ರಾಜ್ಯದಲ್ಲಿ ಎಣಿಕೆಗೆ ಸಿದ್ಧತೆ: 474 ಅಭ್ಯರ್ಥಿಗಳಿಗೆ ಡವಡವ

KannadaprabhaNewsNetwork | Updated : Jun 04 2024, 08:46 AM IST

ಸಾರಾಂಶ

ಬಿಜೆಪಿ- ಜೆಡಿಎಸ್‌ ಮೈತ್ರಿಗೆ ಭರ್ಜರಿ ಜಯ ಸಿಗುತ್ತಾ ಅಥವಾ ಗ್ಯಾರಂಟಿ ಸ್ಕೀಂಗಳು ಕಾಂಗ್ರೆಸ್‌ಗೆ ಮತ ತರುತ್ತವಾ ಎಂಬುದನ್ನು ಕಾದು ನೋಡಬೇಕಿದೆ.

 ಬೆಂಗಳೂರು : ತೀವ್ರ ಕುತೂಹಲ ಮೂಡಿಸಿರುವ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಕೇಂದ್ರ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ.ಬೆಳಗ್ಗೆ 7.45ರ ಸುಮಾರಿಗೆ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಂ ತೆರೆಯಲಾಗುತ್ತದೆ. 

ಬಳಿಕ ಮತ ಎಣಿಕೆ ಕೊಠಡಿಗೆ ಇವಿಎಂಗಳನ್ನು ಕೊಂಡೊಯ್ದು ಮತ ಎಣಿಕೆ ಪ್ರಾರಂಭಿಸಲಾಗುತ್ತದೆ. ಮೊದಲು ಅಂಚೆ ಮತಗಳ ಎಣಿಕೆ ಆರಂಭವಾಗಲಿದ್ದು, ನಂತರದಲ್ಲಿ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ. ರಾಜ್ಯದಲ್ಲಿ ಕಣಕ್ಕಿಳಿದಿರುವ ಒಟ್ಟು 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ವದಂತಿಗಳು ಹಬ್ಬಿರುವುದರಿಂದ ಕುತೂಹಲ ಹೆಚ್ಚಿಸಿದೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಈ ಚುನಾವಣೆಯಲ್ಲಿ ಆ ಯೋಜನೆಗಳು ಕೈಹಿಡಿಯುತ್ತವೆಯೇ, ಗೆಲುವಿಗೆ ಸಹಕಾರಿಯಾಗುತ್ತವೆಯೇ ಎಂಬ ಕುತೂಹಲವೂ ಇದೆ.ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮಾಜಿ ಸಚಿವರು ಕಣಕ್ಕಿಳಿದಿದ್ದಾರೆ.

 ಜತೆಗೆ ಹಾಲಿ ಅನೇಕ ಸಚಿವರ ಪುತ್ರ, ಪುತ್ರಿ, ಪತ್ನಿ, ಸಹೋದರರು ಅಭ್ಯರ್ಥಿಗಳಾಗಿ ತಮ್ಮ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ. ಜತೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿ ಟಿಕೆಟ್ ಸಿಗದೇ ಇದ್ದುದರಿಂದ ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರೆಲ್ಲರ ಭ‍ವಿಷ್ಯ ಮಂಗಳವಾರ ಹೊರಬೀಳಲಿದೆ.ಅತ್ಯಾಚಾರ ಆರೋಪ ಹೊತ್ತಿರುವ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಇಡೀ ರಾಷ್ಟ್ರದ ದೃಷ್ಟಿ ಈ ಕ್ಷೇತ್ರದ ಫಲಿತಾಂಶದತ್ತ ನೆಟ್ಟಿದೆ.

ರಾಜ್ಯದ 28 ಕ್ಷೇತ್ರದಲ್ಲಿಯೂ ಮತಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತ ಎಣಿಕೆ ಕೇಂದ್ರಗಳಿಗೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಪ್ರತಿ ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಲು ಅವಕಾಶವಿದ್ದು, ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್‌ಗಳನ್ನು ಹಾಕಲಾಗಿದೆ. ಇವಿಎಂಗಳ ಎಣಿಕೆಗಾಗಿ ಕನಿಷ್ಠ 8 ಹಾಲ್‌ಗಳಿಂದ ಗರಿಷ್ಠ 16 ಹಾಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 20 ರಿಂದ 25 ಸುತ್ತಿನವರೆಗೆ ಮತ ಎಣಿಕೆ ನಡೆಯಲಿದೆ.ಚುನಾವಣಾ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆಯ ಸುತ್ತಲೂ ಬಿಗಿ ಪೊಲೀಸ್‌ ವ್ಯವಸ್ಥೆ, ಕೇಂದ್ರ ಮತ್ತು ರಾಜ್ಯ ಮೀಸಲು ಪಡೆಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಏ.26ರಂದು ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿ.ಸೋಮಣ್ಣ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಕಾಂಗ್ರೆಸ್ಸಿನ ಡಿ.ಕೆ.ಸುರೇಶ್, ಜಯಪ್ರಕಾಶ್ ಹೆಗ್ಡೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 247 ಅಭ್ಯರ್ಥಿಗಳು ಕಣದಲ್ಲಿದ್ದರೆ, ಮೇ 7ರಂದು ನಡೆದ ಎರಡನೇ ಹಂತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಭಾ ಮಲ್ಲಿಕಾರ್ಜುನ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 227 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಒಟ್ಟು 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮಂಗಳವಾರ ತೀರ್ಮಾನವಾಗಲಿದೆ.ಮತ ಎಣಿಕೆ ಕೇಂದ್ರಗಳು

ಚಿಕ್ಕೋಡಿ ಕ್ಷೇತ್ರ - ಸಿಟಿಇ ಸೊಸೈಟಿ ಆರ್‌.ಟಿ.ಪಿಯು ಕಾಲೇಜು,

ಬೆಳಗಾವಿ ಕ್ಷೇತ್ರ - ರಾಣಿ ಪಾರ್ವತಿ ದೇವಿ ಕಾಲೇಜು,

ಬಾಗಲಕೋಟೆ ಕ್ಷೇತ್ರ - ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ,

ಬಿಜಾಪುರ ಕ್ಷೇತ್ರ - ಸೈನಿಕ ಶಾಲೆ,

ಗುಲ್ಬರ್ಗಾ ಕ್ಷೇತ್ರ - ಗುಲ್ಬರ್ಗಾ ವಿಶ್ವವಿದ್ಯಾಲಯ,

ರಾಯಚೂರು ಕ್ಷೇತ್ರ - ಶೇಠ್ ರಿಕ್ಬಚಂದ್ ಪರಸ್ಮಲ್ ಸುಖಾನಿ ಪಿಯು ಕಾಲೇಜು,

ಬೀದರ್‌ ಕ್ಷೇತ್ರ - ಬಿವಿಬಿ ಕಾಲೇಜು,

ಕೊಪ್ಪಳ ಕ್ಷೇತ್ರ - ಶ್ರೀಗವಿಸಿದ್ದೇಶ್ವರ್ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು,

ಬಳ್ಳಾರಿ ಕ್ಷೇತ್ರ - ರಾವ್ ಬಹದ್ದೂರು ವೈ.ಮಹಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು,

ಹಾವೇರಿ ಕ್ಷೇತ್ರ - ಸರ್ಕಾರಿ ಎಂಜಿನಿಯರಿಂಗ್‌,

ಧಾರವಾಡ ಕ್ಷೇತ್ರ - ಕೃಷಿ ವಿಜ್ಞಾನ ವಿಶ್ವವಿದ್ಯಾಲಯ,

ಉತ್ತರ ಕನ್ನಡ ಕ್ಷೇತ್ರ - ಡಾ.ಎ.ವಿ.ಬಳಿಗ ಕಲೆ ಮತ್ತು ವಿಜ್ಞಾನ ಕಾಲೇಜು,

ದಾವಣಗೆರೆ ಕ್ಷೇತ್ರ - ದಾವಣಗೆರೆ ವಿಶ್ವವಿದ್ಯಾಲಯ,

ಶಿವಮೊಗ್ಗ ಕ್ಷೇತ್ರ - ಸಹ್ಯಾದ್ರಿ ಕಲೆ ಕಾಲೇಜು,

ಉಡುಪಿ-ಚಿಕ್ಕಮಗಳೂರು ಕ್ಷೇತ್ರ - ಸೆಂಟ್‌ ಸಿಸಿಲಿ ಗ್ರೂಪ್‌ ಆಫ್‌ ಇನ್ಸ್‌ಟ್ಯೂಟ್‌,

ಹಾಸನ ಕ್ಷೇತ್ರ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು,

ದಕ್ಷಿಣ ಕನ್ನಡ ಕ್ಷೇತ್ರ - ನ್ಯಾಷನಲ್‌ ತಾಂತ್ರಿಕ ಸಂಸ್ಥೆ (ಸುರತ್ಕಲ್‌),

ಚಿತ್ರದುರ್ಗ ಕ್ಷೇತ್ರ - ತುಮಕೂರು ಸರ್ಕಾರಿ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು,

ಮಂಡ್ಯ ಕ್ಷೇತ್ರ - ಮಂಡ್ಯ ವಿಶ್ವವಿದ್ಯಾಲಯ,

ಮೈಸೂರು ಕ್ಷೇತ್ರ - ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು,

ಚಾಮರಾಜನಗರ ಕ್ಷೇತ್ರ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು,

ಬೆಂಗಳೂರು ಗ್ರಾಮಾಂತರ ಕ್ಷೇತ್ರ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು,

ಬೆಂಗಳೂರು ಉತ್ತರ ಕ್ಷೇತ್ರ - ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌,

ಬೆಂಗಳೂರು ಕೇಂದ್ರ ಕ್ಷೇತ್ರ - ಮೌಂಟ್‌ ಕಾರ್ಮಲ್‌ ಪಿಯು ಕಾಲೇಜು,

ಬೆಂಗಳೂರು ದಕ್ಷಿಣ ಕ್ಷೇತ್ರ - ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು,

ಚಿಕ್ಕಬಳ್ಳಾಪುರ ಕ್ಷೇತ್ರ - ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜು,

ಕೋಲಾರ ಕ್ಷೇತ್ರ - ಸರ್ಕಾರಿ ಪದವಿ ಕಾಲೇಜು.

Share this article