ಕನ್ನಡಪ್ರಭ ವಾರ್ತೆ ಬೆಳಗಾವಿನಮ್ಮ ಕರ್ನಾಟಕ ಇಡೀ ದೇಶದಲ್ಲಿ ಅತೀ ಹೆಚ್ಚು ಜೀವ ವೈವಿದ್ಯತೆ ಹೊಂದಿರುವ ರಾಜ್ಯ ಎಂದು ಬೆಳಗಾವಿ ಅರಣ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾನ ಹೇಳಿದರು.
ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯ ಸಮೀಪದ ಚಿಗರಿ ಮಾಳದಲ್ಲಿ ಅರಣ್ಯ ಇಲಾಖೆಯಿಂದ ಶನಿವಾರ ಆಯೋಜಿಸಿದ ಅಂತಾರಾಷ್ಟ್ರೀಯ ಕತ್ತೆಕಿರುಬ (ಹೈನಾ) ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ನಿಸರ್ಗದ ವರವಾಗಿದ್ದು, ಈ ಸಂಪತ್ತನ್ನು ಉಳಿಸಿ ಬೆಳೆಸುವ ಸಂಕಲ್ಪ ಪ್ರತಿಯೊಬ್ಬ ನಾಗರೀಕನ ಹೆಗಲ ಮೇಲಿದೆ ಎಂದರು.ಕಾಡಿನತ್ತ ನಮ್ಮ ಹೆಜ್ಜೆಗಳು ಬೇಡ. ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಲೇ ಇರುವುದಕ್ಕೆ ನಾವೇ ಕಾರಣ. ನಾಡಿನಲ್ಲಿ ನಾವಿದ್ದರೇ ಪ್ರಾಣಿ ಕಾಡಿನಲ್ಲಿರಲು ಸಾಧ್ಯ. ಪ್ರಾಣಿಗಳ ಮೇಲೆ ದಯೆ ಇರಲಿ. ಈ ಕುರಿತ ಜನಜಾಗೃತಿ ಹೆಚ್ಚೆಚ್ಚು ಮೂಡಿ ಬರಲಿ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ ಕಲ್ಲೋಳಕರ ಮಾತನಾಡಿ, ಎಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆಂದು ಎಲ್ಲರಿಗೂ ತಿಳಿದಿರಬೇಕು. ನಮ್ಮ ಮೋಜಿಗಾಗಿ ಕಾಡು ಪ್ರಾಣಿಗಳ ಮೇಲೆ ದೌರ್ಜನ್ಯ ಎಸುಗುವುದು ಬೇಡ. ಪ್ರಾಣಿಗಳಿದ್ದರೇ ಮಾತ್ರ ಅರಣ್ಯ. ಅರಣ್ಯವಿದ್ದರೇ ಮಾತ್ರ ನಮ್ಮ ಉಸಿರು. ಕತ್ತೆಕಿರುಬ ಪರಿಸರದ ಅತ್ಯುತ್ತಮ ಸ್ನೇಹಿತ ಎಂದರು.ವನ್ಯಜೀವಿ ಉತ್ಸಾಹಿ ಜೆ.ಪಿ.ಅಮಿತರಾವ್ ಮತ್ತು ಡಾ.ಪ್ರಭು ಪ್ರಸಾದರನ್ನು ಸನ್ಮಾನಿಸಿ, ಅಭಿನಂದಿಸಿದರು. ಡಾ.ಡಿ.ಎನ್.ಮಿಸಾಳೆ ಕತ್ತೆಕಿರುಬ ಜೀವನಶೈಲಿ ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಇಲಾಖಾಧಿಕಾರಿಗಳಾದ ಕೆ.ಎಸ್.ಗೊರವರ, ಶಿವರುದ್ರಪ್ಪ ಕಬಾಡಗಿ, ಎಂ.ಬಿ.ಕುಸನಾಳ, ಸಂಗಮೇಶ್ ಪ್ರಭಾಕರ, ಶಿವಾನಂದ ನಾಯಿಕವಾಡಿ, ಜಗದೀಶ ಮಠದ, ವನ್ಯಜೀವಿ,ಪರಿಸರ ವೇದಿಕೆಯ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ, ಪಾಂಡುರಂಗ ಸೇರಿದಂತೆ ಹಿರಿಯ ಅಧಿಕಾರಿಗಳು, ಪರಿಸರ ಪ್ರೇಮಿಗಳಿದ್ದರು.
ಇದೇ ಸಂದರ್ಭದಲ್ಲಿ ಕತ್ತೆಕಿರುಬ ಜೀವನಶೈಲಿ ಕುರಿತ ಸಾಕ್ಷ್ಯ ಚಿತ್ರ ತೋರಿಸಲಾಯಿತು. ಉಮಾಪತಿ ನಿರೂಪಿಸಿ, ವಂದಿಸಿದರು.ಕೋಟ್...
ಭಗವಂತನ ಈ ಸೃಷ್ಟಿಯಲ್ಲಿ ಅಮಿತ ಜೀವರಾಶಿ ಇದೆ. ಸುಂದರ ಪರಿಸರ ಕಾಯುವ ಕಾಡುಪ್ರಾಣಿ ಕತ್ತೆಕಿರುಬ. ಆ ಪ್ರಾಣಿ ಪರಿಸರಕ್ಕೆ ಅತ್ಯುತ್ತಮ ಕೊಡುಗೆ ಕೊಡುವ ಏಕೈಕ ಪ್ರಾಣಿ ಆಗಿದೆ.-ಮಂಜುನಾಥ ಚೌಹಾನ, ಬೆಳಗಾವಿ ಅರಣ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.