ಕಾರವಾರ: ಕಾರವಾರ ನಗರಸಭೆಯ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಯಶಸ್ವಿಯಾಗಿದೆ. ಅಧಿಕಾರಕ್ಕೇರಲು ಕಾಂಗ್ರೆಸ್ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿದೆ. ಕಾರವಾರ ನಗರಸಭೆ ಒಟ್ಟೂ ಸದಸ್ಯರ ಸಂಖ್ಯೆ 31. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸದಸ್ಯರು, ಜೆಡಿಎಸ್ 4 ಹಾಗೂ ಪಕ್ಷೇತರರು 5 ಸದಸ್ಯರಿದ್ದರು. ಬಿಜೆಪಿ ತನ್ನ ಸದಸ್ಯರನ್ನು ಗೋವಾದ ಕಾಣಕೋಣ ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಂಡರೆ, ಕಾಂಗ್ರೆಸ್ ಗೋವಾದ ಅಗುಂದಾದಲ್ಲಿ ತನ್ನ ಸದಸ್ಯರನ್ನು ಇಟ್ಟುಕೊಂಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈಗಾಗಲೆ ಈ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಅಂಕೋಲಾ ಪುರಸಭೆಯಲ್ಲೂ ಬಿಜೆಪಿ ಅಧಿಕಾರಕ್ಕೇರಿತ್ತು. ಶತಾಯಗತಾಯ ಕಾರವಾರ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಎಲ್ಲ ಕಸರತ್ತು ನಡೆಸಿತ್ತು.
ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪ್ರಕಾಶ ಪಿ. ನಾಯ್ಕ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿ, ಸ್ಪರ್ಧೆಗಿಳಿಸಿತು. ಜತೆಗೆ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರನ್ನು ಓಲೈಸುವ ಕಸರತ್ತು ನಡೆಸಿತು. ಆದರೆ ಏನೆಲ್ಲ ಪ್ರಯತ್ನ ಮಾಡಿದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗೆಲ್ಲುವಷ್ಟು ಸಂಖ್ಯಾಬಲವನ್ನು ಹೊಂದಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲುವಿನ ನಗೆ ಬೀರಿತು. ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನಗರಸಭೆ ಆಡಳಿತ ಮೈತ್ರಿಗೆ ಒಲಿಯಲು ರೂಪಿಸಿದ ತಂತ್ರ ಹಾಗೂ ಮೈತ್ರಿ ಸದಸ್ಯರು, ಪಕ್ಷೇತರ ಸದಸ್ಯರು ಕಾಂಗ್ರೆಸ್‌ನತ್ತ ವಾಲದಂತೆ ನೋಡಿಕೊಳ್ಳುವಲ್ಲಿ ಸಫಲರಾದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜೆಡಿಎಸ್‌ನ ಆನಂದ ಅಸ್ನೋಟಿಕರ್ ಎಲ್ಲರೂ ಮೈತ್ರಿಯ ಗೆಲುವಿಗೆ ಕೈಜೋಡಿಸಿದ್ದು ಫಲ ನೀಡಿತು.ಎಲ್ಲರ ಪ್ರಯತ್ನ: ಬಿಜೆಪಿ, ಜೆಡಿಎಸ್ ಒಟ್ಟಿಗೆ ಸೇರಿ ಪ್ರತಿಷ್ಠಿತವಾದ ಕಾರವಾರ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಳಿಸುವಂತಾಗಿದೆ. ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ, ಆನಂದ ಅಸ್ನೋಟಿಕರ್ ಹಾಗೂ ಎಲ್ಲರ ಪ್ರಯತ್ನದಿಂದ ಗೆಲುವು ಸಾಧ್ಯವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಆಮಿಷಕ್ಕೆ ಯತ್ನಿಸಿದ್ದರು: ನಮ್ಮ ಸದಸ್ಯರಿಗೆ ಕಾಂಗ್ರೆಸ್‌ನವರು ಅಮಿಷ ಒಡ್ಡಿ ಸೆಳೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಒಟ್ಟೂ 19 ಮತಗಳು ಮೈತ್ರಿ ಅಭ್ಯರ್ಥಿಗಳು ಗಳಿಸಿ ಜಯಗಳಿಸುವಂತಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್. ನಾಯ್ಕ ತಿಳಿಸಿದರು.ಮೈತ್ರಿಗೆ ಗೆಲುವು: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡರಾದ ರೂಪಾಲಿ ನಾಯ್ಕ, ನಾನು ಹಾಗೂ ಎಲ್ಲ ಸದಸ್ಯರು ಸೇರಿ ನಗರಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಸಾಧ್ಯವಾಗಿದೆ. ಜಿಲ್ಲಾದ್ಯಂತ ಉಭಯ ಪಕ್ಷಗಳು ಸೇರಿ ಕೆಲಸ ಮಾಡಲಿವೆ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ತಿಳಿಸಿದರು.