ತುಂಗಭದ್ರಾ ಜಲಾಶಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಕಾರ್ಮೋಡ

KannadaprabhaNewsNetwork | Published : Aug 15, 2024 1:54 AM

ಸಾರಾಂಶ

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಬಣ್ಣದ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ತುಂಗಭದ್ರಾ ಜಲಾಶಯದ ಸಂಭ್ರಮಕ್ಕೆ ಈ ಬಾರಿ ಕಾರ್ಮೋಡ ಕವಿದಿದೆ. ಲಕ್ಷಾಂತರ ಜನರು ಕಣ್ತುಂಬಿಕೊಳ್ಳುತ್ತಿದ್ದ ಆನಂದಕ್ಕೆ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಬಣ್ಣದ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ತುಂಗಭದ್ರಾ ಜಲಾಶಯದ ಸಂಭ್ರಮಕ್ಕೆ ಈ ಬಾರಿ ಕಾರ್ಮೋಡ ಕವಿದಿದೆ. ಲಕ್ಷಾಂತರ ಜನರು ಕಣ್ತುಂಬಿಕೊಳ್ಳುತ್ತಿದ್ದ ಆನಂದಕ್ಕೆ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

ಹೌದು, ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದಿರುವುದರಿಂದ ಈಗಾಗಲೇ ಜಲಾಶಯದಿಂದ ಬರೋಬ್ಬರಿ 25 ಟಿಎಂಸಿಗೂ ಅಧಿಕ ನೀರು ಬಿಡಲಾಗಿದ್ದು, ಜಲಾಶಯದಲ್ಲಿ ಕೇವಲ 80 ಟಿಎಂಸಿ ಮಾತ್ರ ಉಳಿದಿದ್ದು, ಸಂಭ್ರಮ ಮರೆಮಾಚಿದೆ.

ಅಷ್ಟೇ ಅಲ್ಲ, ದುರಸ್ತಿ ಕಾರ್ಯ ನಡೆದಿರುವುದರಿಂದ ಜಲಾಶಯ ವ್ಯಾಪ್ತಿಯಲ್ಲಿ ಜನರು ಬಾರದಂತೆ ಜಿಲ್ಲಾಧಿಕಾರಿ ನಿಷೇದಾಜ್ಞೆ ಹೇರಿರುವುದರಿಂದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮೌನ ಮನೆಮಾಡಿದೆ. ಜಲಾಶಯದ ಕೆಳಭಾಗದಲ್ಲಿರುವ ಸೇತುವೆ ಮೇಲೆ ನಿಂತು, ಜಲಾಶಯಕ್ಕೆ ಬಂದಿರುವ ವಿಪತ್ತು ಕುರಿತು ಅನೇಕರು ಖೇದ ವ್ಯಕ್ತಪಡಿಸಿ, ಮಮ್ಮಲ ಮರಗುತ್ತಿರುವುದು ಸಾಮಾನ್ಯವಾಗಿದೆ.

ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ದುರಂತದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಇಲ್ಲದಂತೆ ಆಗಿದೆ. ಬರಬಿದ್ದು, ಜಲಾಶಯದಲ್ಲಿನ ನೀರಿನ ಪ್ರಮಾಣ ಕಡಿಮೆ ಇದ್ದಾಗಲೂ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಾಂಕೇತಿಕವಾಗಿ ಕುಡಿಯುವ ನೀರಿನ ಉದ್ಧೇಶಕ್ಕಾಗಿ ಬಿಡಬೇಕಾದ ನೀರನ್ನು ಬಿಡುಗಡೆ ಮಾಡುವ ಮೂಲಕ ಸಂಭ್ರಮವನ್ನು ಕಣ್ತುಂಬಿಕೊಳ್ಳುವಂತೆ ಮಾಡುತ್ತಿದ್ದರು. ಆದರೆ, ಈ ಬಾರಿ ಅದಕ್ಕೂ ಅವಕಾಶ ಇಲ್ಲದಂತೆ ಆಗಿದೆ.

ನಿಷೇಧಾಜ್ಞೆ:

ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಭರದಿಂದ ಸಾಗಿರುವುದರಿಂದ ಜಲಾಶಯ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಆ. 20ರವರೆಗೂ ತುಂಗಭದ್ರಾ ಜಲಾಶಯದ ಎಡಭಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜಲಾಶಯ ವ್ಯಾಪ್ತಿಯಲ್ಲಿ ಯಾರಿಗೂ ಪ್ರವೇಶ ಇಲ್ಲ. ಹೀಗಾಗಿ, ಜಲಾಶಯ ವ್ಯಾಪ್ತಿಯಲ್ಲಿ ಈಗ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ. 80 ಟಿಎಂಸಿಗೆ ಕುಸಿದ ನೀರು:

ತುಂಗಭದ್ರಾ ಜಲಾಶಯದಿಂದ ಈಗ ನಿತ್ಯವೂ ಒಂದರಿಂದ ಒಂದುವರೆ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿರುವುದರಿಂದ ಜಲಾಶಯದಲ್ಲಿ ಬುಧವಾರ ಸಂಜೆಯ ವೇಳೆಗೆ ಜಲಾಶಯದಲ್ಲಿ 105 ಟಿಎಂಸಿ ಬದಲಾಗಿ 80 ಟಿಎಂಸಿಗೆ ಕುಸಿದಿದೆ.

ಜಲಾಶಯದಲ್ಲಿ ನೀರು ಸಂಗ್ರಹ ಕುಸಿಯುತ್ತಿದ್ದಂತೆ ರೈತರಲ್ಲಿ ಆತಂಕ ಹೆಚ್ಚಳವಾಗುತ್ತಿದೆ. ಈಗಾಗಲೇ ಭತ್ತ ನಾಟಿ ಮಾಡಿರುವ ರೈತರು, ಕ್ರಸ್ಟ್ ದುರಸ್ತಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ನದಿಯ ಮೂಲಕ ನೀರು ಹರಿದು ಹೋಗಿ, ಪೋಲಾಗುವುದನ್ನು ಕಂಡು ರೈತರು ಸೇರಿದಂತೆ ಸಾರ್ವಜನಿಕರು ಮಮ್ಮಲ ಮರಗುತ್ತಿದ್ದಾರೆ.

Share this article