ಮಹಾ ಚುನಾವಣಾ ಅಖಾಡಕ್ಕಿಳಿದ ಕರ್ನಾಟಕ ನಾಯಕರು

KannadaprabhaNewsNetwork |  
Published : Nov 18, 2024, 12:01 AM IST
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ವಿಧಾನಸಭೆ ಕ್ಷೇತ್ರದಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಅಖಾಡ ಕೂಡ ರಂಗೇರಿದೆ. ಗಡಿಭಾಗದಲ್ಲಿರುವ ಕನ್ನಡಿಗರ ಮತಬೇಟೆಗೆ ಕರ್ನಾಟಕದ ಕಾಂಗ್ರೆಸ್‌, ಬಿಜೆಪಿ ನಾಯಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕದ ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಬಂತೆಂದರೆ ಭಾಷೆಯ ವಿಷಯವೂ ಮುನ್ನೆಲೆಗೆ ಬರುತ್ತದೆ. ಆದರೆ, ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಬಂದರೆ ಆ ರಾಜ್ಯದ ಗಡಿಗಳಲ್ಲಿರುವ ಮತದಾರರ ಮನವೊಲಿಕೆಗೆ ಕರ್ನಾಟಕದ ನಾಯಕರೂ ಬೇಕು. ಇದು ಪ್ರತಿಬಾರಿಯ ಚುನಾವಣೆ ವೇಳೆ ಕಂಡುಬರುವ ಚಿತ್ರಣ.

ಅದರಂತೆ ಈಗ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಚುನಾವಣೆ ಅಖಾಡ ಕೂಡ ರಂಗೇರಿದೆ. ಗಡಿಭಾಗದಲ್ಲಿರುವ ಕನ್ನಡಿಗರ ಮತಬೇಟೆಗೆ ಕರ್ನಾಟಕದ ಕಾಂಗ್ರೆಸ್‌, ಬಿಜೆಪಿ ನಾಯಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಕರ್ನಾಟಕ- ಮಹಾರಾಷ್ಟ್ರ ಉಭಯ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಪುಣೆ, ಸತಾರಾ, ಸಾಂಗಲಿ, ಕೊಲ್ಲಾಪುರ ಹಾಗೂ ಸೊಲ್ಲಾಪುರ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದ ನಾಯಕರನ್ನೇ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈಗ ಕರ್ನಾಟಕ ನಾಯಕರ ಹವಾ ಜೋರಾಗಿದೆ.

ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಕಾಂಗ್ರೆಸ್‌ ನಾಯಕರ ದಂಡು ಶುಕ್ರವಾರ ಮಹಾರಾಷ್ಟ್ರಕ್ಕೆ ಲಗ್ಗೆ ಇಟ್ಟಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ವಿಧಾನಸಭೆ ಕ್ಷೇತ್ರದ ಸಂಕ್ ಗ್ರಾಮದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾ ವಿಕಾಸ ಅಘಾಡಿ ಅಭ್ಯರ್ಥಿಗಳ ಗೆಲುವಿಗೆ ಕರೆ ನೀಡಿದರು. ಸಚಿವ ಎಂ.ಬಿ.ಪಾಟೀಲ, ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ. ಪಾಟೀಲಲ ಕೂಡ ಉಪಸ್ಥಿತರಿದ್ದರು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷದ ನಾಯಕರು ಗಡಿಭಾಗದಲ್ಲೇ ಬೀಡು ಬಿಟ್ಟಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹರಸಾಹಸ ಮಾಡುತ್ತಿದ್ದಾರೆ.

ಗಡಿಭಾಗದಲ್ಲಿರುವ ಕನ್ನಡಿಗರನ್ನೇ ಗುರಿಯಾಗಿಸಿಕೊಂಡು ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ಕೆಲವರು ಮರಾಠಿ ಭಾಷೆಯ ಜೊತೆಗೆ ಕನ್ನಡದಲ್ಲೂ ಮತಯಾಚನೆ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ರಾಜ್ಯ ಮುಖಂಡರಾದ ಸಿ.ಟಿ. ರವಿ, ಮಾಜಿ ಶಾಸಕ ಸಂಜಯ ಪಾಟೀಲ ಕೊಲ್ಲಾಪುರ, ಶಾಸಕ ಅಭಯ ಪಾಟೀಲ, ಅನಿಲ ಬೆನಕೆ ಸಾಂಗಲಿ, ಸೊಲ್ಲಾಪುರ ಜಿಲ್ಲೆಯಲ್ಲಿ ಈರಣ್ಣ ಕಡಾಡಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಬಿಜೆಪಿ ನಾಯಕರು ಸ್ಥಳದಲ್ಲೇ ಬೀಡುಬಿಟ್ಟು ಅಬ್ಬರದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಸ್ವಚ್ಛತಾ ಅಭಿಯಾನ ಮೂಲಕ ವಿಭಿನ್ನವಾಗಿ ಗಮನ ಸೆಳೆದು ಮತಯಾಚನೆ ಮಾಡಿದ್ದಾರೆ. ಸಾಂಗಲಿ ಪ್ರಮುಖ ವೃತ್ತಗಳಲ್ಲಿ ಸುಣ್ಣ ಬಣ್ಣ ಬಳಿದು ಗಮನ ಸೆಳೆದಿದ್ದಾರೆ.

ಪುಣೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಎಂ.ಬಿ. ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕೊಲ್ಲಾಪುರ ಹಾತಕಣಗಲೇ ಕ್ಷೇತ್ರದಲ್ಲಿ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳಕರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಹ ಅಖಾಡಕ್ಕೆ ಧುಮುಕಿದ್ದಾರೆ. ಕರ್ನಾಟಕ ಗಡಿಗೆ ಹೊಂದಿಕೊಂಡಂತಿರುವ ಚಂದಗಡ ವಿಧಾನಸಭಾ ಕ್ಷೇತ್ರದ ತುಡಯೆ ಗ್ರಾಮದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಅಭ್ಯರ್ಥಿ ನಂದಾತಾಯಿ ಕುಪೆಕರ್ ಪರ ಸಚಿವೆ ಪ್ರಚಾರ ನಡೆಸಿದರು. ಅವರ ಪುತ್ರ ಮೃಣಾಲ ಹೆಬ್ಬಾಳಕರ ಕೂಡ ಪ್ರಚಾರ ನಡೆಸುತ್ತಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ