ಜಿ.ಡಿ. ಹೆಗಡೆ
ಕಾರವಾರ:ಇಲ್ಲಿನ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಇರುವ ಟುಪಲೇವ್ ಯುದ್ಧ ವಿಮಾನ ಸಂಗ್ರಹಾಲಯ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ಆದರೂ ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಉದ್ಘಾಟನೆ ಬಳಿಕ ಮಾಹಿತಿ ನೀಡಲು ನೂರಾರು ಪ್ರವಾಸಿಗರು ಹೆಸರನ್ನು ನೀಡಿ ಹೋಗಿದ್ದಾರೆ.ಆಶ್ಚರ್ಯವಾದರೂ ಇದು ನಿಜ. ಭಾರತೀಯ ವಾಯು ಸೇನೆಯಲ್ಲಿ ೨೯ ವರ್ಷ ಸೇವೆ ಸಲ್ಲಿಸಿದ್ದ ಯುದ್ಧ ವಿಮಾನ ನೋಡಲು ಸಾಕಷ್ಟು ಜನರು ಆಸಕ್ತರಾಗಿದ್ದು, ವಿಮಾನದ ಕಾರ್ಯವೈಖರಿ ಬಗ್ಗೆ ಕೂಡಾ ತಿಳಿದುಕೊಳ್ಳುವ ಕುತೂಹಲ ಇರುವುದು ಸಹಜವಾಗಿದೆ. ೧೦೦ಕ್ಕೂ ಅಧಿಕ ಪ್ರವಾಸಿಗರು ತಮ್ಮ ದೂರವಾಣಿ ಸಂಖ್ಯೆ ನೀಡಿ ಟುಪಲೇವ್ ಉದ್ಘಾಟನೆ ಬಳಿಕ ಸಂಪರ್ಕಿಸುವಂತೆ ಯುದ್ಧ ವಿಮಾನ ನೋಡಿಕೊಳ್ಳಲು ಇರುವ ಸಿಬ್ಬಂದಿಗೆ ಕೋರಿದ್ದಾರೆ.
ದೇಶದಲ್ಲಿ ವಿಶಾಖಪಟ್ಟಣಂನಲ್ಲಿ ಮಾತ್ರ ವಾಯುಸೇನೆಯ ಯುದ್ಧ ವಿಮಾನ ಸಂಗ್ರಹಾಲಯ ಸ್ಥಾಪನೆಯಾಗಿದ್ದು, ಮತ್ತೆಲ್ಲೂ ಇರಲಿಲ್ಲ. ಈಗ ಕಾರವಾರದಲ್ಲಿ ಸಂಗ್ರಹಾಲಯ ಸ್ಥಾಪನೆಯಾಗುತ್ತಿದೆ. ಯುದ್ಧ ವಿಮಾನಗಳ ಕಾರ್ಯವೈಖರಿ ತಿಳಿದುಕೊಳ್ಳಲು ಸಂಗ್ರಹಾಲಯ ಅತ್ಯಂತ ಸಹಕಾರಿಯಾಗಿದೆ. ಹೀಗಾಗಿ ಜನರಲ್ಲಿ ಟುಪಲೇವ್ ಯುದ್ಧ ವಿಮಾನ ನೋಡುವ ಆಸಕ್ತಿ ಹೆಚ್ಚಾಗಿದೆ. ಇಲ್ಲಿಗೆ ಬಂದರೂ ಚಾಪೆಲ್ ಯುದ್ಧ ನೌಕೆ ಒಂದೇ ನೋಡಲು ಸದ್ಯಕ್ಕೆ ಅವಕಾಶವಿದ್ದು, ಟುಪಲೇವ್ ವಿಮಾನ ನೋಡಲು ಆಗುತ್ತಿಲ್ಲ.ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಪಕ್ಕದಲ್ಲೇ ಟುಪಲೇವ್ ಯುದ್ಧ ವಿಮಾನ ಇರಿಸಲಾಗಿದ್ದು, ಇದುವರೆಗೂ ಉದ್ಘಾಟನೆಯಾಗಿಲ್ಲ. ಜತೆಗೆ ನೌಕಾ ಸೇನೆಯಿಂದ ಗುತ್ತಿಗೆದಾರರಿಗೆ ಬಿಡಿಭಾಗ ಜೋಡಣಾ ವೆಚ್ಚ ನೀಡುವುದು ಬಾಕಿ ಇರುವ ಕಾರಣ ಸಾರ್ವಜನಿಕರಿಗೆ ವಿಮಾನದ ಒಳಗೆ ತೆರಳಿ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ. ಪ್ರತಿನಿತ್ಯ ಸಾವಿರಾರು ಜನರು ಯುದ್ಧ ನೌಕೆ, ವಿಮಾನ ನೋಡಲು ಆಗಮಿಸುತ್ತಿದ್ದಾರೆ. ವಿಮಾನದ ಒಳಗೆ ಪ್ರವೇಶಿಸಲು ಅವಕಾಶ ಇಲ್ಲದೇ ಇರುವುದಕ್ಕೆ ಅಲ್ಲಿನ ಸಿಬ್ಬಂದಿಗೆ ತಮ್ಮ ದೂರವಾಣಿ ಸಂಖ್ಯೆ ನೀಡಿ ಸಾರ್ವಜನಿಕರಿಗೆ ತೆರಳಲು ಅವಕಾಶ ನೀಡಿದ ಬಳಿಕ ತಮಗೆ ಮಾಹಿತಿ ನೀಡುವಂತೆ ತಿಳಿಸಿ ಹೋಗುತ್ತಿದ್ದಾರೆ.ಭಾರತದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ಟುಪಲೇವ್ ೨೦೧೭ರಲ್ಲಿ ಡಿ-ಕಮಿಷನ್ (ನಿವೃತ್ತಿ) ಹೊಂದಿತ್ತು. ೨೦೨೦ರಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಿನ ಅರಗಾದ ಕದಂಬ ನೌಕಾನೆಲೆ ಟುಪಲೇವ್ ಯುದ್ಧ ವಿಮಾನ ಸಂಗ್ರಹಾಲಯ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದ್ದವು. ತಮಿಳುನಾಡಿನಿಂದ ಕಾರವಾರಕ್ಕೆ ಸ್ಥಳಾಂತರಿಸುವ ಹೊಣೆ ನೌಕಾ ನೆಲೆಯದ್ದಾಗಿತ್ತು. ಆದರೆ ಕೋವಿಡ್ ಕಾರಣದಿಂದ ವಿಮಾನದ ಬಿಡಿಭಾಗ ಸಾಗಾಣಿಕೆ ಮಾಡಲು ಆಗಿರಲಿಲ್ಲ. ಕಳೆದ ೨೦೨೩ ಸೆಪ್ಟೆಂಬರ್‌ನಲ್ಲಿ ಅಂದಾಜು ೫೦ ಟನ್ ತೂಕದ ಬಿಡಿಭಾಗಗಳನ್ನು ೯ ಟ್ರಕ್‌ಗಳಲ್ಲಿ ಕಾರವಾರಕ್ಕೆ ತರಲಾಗಿತ್ತು. ಬಳಿಕ ತಂತ್ರಜ್ಞರು ಆಗಮಿಸಿ ವಿಮಾನದ ಜೋಡಣಾ ಕಾರ್ಯವನ್ನು ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಿದ್ದಾರೆ. ಜಿಲ್ಲಾಡಳಿತದಿಂದ ಲಾನ್, ಕಾರಂಜಿ ನಿರ್ಮಾಣ ಮಾಡುವುದು ಬಾಕಿ ಉಳಿದಿದೆ. ಉಳಿದಂತೆ ವಿಮಾನದ ಜೋಡಣಾ ಕಾರ್ಯ ಮುಗಿದಿದೆ.