ಕಾರವಾರ: ಕಾರವಾರ ಬಂದರು ವಿಸ್ತರಣೆ ನ್ಯಾಯಾಲಯದಲ್ಲಿದ್ದ ಪ್ರಕರಣ ನಮ್ಮ ಪರವಾಗಿದೆ. ಎನ್‌ಜಿಟಿ(ನ್ಯಾಷನಲ್ ಗ್ರೀನ್ ಟ್ರಿಬುನಲ್) ಸೇರಿದಂತೆ ಎಲ್ಲ ಪ್ರಕರಣಗಳಲ್ಲಿ ನಮಗೆ ಗೆಲುವಾಗಿದೆ. ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯಪುರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ, ಜನರು ಆತಂಕ ಪಡುವುದು ಬೇಡ ಎಂದು ಸ್ಪಷ್ಟಪಡಿಸಿದರು.ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಬಂದರುಗಳ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಸರ್ವಋತು ರಸ್ತೆಗಳು ಎಲ್ಲ ಸಂದರ್ಭದಲ್ಲಿ ಅವಶ್ಯ. ಕರ್ನಾಟಕ ಕರಾವಳಿ ಅಭಿವೃದ್ಧಿ ಆಗದಿರಲು ಸರ್ವಋತು ರಸ್ತೆ ಇಲ್ಲದಿರುವುದೇ ಕಾರಣ ಎಂದ ಅವರು, ಕರ್ನಾಟಕ ಕರಾವಳಿ ಅಭಿವೃದ್ಧಿ ನಮ್ಮ ಗುರಿಯಾಗಿದೆ. 2019ರಿಂದ ಕರ್ನಾಟಕ ಮೆರಿಟೈಮ್ ಬೋರ್ಡ್ ಸ್ಥಾಪಿಸುವ ಮೂಲಕ ಗುಜರಾತ್, ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಕರಾವಳಿ ಅಭಿವೃದ್ಧಿ ಆಗುತ್ತದೆ ಎಂದರು.ಅಂಕೊಲಾ ತಾಲೂಕಿನ ಖೇಣಿಯಲ್ಲಿ ವಾಣಿಜ್ಯ ಬಂದರನ್ನು ಸ್ಥಾಪಿಸಲು ಜೆಎಸ್‌ಡಬ್ಯು ಸಂಸ್ಥೆಗೆ ಗುತ್ತಿಗೆ ಪಡೆದುಕೊಂಡಿದೆ. ಒಟ್ಟೂ ₹4200 ಕೋಟಿ ಹೂಡಿಕೆ ಮಾಡಲು ಕಂಪನಿ ಸಿದ್ಧವಾಗಿದೆ. 30 ವರ್ಷಗಳ ಲೀಸ್ ಅವಧಿಗೆ 30 ಎಂಟಿಪಿಎ(ಮಿಲಿಯನ್ ಟನ್ ಪರ್ ಆ್ಯನಮ್) ಸಾಮರ್ಥ್ಯ ಬಂದರು ನಿರ್ಮಾಣವಾಗುತ್ತದೆ. ಬಳಿಕ ಮೆರಿಟೈಮ್ ಬೋರ್ಡ್‌ಗೆ ಹಸ್ತಾಂತರವಾಗುತ್ತದೆ. ರಾಜ್ಯದ ಸುಪರ್ದಿಯಲ್ಲಿರುವ ಕಿರು ಬಂದರುಗಳಲ್ಲಿ ಕೇವಲ 1 ಎಂಟಿಪಿಎ ವಹಿವಾಟು ನಡೆಯುತ್ತಿದೆ. ಅದನ್ನು ಹೆಚ್ಚಿಸಲು ಚಿಂತನೆ ನಡೆದಿದೆ.
ಖೇಣಿ ಬಂದರು ನಿರ್ಮಾಣದಿಂದ ಸಾರ್ವಜನಿಕರ ಆಸ್ತಿ, ಜಮೀನು ಹೋಗುವುದಿಲ್ಲ. ಸಂಪೂರ್ಣವಾಗಿ ಸಮುದ್ರದಲ್ಲೇ ನಿರ್ಮಾಣ ಮಾಡಲಾಗುತ್ತದೆ. ಕೇವಲ ಬಂದರಿಗೆ ಹೋಗಲು 90 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ಜಾಗ ಬೇಕಾಗಲಿದೆ. ಇದರಲ್ಲಿ ರಸ್ತೆ, ರೈಲ್ವೆ ಮಾರ್ಗ, ಪೈಪ್‌ಲೈನ್ ಎಲ್ಲವೂ ಒಳಪಡಲಿದೆ. ಇದರ ಸರ್ವೆಯೂ ನಡೆದಿದ್ದು, ಈ ಜಾಗದಲ್ಲಿ ಮನೆ, ಶೆಡ್ ಸೇರಿ ಕೇವಲ 75 ಕಟ್ಟಡಗಳಿವೆ. ಇದಕ್ಕಾಗಿ ಕೇವಲ 150 ಎಕರೆ ಜಾಗ ಮಾತ್ರ ಬೇಕಾಗಿದೆ. ಸಮುದ್ರದಲ್ಲಿ 400 ಎಕರೆಯಷ್ಟು ಜಾಗವನ್ನು ನಿರ್ಮಾಣ ಮಾಡಿ ಅಲ್ಲಿಯೇ ಬಂದರು ನಿರ್ಮಾಣವಾಗಲಿದೆ ಎಂದರು.ಹೊನ್ನಾವರದಲ್ಲಿರುವ ಹಳೆಯ ಬಂದರನ್ನು ಸಹ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಂಕಿಯಲ್ಲಿ 14 ಎಂಟಿಪಿಯ ಬಂದರಿಗೂ ಒಂದು ಯೋಜನೆ ಸಿದ್ಧವಾಗುತ್ತಿದೆ. ಮುರ್ಡೇಶ್ವರದಲ್ಲಿ ಸಮುದ್ರದಕ್ಕೆ ಚಾಚಿಕೊಂಡಿರುವ ದಕ್ಷಿಣದ ಜಾಗದಲ್ಲಿ ಮೀನುಗಾರಿಕೆ ಸಹಯೋಗದಲ್ಲಿ ಬಂದರು ನಿರ್ಮಾಣವಾಗಲಿದೆ. ಭಟ್ಕಳದಲ್ಲೂ ವಾಣಿಜ್ಯ ಬಂದರಿಗಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.ಮುಖ್ಯ ಎಂಜಿನಿಯರ್ ದಿವಾಕರ ನಾಯ್ಕ, ಎಕ್ಸಿಕ್ಯುಟಿವ್ ಎಂಜಿನಿಯರ್ ಪ್ರಸಾದ ಇದ್ದರು.