ರಾಮನಗರ: ದೇಶದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಕರ್ನಾಟಕದ ಸಾಧನೆ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ. ಜ್ಞಾನಾಧಾರಿತ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪತ್ತು, ವೈಶಿಷ್ಟ ಪೂರ್ಣ ಸಾಮಾಜಿಕ ಚಿಂತನೆ, ಪ್ರಯೋಗಶೀಲ ಆಡಳಿತ ಕರ್ನಾಟಕದ ಹೆಗ್ಗುರುತಾಗಿದೆ ಎಂದರು.ಸ್ವಾತಂತ್ರ್ಯ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರು ಅವರಿಂದ ಇಲ್ಲಿಯವರೆಗೆ ಎಲ್ಲಾ ಪ್ರಧಾನ ಮಂತ್ರಿಗಳು ಸಂವಿಧಾನದಲ್ಲಿನ ಮುಖ್ಯ ಅಂಶಗಳನ್ನು ಈಡೇರಿಸುತ್ತಾ, ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ, ರಾಜ್ಯವನ್ನಾಳಿದ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಅವರಿಂದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರೆಗೂ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಭಾರತವು ಸ್ವಾತಂತ್ರ್ಯ ನಂತರ 1950 ರ ಜನವರಿ 26ರಂದು ತನ್ನದೇ ಸಂವಿಧಾನ ಜಾರಿಗೊಳಿಸಿ ಸ್ವತಂತ್ರ ಗಣತಂತ್ರ ರಾಷ್ಟ್ರವಾಯಿತು. ಇದರಿಂದಾಗಿ ಜನವರಿ 26, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕು. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾತ್ಮ ಗಾಂಧೀಜಿ ಮತ್ತು ಇತರ ದೇಶ ಪ್ರೇಮಿಗಳು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಲೇಬೇಕು ಎಂದು ತಿಳಿಸಿದರು.ಜಗತ್ತಿಗೆ ಮಾತೃಪ್ರೇಮ, ಪ್ರಜ್ಞೆ, ಸಮತೆ ಮತ್ತು ಮಮತೆಯನ್ನು ಬೋಧಿಸಿದ ಪರಂಪರೆ ನಮ್ಮದು. ರಾಜಪ್ರಭುತ್ವ ಮತ್ತು ಉಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ, ಪ್ರಜೆಗಳೇ ಪ್ರಭುಗಳು ಎಂದು ಭಾವಿಸಿರುವ ಹಾಗೂ ಹಲವು ಧರ್ಮಗಳು ಮತ್ತು ಆಚರಣೆಗಳನ್ನು ಒಂದೇ ಮಣ್ಣಿನಲ್ಲಿ ಪೋಷಿಸುತ್ತಿರುವ ದೇಶ ನಮ್ಮದಾಗಿದೆ.
ಇಂತಹ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಜನಪರಂಪರೆಯನ್ನು ಧೀರ್ಘಕಾಲ ಉಳಿಸಿ ಬೆಳೆಸಿಕೊಂಡು ಬಾಳಲು ನಮ್ಮ ಭಾರತೀಯ ಸಂವಿಧಾನ ದಾರಿ ದೀಪವಾಗಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟು ದೇಶದ ಮುನ್ನಡೆಗೆ ದಾರಿದೀಪ ತೋರಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೃತಜ್ಞತಾ ಭಾವದಿಂದ ಸ್ಮರಿಸೋಣ ಎಂದು ರಾಮಲಿಂಗಾರೆಡ್ಡಿ ಹೇಳಿದರು.ಸಂವಿಧಾನ ರಚನೆಗೂ ಮುನ್ನ ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ವರೀತಿಯಲ್ಲಿ ತುಳಿತಕ್ಕೊಳಗಾದ ಜನರನ್ನು ಸಂವಿಧಾನದ ಆಶಯದಂತೆ ಮೇಲೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನು ಸಮಾನ ರೀತಿಯಿಂದ ಕಂಡು ಎಲ್ಲರಿಗೂ ಸಮಾನ ಅವಕಾಶಗಳು ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಂಚವಾರ್ಷಿಕ ಯೋಜನೆಗಳು, ಭೂ ಸುಧಾರಣಾ ಕಾಯ್ದೆ, ಬ್ಯಾಂಕುಗಳ ರಾಷ್ಟ್ರೀಕರಣದಂತಹ ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಅವಕಾಶ ವಂಚಿತರಿಗೆ ಸಕಲವು ದೊರಕುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮವಹಿಸುತ್ತಿವೆ ಎಂದರು.
ಪೊಲೀಸ್ ಇಲಾಖೆ ಹಾಗೂ ಶಾಲಾ ವಿದ್ಯಾರ್ಥಿಗಳು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಸಚಿವ ರಾಮಲಿಂಗಾರೆಡ್ಡಿ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.ಶಾಸಕ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಇತರರಿದ್ದರು.
26ಕೆಆರ್ ಎಂಎನ್ 3,4.ಜೆಪಿಜಿ3.ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು.
4.ಪಥಸಂಚಲನ ತಂಡಗಳಿಗೆ ಸಚಿವ ರಾಮಲಿಂಗಾರೆಡ್ಡಿ ಗೌರವ ಸಲ್ಲಿಸಿದರು.