳವಡಿಸಬೇಕು. ಅಂತ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದನ್ನು ಕರವೇ ಟಿ.ಎ ನಾರಾರಣಗೌಡ್ರ ಬಣ ಸ್ವಾಗತಿಸುತ್ತದೆ ಎಂದರು.

ಉಸಿರು ಫೌಂಡೇಶನ ಅಧ್ಯಕ್ಷ ಶರಣ ಪಾಟೀಲ ಮಾತನಾಡಿ, 25 ವರ್ಷಗಳಿಂದ ಕರವೇ ಕನ್ನಡಿಗರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿಕೊಂಡು ಬಂದಿದೆ. ಕರವೇ ಕಾರ್ಯಕರ್ತರಲ್ಲಿ ಶಕ್ತಿ ಇದ್ದು, ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡದೇ ಮನೆ ಬಿಟ್ಟು ಹೋರಾಟ ಮಾಡಿದ್ದರ ಫಲವಾಗಿ ಇಂದು ಕನ್ನಡಿಗರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರು.

ಕರವೇ ಮುಖಂಡ ಎಚ್.ಎಸ್. ಸೊಂಪೂರ ಹಾಗೂ ತೋಂಟದಾರ್ಯ ಮಠದ ಶ್ರೀಸಿದ್ದರಾಮ ಸ್ವಾಮಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ರೋಣ ಶಾಸಕ ಜಿ.ಎಸ್.ಪಾಟೀಲ್, ಮಿಥುನ್ ಪಾಟೀಲ್, ದಲಿತ ಮುಖಂಡ ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ರಾಜು ಹೆಬ್ಬಳ್ಳಿ, ಬಸವರಾಜ ಹಾರೊಗೇರಿ, ಡಾ. ಗುರುಲಿಂಗಪ್ಪ ಬಿಡನಾಳ, ಸುರೇಶ ಲಮಾಣಿ, ಪೂಜಾ, ಶಂಕರಪ್ಪ ಗುಜಮಾಗಡಿ, ಬಸವನಗೌಡ ಪೊಲೀಸ್‌ಪಾಟೀಲ್, ಹನಮಂತಪ್ಪ ಮೇಟಿ, ಸಾಗರ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.

Share this article