ಕಾರ್ಕಳ, ಹೆಬ್ರಿ ರೈತರಿಗೆ ನೀರು ಸಂಗ್ರಹಣಾ ಘಟಕ ಯೋಜನೆ ವರದಾನ

KannadaprabhaNewsNetwork | Published : May 13, 2024 1:03 AM

ಸಾರಾಂಶ

ಒಂದು ಕಾಲದಲ್ಲಿ ಬಯಲು ಸೀಮೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಉಪಯೋಜನೆಯ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕಗಳು ಹೆಚ್ಚಾಗಿ ಕಂಡುಬರುತಿದ್ದವು. ಇಂದು ಪಶ್ಚಿಮ ಘಟ್ಟಗಳ ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲೂ ಈ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಈಗಾಗಲೇ ಹೆಬ್ರಿಯನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಿಸಿದ್ದು, ಕಾರ್ಕಳ ತಾಲೂಕಿನಲ್ಲೂ ನೀರಾವರಿ ಸಮಸ್ಯೆ ಎದುರಾಗಿದೆ‌. ಆದರೆ, ಕೃಷಿ ಭೂಮಿಗೆ ಅನುಕೂಲವಾಗುವ ಸಲುವಾಗಿ ನೀರಾವರಿ ವ್ಯವಸ್ಥೆಗಳನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

ತೋಟಗಾರಿಕಾ ಬೆಳೆಗಳಿಗೆ ನೀರಿನ ಅವಲಂಬನೆ ಹೆಚ್ಚು. ಆದ್ದರಿಂದ ಬೃಹತ್ ನೀರಿನ ಸಂಗ್ರಹಣಾ ಘಟಕಗಳು ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಾಣ ಮಾಡುವುದರಿಂದ ತಾಲೂಕಿನ ರೈತರಿಗೆ ಈ ಕುರಿತು ಆಶಾವಾದವಿದೆ.

ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ತೋಟದ ಬೆಳೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವುದು ಈ ಯೋಜನೆಗಳ ಉದ್ದೇಶ.

ಒಂದು ಕಾಲದಲ್ಲಿ ಬಯಲು ಸೀಮೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಉಪಯೋಜನೆಯ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕಗಳು ಹೆಚ್ಚಾಗಿ ಕಂಡುಬರುತಿದ್ದವು. ಇಂದು ಪಶ್ಚಿಮ ಘಟ್ಟಗಳ ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲೂ ಈ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಇದರಿಂದಾಗಿ ಬರವಿರುವ ತಾಲೂಕುಗಳಿಗೆ ಈ ಯೋಜನೆಗಳು ವರದಾನವಾಗಲಿವೆ.

ವೈಯಕ್ತಿಕ ನೀರು ಸಂಗ್ರಹಣಾ ಘಟಕ: ರಾಷ್ಟ್ರೀಯ ತೋಟಗಾರಿಕಾ ಮಿಷನ್ ಉಪಯೋಜನೆ ವೈಯಕ್ತಿಕ ನೀರು ಸಂಗ್ರಹಣಾ ಘಟಕ ಯೋಜನೆಯಡಿ 12 ಲಕ್ಷ ಲೀಟರ್ ಸಾಮರ್ಥ್ಯ 20*20*3 ಮಾದರಿಯ ನೀರಿನ ಸಂಗ್ರಹಣಾ ಘಟ್ಟಕಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಶೀಟ್ ಅಳವಡಿಕೆ ಮಾಡಿದರೆ 75 ಸಾವಿರ ರು. ಸಹಾಯ ಧನ, ಪ್ಲಾಸ್ಟಿಕ್ ಶೀಟ್ ಅಳವಡಿಕೆ ಮಾಡದಿದ್ದರೆ 52,500 ರು. ಸಹಾಯಧನ ಇಲಾಖೆಯಿಂದ ಫಲಾನುಭವಿಗಳಿಗೆ ನೀಡಲಾಗುತ್ತದೆ. ಈಗಾಗಲೇ ೨೦೨೩ ಹಾಗೂ 2024 ಸಾಲಿನಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲು , ಹಿರ್ಗಾನ, ಇರ್ವತ್ತೂರು, ಮಾಳ ಹೆಬ್ರಿ ತಾಲೂಕಿನ ವರಂಗದ ಒಟ್ಟು 5 ಫಲಾನುಭವಿಗಳು ಈ ಯೋಜನೆ ಸದುಪಯೋಗಪಡೆದಿದ್ದಾರೆ.ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:

ಈ ಯೋಜನೆಯಡಿ ಸಣ್ಣ ಪ್ರಮಾಣದ ನೀರಿನ ಸಂಗ್ರಹಣಾ ಘಟಕಗಳ ನಿರ್ಮಾಣ ಗುರಿ ಹೊಂದಲಾಗಿದೆ. 39 ಮೀ*39ಮೀ*3 ಮೀ. ಸೇರಿದಂತೆ ಒಟ್ಟು ವಿವಿಧ ಗಾತ್ರಕ್ಕೆ ತಕ್ಕಂತೆ ನೀರಿನ ಸಂಗ್ರಹಣಾ ಘಟಕಗಳ ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ಶೀಟ್ ಅಳವಡಿಸದಿದ್ದರೆ ಸಹಾಯಧನವಿಲ್ಲ. ಪ್ಲಾಸ್ಟಿಕ್ ಶೀಟ್ ಅಳವಡಿಕೆ ಕಡ್ಡಾಯವಾಗಿದೆ.

ಇದರಲ್ಲಿ ಒಟ್ಟು ಗರಿಷ್ಠ ಶೇ.50ರಷ್ಟು ಸಹಾಯಧನ ತೋಟಗಾರಿಕ ಇಲಾಖೆಯಿಂದ ನೀಡಲಾಗುತ್ತಿದೆ.

ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ ಪಡುಕುಡೂರಿನಲ್ಲಿ 1 , ಹಾಗೂ ಕಾರ್ಕಳ ತಾಲೂಕಿನ ಸೂಡ ಗ್ರಾಮದಲ್ಲಿ 1 ಒಟ್ಟು 2 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತಿದ್ದಾರೆ. ತೋಟಗಾರಿಕಾ ಇಲಾಖೆ ಮೂಲಕವೇ ಈ ನೀರಿನ ಸಂಗ್ರಹಣಾ ಘಟಕಗಳ ನಿರ್ಮಾಣ ಮಾಡಲಾಗುತ್ತದೆ.

..................

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಉಪಯೋಜನೆಯ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಿರ್ಮಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಮಳೆಗಾಲ ಸಂದರ್ಭದಲ್ಲಿ ಅಥವಾ ತೋಡು ನದಿಗಳ ಹೆಚ್ಚುವರಿ ನೀರನ್ನು ಬೃಹತ್ ಪ್ರಮಾಣದ ನೀರಿನ ಸಂಗ್ರಹಣಾ ಘಟಕಗಳಲ್ಲಿ ಸಂಗ್ರಹಣೆ ಮಾಡಿ, ಬರಗಾಲದ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಗಳಿಗೆ ನೀರುಣಿಸುವುದೆ ಮುಖ್ಯ ಉದ್ದೇಶ.

-ಶ್ರೀನಿವಾಸ ವಿ.ವಿ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಕಾರ್ಕಳ.

.........................

2012 ರಲ್ಲಿ ವರ್ಷಗಳ ಹಿಂದೆ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕದಲ್ಲಿ 76 ಲಕ್ಷ ಲೀಟರ್ ನೀರನ್ನು ಸಂಗ್ರಹಣೆ ಸಾಧ್ಯವಾಗಿದೆ. ಸುಮಾರು 62 ಸೆಂಟ್ಸ್ ಜಾಗದಲ್ಲಿ ಘಟಕವಿದ್ದು ಮೇ ತಿಂಗಳಲ್ಲಿ 40 ಲಕ್ಷ ಲೀಟರ್ ನೀರಿನ ಸಂಗ್ರಹವಿದೆ.4.50 ಎಕರೆ ಜಾಗದಲ್ಲಿ ಅಡಕೆ, ಭತ್ತ, ತೆಂಗು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ.

-ಅನಂತಾನಂದ ಶೆಣೈ, ಯೋಜನೆ ಫಲಾನುಭವಿ, ಸೂಡ ಗ್ರಾಮ ಕಾರ್ಕಳ.

Share this article