ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿರುವ ಉತ್ತರ ಕರ್ನಾಟಕ ಭಕ್ತರ ಆರಾಧ್ಯದೈವ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಜರುಗುವ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.ಮೈಲಾರಲಿಂಗೇಶ್ವರ ಜಾತ್ರೆಗೆ ತಾಲೂಕು ಹಾಗೂ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಅತ್ಯಂತ ಸಡಗರ, ಸಂಭ್ರಮದಿಂದ ಫೆ. 16ರಂದು ದೇವಸ್ಥಾನ ಆವರಣದಲ್ಲಿ ಹಾಲು ಉಕ್ಕಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಫೆ. 26ರಂದು ಕಾರ್ಣಿಕೋತ್ಸವದ ಹಿನ್ನೆಲೆ ತ್ರಿಶೂಲ ಪೂಜೆಯನ್ನು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮತ್ತು ಅಧಿಕಾರಿಗಳು ಹಾಗೂ ಬಾಬುದಾರರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಕಾರ್ಣಿಕದ ಮಹತ್ವ: ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕಕ್ಕೆ ಹೆಚ್ಚು ಮಹತ್ವವಿದೆ. ನಾಡಿನ ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಸೇರಿದಂತೆ ನಾನಾ ಕ್ಷೇತ್ರಗಳ ಭವಿಷ್ಯ ನುಡಿ ಸಾರುವ ಕಾರ್ಣಿಕೋತ್ಸವವು ಫೆ. 26ರಂದು ಸಂಜೆ 4.30ಕ್ಕೆ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ನಡೆಯಲಿದೆ.ಮೈಲಾರಲಿಂಗೇಶ್ವರನಿಗೆ ಲಕ್ಷಾಂತರ ಭಕ್ತರು ಹರಕೆ ಹೊತ್ತು ಪಾದಯಾತ್ರೆ ಮಾಡುತ್ತಿದ್ದಾರೆ. ಭರತ ಹುಣ್ಣಿಮೆಯ ದಿನದಂದು ದೇವಸ್ಥಾನದಲ್ಲಿರುವ ಉದ್ಭವ ಲಿಂಗುವಿಗೆ ವಿವಿಧ ಅಭಿಷೇಕ, ಅರ್ಚನೆ ಪೂಜೆ ಮಾಡಲಾಯಿತು. ಆದರೆ, ದೇವಸ್ಥಾನದ ವತಿಯಿಂದ ದೇವರಿಗೆ ನೈವೇದ್ಯ ಅರ್ಪಿಸುವುದಿಲ್ಲ. ಗ೦ಟೆ, ಮ೦ಗಳಾರತಿ ಮಾಡುವುದಿಲ್ಲ. ಕಾರಣ ಡೆಂಕಣಮರಡಿಯಲ್ಲಿ ಮೈಲಾರಲಿಂಗೇಶ್ವರನು ಮಲ್ಲಾಸುರ, ಮಣಿಕಾಸುರೊ೦ದಿಗೆ ಯುದ್ಧ ಮಾಡುತ್ತಿರುವ ಹಿನ್ನೆಲೆ ಭಕ್ತರು ಶಾಂತಿಯಿ೦ದ ಮೌನವಾಗಿರಬೇಕಾಗುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ದೇವಸ್ಥಾನ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್.
ಭರತ ಹುಣ್ಣಿಮೆಯ ದಿನದಂದು ದೇವಸ್ಥಾನದ ಹುಂಡಿಗಳಿಗೆ ಹಾಗೂ ವಿವಿಧ ಕಡೆ ಅಳವಡಿಸಿದ ವಿಶೇಷ ಹುಂಡಿಗಳಿಗೆ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಕಾರ್ಣಿಕೋತ್ಸವದ ಹಿನ್ನೆಲೆ: ಪುರಾಣದ ಪ್ರಕಾರ ಋಷಿಮುನಿಗಳಿಗೆ ಮಣಿಕಾಸುರ ಮಲ್ಲಾಸುರರೆಂಬ ಅಸುರರು ಕಾಟ ಕೊಡುತ್ತಿದ್ದರು. ಆಗ ಋಷಿ ಮುನಿಗಳು ಶಿವನ ಬಳಿ ಕಾಟದ ಕುರಿತು ಭಿನ್ನವಿಸಿಕೊಂಡಾಗ ರಾಕ್ಷಸರ ಸಂಹಾರಕ್ಕಾಗಿ ಶಿವ (ಮೈಲಾರಲಿಂಗ) ಪಾರ್ವತಿ (ಗ೦ಗಿಮಾಳಮ್ಮ) ರೂಪ ತಾಳಿ ಮೈಲಾರದ ಡೆಂಕಣಮರಡಿಯಲ್ಲಿ ರಾಕ್ಷಸರ ಸಂಹಾರ ಮಾಡಿದರು.
ಮಣಿಕಾಸುರ ಮಲ್ಲಾಸುರರನ್ನು ಸಂಹಾರ ಮಾಡಿರುವ ಹಿನ್ನೆಲೆ ವಿಜಯೋತ್ಸವದ ಸವಿ ನೆನಪಿಗಾಗಿ ಶುಭ ನುಡಿಯನ್ನು ಹೇಳಲಾಗುತ್ತಿದೆ. ಅದೇ ಕಾರ್ಣಿಕೋತ್ಸವ ಎಂದು ಕರೆಯಲಾಗುತ್ತಿದೆ.