ಕನ್ನಡಪ್ರಭ ವಾರ್ತೆ ಕುಷ್ಟಗಿ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ತಾಲೂಕಿನ ಹಿರೇಮನ್ನಾಪೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಹಿರೇಮನ್ನಾಪುರ ಗ್ರಾಮದ ಮುಖ್ಯ ರಸ್ತೆಗೆ ಬೀದಿ ದೀಪ ಅಳವಡಿಸಬೇಕು, ಸೋಲಾರ ಹಾಗೂ ಪವನ ವಿದ್ಯುತ್ ಕಂಪನಿಗಳಲ್ಲಿ ಸ್ಥಳೀಯರಿಗೆ ಕೆಲಸ ಕೊಡಿಸಬೇಕು, ಕುಷ್ಟಗಿ-ಸಿಂಧನೂರು ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿ ಪಡಿಸಬೇಕು, ಸಮರ್ಪಕ ಚರಂಡಿ ನಿರ್ಮಾಣ ಮಾಡಬೇಕು, ಗ್ರಂಥಾಲಯಕ್ಕೆ ಹೊಸ ಕಟ್ಟಡ ಮಂಜೂರು ಮಾಡಬೇಕು, ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಅಸುರಕ್ಷಿತ ಜಾಗದಲ್ಲಿ ಇರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕು.
ಜಲಜೀವನ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಅಸಮರ್ಪಕವಾಗಿವೆ, ಕಸ ವಿಲೇವಾರಿ ಘಟಕವನ್ನು ಮಂಜೂರು ಮಾಡಿದ್ದರೂ ಗ್ರಾಮದಲ್ಲಿನ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ, ಗ್ರಾಮದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿದ್ದು ಅವರು ಅಭ್ಯಾಸಮಾಡಲು ಸರಿಯಾದ ಕ್ರೀಡಾಂಗಣದ ವ್ಯವಸ್ಥೆ ಇಲ್ಲ. ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ ಶಾಲೆಯ ಅಗತ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆಯ ಕೊರತೆ ಇದೆ. ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಹಾಜರಾಗದೇ, ರೋಗಿಗಳು ಕಾಯಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಒಂದು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದ ಮನೆಗಳ ಮೇಲೆ ಇರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಬೇಕು. ಹೊಸ ಕಂಬಗಳನ್ನು ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಸೀಲ್ದಾರ ಶೃತಿ ಮಳ್ಳಪ್ಪಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಆದಪ್ಪ ಉಳ್ಳಾಗಡ್ಡಿ, ಪ್ರಕಾಶ ಮನ್ನೆರಾಳ, ಚನ್ನಪ್ಪ ನಾಲಗಾರ, ಪರಸಪ್ಪ ಅಳ್ಳಳ್ಳಿ, ಪಂಪಣ್ಣ ಹಡಪದ, ಮರಿಯಪ್ಪ ಮುಳ್ಳೂರು, ಮಂಜುನಾಥ ಕಜ್ಜಿ, ಹುಸೇನಪ್ಪ ಕೊಳೂರು, ಕಿರಣ ಕೊನ್ನೂರು, ಬಸವರಾಜ ಕತ್ತಿ, ಉಮೇಶ ವಡ್ಡರ, ಮಹಾಂತೇಶ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.