ಮಂಗಳೂರು : ಕರ್ಣಾಟಕ ಬ್ಯಾಂಕ್ ಸ್ಥಿರ ಮತ್ತು ಭದ್ರವಾಗಿದೆ. ಬ್ಯಾಂಕಿನ ತಳಹದಿ ಭದ್ರವಾಗಿದ್ದು, ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ನಿರ್ದೇಶಕ ಪ್ರದೀಪ್ ಕುಮಾರ್ ಪಂಜ ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕಿನ ಉನ್ನತ ಆಡಳಿತದಲ್ಲಿ ಆಗಿರುವ ಬದಲಾವಣೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ಬ್ಯಾಂಕಿನ ಉನ್ನತ ಅಧಿಕಾರಿಗಳ ಬದಲಾವಣೆ ಸಾಮಾನ್ಯ ಪ್ರಕ್ರಿಯೆ ಆಗಿದೆ. ಇದು ಬ್ಯಾಂಕಿನ ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರದು. ಗ್ರಾಹಕರು ಅನಗತ್ಯವಾಗಿ ಗೊಂದಲ, ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದರು.
ಸಿಒಒ ನೇಮಕ:
ಕರ್ಣಾಟಕ ಬ್ಯಾಂಕ್ ನಿರ್ದೇಶಕರ ಮಂಡಳಿ ಎಂಡಿ ಮತ್ತು ಸಿಇಒ ಹಾಗೂ ಇ.ಡಿ. ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಬ್ಯಾಂಕಿನ ವಹಿವಾಟಿಗೆ ತೊಂದರೆಯಾಗದಂತೆ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಆಗಿ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ನೇಮಕ ಮಾಡಲಾಗಿದೆ. ರಾಜೀನಾಮೆ ನೀಡಿದ ಎಂಡಿ, ಸಿಇಒ ಮತ್ತು ಇ.ಡಿ. ಅವರ ಸ್ಥಾನಕ್ಕೆ ಶೋಧನಾ ಸಮಿತಿ ರಚಿಸಿ ಹೊಸದಾಗಿ ನೇಮಕಾತಿಗೆ ನಿರ್ಧರಿಸಲಾಗಿದೆ. ಅಲ್ಲಿವರೆಗೆ ಮಧ್ಯಂತರ ಎಂಡಿ, ಸಿಇಒ ನೇಮಕಾತಿಗೆ ಅನುಮತಿಸುವಂತೆ ಕೋರಿ ಆರ್‌ಬಿಐಗೆ ಮನವಿ ಮಾಡಲಾಗಿದೆ. 10-15 ದಿನಗಳ ಒಳಗೆ ಅನುಮತಿ ದೊರಕುವ ನಿರೀಕ್ಷೆ ಇದೆ ಎಂದರು.
ಗ್ರಾಹಕರ ವಿಶ್ವಾಸದ ಬ್ಯಾಂಕ್:
ಎಂಡಿ, ಸಿಇಒ ಮತ್ತು ಇಡಿ ರಾಜೀನಾಮೆ ಕಾರಣ ಬ್ಯಾಂಕಿನ ವಹಿವಾಟು ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಯಾವುದೇ ತೊಂದರೆ ಆಗಿಲ್ಲ. ಎಲ್ಲವೂ ಸುಸೂತ್ರವಾಗಿ ಎಂದಿನಂತೆಯೇ ಸಹಜವಾಗಿ ನಡೆಯುತ್ತಿದೆ. ದಿನದ ಮಟ್ಟಿಗೆ ಶೇರು ಪೇಟೆಯಲ್ಲಿ ಸಣ್ಣ ಪ್ರಮಾಣ ವ್ಯತ್ಯಯ ಉಂಟಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಈಗ ಎಲ್ಲವೂ ಸರಿಹೋಗಿದೆ. ಯಾವುದೇ ರೀತಿಯ ಅವ್ಯಹಾರಗಳು ಬ್ಯಾಂಕಿನಲ್ಲಿ ನಡೆದಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುದ್ದಿಗೆ ಮಹತ್ವ ಕೊಡಬೇಕಾಗಿಲ್ಲ. ಅಂತಹ ಸುದ್ದಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದೇವೆ ಎಂದರು.
101 ವರ್ಷ ಇತಿಹಾಸದ ಕರ್ಣಾಟಕ ಬ್ಯಾಂಕ್ ಗ್ರಾಹಕ ಬ್ಯಾಂಕ್ ಆಗಿದ್ದು, ಎಲ್ಲರ ಕುಟುಂಬದ, ಭಾರತದ ಬ್ಯಾಂಕ್ ಕೂಡ ಆಗಿದೆ. ಹಾಗಾಗಿ ಗ್ರಾಹಕರು ಬ್ಯಾಂಕಿನ ಬಗ್ಗೆ ಅಪನಂಬಿಕೆ ಹೊಂದದೆ, ಎಂದಿನಂತೆ ವಿಶ್ವಾಸದಲ್ಲಿ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು. ಈ ನಾಡಿನ ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಕರ್ಣಾಟಕ ಬ್ಯಾಂಕ್ ಯಾವತ್ತೂ ಮುಂಚೂಣಿಯಲ್ಲಿ ಇರುತ್ತದೆ ಎಂದು ಪ್ರದೀಪ್ ಕುಮಾರ್ ಪಂಜ ಹೇಳಿದರು.
ಬದಲಾವಣೆ ಸಾಮಾನ್ಯ:
ಬ್ಯಾಂಕಿನ ಉನ್ನತ ಅಧಿಕಾರಿಗಳ ಬದಲಾವಣೆ ಸಾಮಾನ್ಯ. ನಿರಂತರ ಯಾರೂ ಇರುವುದಿಲ್ಲ. ಈ ಬಾರಿ ಕೆಲವೊಂದು ಕಾರಣಕ್ಕೆ ಬೇಗನೆ ಬದಲಾವಣೆ ಮಾಡಲಾಗಿದೆ. ಮಧ್ಯಂತರ ಎಂಡಿ, ಸಿಇಒ ಬಂದ ಬಳಿಕ ಕಾಯಂ ಎಂಡಿ, ಸಿಇಒ ನೇಮಕ ಆಗಬಹುದು. ಬ್ಯಾಂಕಿನ ಹಿರಿಯ ಅಧಿಕಾರಿಗಳು ಅಥವಾ ಹೊರಗಿನವರನ್ನು ಎಂಡಿ, ಸಿಇಒ ಆಗಿ ಆಯ್ಕೆ ಮಾಡುತ್ತೇವೆ ಎಂದು ಈಗಲೇ ಹೇಳಲಾಗದು. ಆದರೆ ಬ್ಯಾಂಕಿನ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ತೀರ್ಮಾನಗಳನ್ನು ಆಡಳಿತ ಮಂಡಳಿ ತೆಗೆದುಕೊಳ್ಳುವುದಿಲ್ಲ. ಮುಂದೆ ಬ್ಯಾಂಕಿಗೆ ನೇಮಕಗೊಳ್ಳುವವರು ಸಾಕಷ್ಟು ಪರಿಣತಿ ಹೊಂದಿದ್ದು, ಹೊಸ ತಂತ್ರಜ್ಞಾನ, ನುರಿತ ಬ್ಯಾಂಕಿಂಗ್ ತಜ್ಞರಾಗಿ ಇರುವವರನ್ನೇ ಎಂಡಿ, ಸಿಇಒ ಆಗಿ ನೇಮಕ ಮಾಡಲಾಗುತ್ತದೆ ಎಂದರು.
4 ವರ್ಷಕ್ಕಾಗುವಷ್ಟು ಬಂಡವಾಳ!
101 ವರ್ಷ ಇತಿಹಾಸದ ಕರ್ಣಾಟಕ ಬ್ಯಾಂಕ್ ಮುಂದಿನ ನಾಲ್ಕು ವರ್ಷಕ್ಕೆ ಸಾಲುವಷ್ಟು ಬೃಹತ್ ಬಂಡವಾಳವನ್ನು ಹೊಂದಿದೆ. ದೃಢ ಬಂಡವಾಳ ಜೊತೆಗೆ ಆಧುನಿಕ ಕಾರ್ಯತಂತ್ರದ ಮೂಲಕ ಹಣಕಾಸಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಡಿಜಿಟಲ್ ಪರಿವರ್ತನೆಯಲ್ಲೂ ಬ್ಯಾಂಕ್ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ ಎಂದು ಚೇರ್‌ಮೇನ್ ಪ್ರದೀಪ್ ಕುಮಾರ್ ಪಂಜ ಹೇಳಿದರು.
ಕಳೆದ ಸಾಲಿನಲ್ಲಿ ಬ್ಯಾಂಕ್ ತೆರಿಗೆಯ ನಂತರ ₹1,272 ಕೋಟಿ ಲಾಭ ಹೊಂದಿದೆ. ಇಕ್ವಿಟಿ (ಆರ್‌ಒಇ) ಮೇಲಿನ ರಿಟರ್ನ್ ಶೇ.11.10 ಆಗಿದ್ದು, ಬಂಡವಾಳ ಸಮರ್ಪಕ ಅನುಪಾತ ಶೇ.19.9ರಲ್ಲಿದೆ. ಕಾಸಾ ಅನುಪಾತ ಶೇ.31.75 ಆಗಿದೆ. ಜಿಎನ್‌ಪಿಎ ಶೇ.3.08 ರಲ್ಲಿದೆ. ಬ್ಯಾಂಕ್ 22 ರಾಜ್ಯಗಳು ಮತ್ತು 2 ಯೂನಿಯನ್ ಪ್ರಾಂತ್ಯಗಳಲ್ಲಿ ಶಾಖೆಯನ್ನು ಹೊಂದಿದೆ. 13 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ಮತ್ತು 8,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ ಎಂದರು.
ತಂತ್ರಜ್ಞಾನದಲ್ಲಿನ ಹೂಡಿಕೆಗಳು ಸಹ ವೇಗ ಪಡೆದುಕೊಂಡಿವೆ. ಮೊಬೈಲ್ ಬ್ಯಾಂಕಿಂಗ್ ಫ್ಯಾಟ್‌ಫಾರ್ಮ್, ಎಂಎಸ್‌ಎಂಇ-ಕೇಂದ್ರಿತ ಡಿಜಿಟಲ್ ಉತ್ಪನ್ನಗಳು, ಯುಪಿಐ-ಲಿಂಕ್ಡ್ ಕ್ರೆಡಿಟ್ ಲೈನ್ ಮತ್ತು ಸಂಪತ್ತು ನಿರ್ವಹಣಾ ಇಂಟರ್ಫೇಸ್ ಅನ್ನು ಪ್ರಾರಂಭಿಸಲಾಗಿದೆ ಎಂದರು.
ಬ್ಯಾಂಕ್ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಮುನ್ನಡೆಯುತ್ತಿದ್ದು, ಮಹತ್ವಾಕಾಂಕ್ಷೆಯ ಡಿಜಿಟಲ್ ಸೌಲಭ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಬ್ಯಾಂಕಿನ ಬೆಳವಣಿಗೆಗೆ ಗ್ರಾಹಕರು, ಷೇರುದಾರರು ಕಾರಣರಾಗಿದ್ದು, ಎಲ್ಲರ ಹಿತಕಾಯಲು ಬದ್ಧರಾಗಿದ್ದೇವೆ.
-ಪ್ರದೀಪ್ ಕುಮಾರ್ ಪಂಜ, ಚೇರ್‌ಮೆನ್, ಕರ್ಣಾಟಕ ಬ್ಯಾಂಕ್.