ಕಾರ್ಕಳ: ಮುಂಡ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತ

KannadaprabhaNewsNetwork |  
Published : Apr 15, 2024, 01:17 AM IST
ಮುಂಡ್ಲಿ ಬಳಿ  ಸ್ವರ್ಣ ನದಿಗೆ ಅಡ್ಡದಾಗಿ ಕಟ್ಟಲಾದ ಮುಂಡ್ಲಿ ಡ್ಯಾಂ  | Kannada Prabha

ಸಾರಾಂಶ

ಕಾರ್ಕಳ ತಾಲೂಕಿನ ಮುಂಡ್ಲಿ ಬಳಿ ಸ್ವರ್ಣ ನದಿಗೆ ಅಡ್ಡದಾಗಿ ಕಟ್ಟಲಾದ ಮುಂಡ್ಲಿ ಡ್ಯಾಂ ನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಂಡಿದೆ. ಈ ಡ್ಯಾಂ ಮೂಲಕ ಕಾರ್ಕಳ ನಗರ ವ್ಯಾಪ್ತಿಗೆ ನೀರು ಸರಬರಾಜು ‌ಮಾಡಲಾಗುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿ ಈ ಮುಂಡ್ಲಿ ಡ್ಯಾಂ ಆಧಾರವಾಗಿರುವ ಕಾರಣ ಸ್ವರ್ಣ ನದಿಯನ್ನು ಅವಲಂಬಿಸಬೇಕಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿಗೆ ನೀರುಣಿಸುವ ಸ್ವರ್ಣ ನದಿಯಲ್ಲಿ ಜಲಮಟ್ಟ ತೀವ್ರಗತಿಯಲ್ಲಿ ಕುಸಿತವಾಗುತ್ತಿದ್ದು ಕಾರ್ಕಳ ಪುರಸಭಾ ವ್ಯಾಪ್ತಿಗೆ ನೀರಿನ ಸಮಸ್ಯೆ ಎದುರಾಗುವುದು ದಟ್ಟವಾಗಿದೆ. ಬಿಸಿಲ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ನಗರಕ್ಕೆ ಸರಬರಾಜು ಮಾಡುವ ಮುಂಡ್ಲಿ ಅಣೆಕಟ್ಟಿನಲ್ಲಿ ನೀರಿನ ಜಲಮಟ್ಟವೂ ಕುಸಿಯುತ್ತಿದ್ದು ನೀರಿನ ಸಮಸ್ಯೆ ಉಲ್ಬಣಿಸಬಹುದು.ಮುಂಡ್ಲಿ ಡ್ಯಾಂ ನೀರಿನ‌ಮಟ್ಟ ಕುಸಿತ: ಕಾರ್ಕಳ ತಾಲೂಕಿನ ಮುಂಡ್ಲಿ ಬಳಿ ಸ್ವರ್ಣ ನದಿಗೆ ಅಡ್ಡದಾಗಿ ಕಟ್ಟಲಾದ ಮುಂಡ್ಲಿ ಡ್ಯಾಂ ನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಂಡಿದೆ. ಈ ಡ್ಯಾಂ ಮೂಲಕ ಕಾರ್ಕಳ ನಗರ ವ್ಯಾಪ್ತಿಗೆ ನೀರು ಸರಬರಾಜು ‌ಮಾಡಲಾಗುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿ ಈ ಮುಂಡ್ಲಿ ಡ್ಯಾಂ ಆಧಾರವಾಗಿರುವ ಕಾರಣ ಸ್ವರ್ಣ ನದಿಯನ್ನು ಅವಲಂಬಿಸಬೇಕಾಗಿದೆ. ಡ್ಯಾಂ ಗಳಲ್ಲಿ ಕುಸಿತ ಗೊಂಡ ನೀರಿನ ಸಾಮರ್ಥ್ಯ: ಮಾಳ ಗ್ರಾಮದಲ್ಲಿ ಹುಟ್ಟುವ ಸ್ವರ್ಣ ನದಿಗೆ ಅಡ್ಡಲಾಗಿ ಕಡಾರಿ, ಕೆರುವಾಶೆ, ಮುಂಡ್ಲಿ ಹಾಗೂ ಎಣ್ಣೆಹೊಳೆ, ಪಟ್ಟಿಬಾವು, ಶಿರೂರು, ಬಜೆ ಬಳಿ ಒಟ್ಟು 7 ಅಣೆಕಟ್ಟುಗಳಿವೆ. ಅದರಲ್ಲಿ ಎಣ್ಣೆಹೊಳೆ ಹಾಗೂ ಬಜೆ ಡ್ಯಾಂ ಗಳಲ್ಲಿ ನೀರಿನ ಸಾಮರ್ಥ್ಯವಿದೆ. ಎಣ್ಣೆಹೊಳೆ ಏತ ನೀರಾವರಿ ಯೋಜನೆಯಲ್ಲಿ ಈ ಬಾರಿ ಕಾರ್ಕಳ ತಾಲೂಕಿನ ಮರ್ಣೆ, ಹಿರ್ಗಾನ, ಕಾರ್ಕಳ ನಗರದ ಕೆರೆಗಳಿಗೆ ಡಿಸೆಂಬರ್ ನಿಂದ ಮಾರ್ಚ್ ಅಂತ್ಯದ ವರೆಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಬಿಸಿಲ ಝಳ ಹೆಚ್ಚುತಿದ್ದಂತೆ ಕೆರೆಗಳಿಗೆ ಸರಬರಾಜು ಆಗುತಿದ್ದ ನೀರನ್ನು ನಿಲ್ಲಿಸಲಾಗಿದೆ. ಉಡುಪಿ ನಗರಕ್ಕೆ ನೀರಿನ ಕೊರತೆಯಾಗದಂತೆ ಶೀರೂರು ಹಾಗೂ ಬಜೆ ಡ್ಯಾಂ ಗಳಲ್ಲಿ ನೀರನ್ನು ಸಂಗ್ರಹಿಸಿದ್ದು ನದಿತಟದ ರೈತರಿಗೆ ವಾರಕ್ಕೊಮ್ಮೆ ಕೃಷಿಗೆ ನೀರು ಉಪಯೋಗಿಸುವಂತೆ ಮೆಸ್ಕಾಂ ಇಲಾಖೆ ತಾಕೀತು ಮಾಡಿದೆ.ಮಿತಗೊಳಿಸಿ: ಮುಂಡ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಬಳಿಯ 2 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಸಂಗ್ರಹಾಗಾರಕ್ಕೆಹಾಯಿಸಿ, ಶುದ್ಧೀಕರಿಸಿ ಕಾರ್ಕಳದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ವರೆಗೆ ನೀರನ್ನು ಜನ ಮಿತವಾಗಿ ಬಳಸಿಕೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ವಿನಂತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತೀ ನಿತ್ಯ ಬರುತ್ತಿದ್ದ ನೀರು ಇನ್ನು ಎರಡು ದಿನಕ್ಕೊಮ್ಮೆ ಪೂರೈಕೆ ಯಾದರು ಅಚ್ಚರಿಯಿಲ್ಲ.

ರಾಮ ಸಮುದ್ರ ಆಸರೆ: ಮುಂಡ್ಲಿ ಡ್ಯಾಂ ಬತ್ತಿದ ಬಳಿಕ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿರುವ ರಾಮ ಸಮುದ್ರದ ನೀರು ಇಡೀ ಪುರಸಭಾ ವ್ಯಾಪ್ತಿಗೆ ಆಧಾರವಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಪುರಸಭೆ ವ್ಯಾಪ್ತಿಯಲ್ಲಿ ರಾಮಸಮುದ್ರವೇ ಆಸರೆಯಾಗಿತ್ತು. ರಾಮ ಸಮುದ್ರ ದಲ್ಲಿ ಹೂಳು ತುಂಬಿದ್ದು ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ.

ಉಷ್ಣತೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ನೀರು ಮಿತವಾಗಿ ಬಳಸಬೇಕಾಗಿದೆ. ಮುಂಡ್ಲಿ ಡ್ಯಾಂ ನಲ್ಲಿ ನೀರಿನ ಸಾಮರ್ಥ್ಯ ಕುಸಿತ ವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗಲಿದೆ. ಪರ್ಯಾಯವಾಗಿ ರಾಮ ಸಮುದ್ರದ ನೀರನ್ನು ಜನತೆಗೆ ನೀಡುವಲ್ಲಿ ಸಿದ್ಧತೆಗಳು ನಡೆಯುತ್ತಿದೆ. । ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ