1947ಕ್ಕೆ ಮುನ್ನ ಮಹಾರಾಷ್ಟ್ರದಲ್ಲಿ ಇತ್ತು ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್‌

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 02:40 PM IST
Lakshmi Hebbalkar

ಸಾರಾಂಶ

ಬೆಳಗಾವಿ ಜಿಲ್ಲೆಯು ಸ್ವತಂತ್ರ ಪೂರ್ವದಲ್ಲಿ ಮಹಾರಾಷ್ಟ್ರದ ಭಾಗವಾಗಿತ್ತು. ಆದರೆ ನಾವೆಲ್ಲ ಈಗ ಅನ್ಯೂನ್ಯವಾಗಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲೆ ಕಾರದಗಾ ಗ್ರಾಮದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು, ‘ಬೆಳಗಾವಿ’ ವಿಚಾರಕ್ಕೆ ಆಡಿದ ಮಾತು ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಮಾತಿನ ಭರದಲ್ಲಿ ‘ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು’ಎಂದು ಅವರು ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರೆ, ಆಡಳಿತ ಪಕ್ಷದ ನಾಯಕರು, ಸಚಿವರು ಹೆಬ್ಬಾಳ್ಕರ್‌ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚೆತ್ತ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟೀಕರಣ ನೀಡಿದ್ದು, ತಾವು ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕು. ಹಿಂದಿನಿಂದಲೂ ಕನ್ನಡಿಗರು-ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. 

ಸಚಿವರು ಹೇಳಿದ್ದೇನು?
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾದಲ್ಲಿ ಭಾನುವಾರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಸಚಿವರು, ಕನ್ನಡ ಭಾಷೆಗೆ ಬಹಳ ವರ್ಷದ ಇತಿಹಾಸವಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ನಾವೆಲ್ಲ ಈ ನಾಡಿನಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು. ಆಗ ನಾವೆಲ್ಲ ಅನ್ಯೋನ್ಯವಾಗಿದ್ದೆವು ಎಂದು ಹೇಳಿದ್ದರು.

ಸಚಿವರ ಸ್ಪಷ್ಟನೆ: ವಿವಾದದ ಬೆನ್ನಲ್ಲೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಚಿವರು, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು. ಹಿಂದಿನಿಂದಲೂ ಕನ್ನಡಿಗರು-ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. 

ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಾಗಿ, ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕು. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು. ನಾನು ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಭಾಗವಹಿಸಿದ್ದೆ. 

ಗಡಿ ಭಾಗದಲ್ಲಿ ಇಷ್ಚೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು-ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ ಎಂದಿದ್ದಾರೆ.

ಬೆಳಗಾವಿ ಹಿಂದೆ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಯಾರಾದರೂ ಹೇಳಿದ್ದರೆ ಅದು ತಪ್ಪು ಮಾಹಿತಿ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದ್ದಾರೆ. ಬೆಳಗಾವಿ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನೀಡಿದ ಹೇಳಿಕೆ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್‌ ಆ ರೀತಿ ಹೇಳಲು ಸಾಧ್ಯವೇ ಇಲ್ಲ ಎಂದೂ ಹೇಳಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ