ಕನ್ನಡಪ್ರಭ ವಾರ್ತೆ ಮಂಗಳೂರು
ಈಗಾಗಲೇ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ, ಕಚೇರಿಗಳಲ್ಲಿ ಕನ್ನಡ ಬದಲು ಮಲಯಾಳಿ ಭಾಷೆಯಲ್ಲಿ ಕಡತ ವಿಲೇವಾರಿ ಮಾಡುತ್ತಿರುವ ಆರೋಪಗಳು ವ್ಯಕ್ತವಾಗುತ್ತಿರುವ ನಡುವೆಯೇ ಈಗ ಕಲೋತ್ಸವಗಳಲ್ಲೂ ಕನ್ನಡದ ಕಡೆಗಣನೆ ಆರೋಪ ಸೇರ್ಪಡೆಯಾಗಿದೆ.
ಒಟ್ಟು 12 ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಯಾವುದೇ ವೇದಿಕೆಯಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಸ್ಥಾಪಿಸಿರಲಿಲ್ಲ. ಕನ್ನಡದ ಸ್ಪರ್ಧೆ ನಡೆಯುವ ಕೇವಲ ಒಂದೆಡೆ ಮಾತ್ರ ವೇದಿಕೆ ಸಮೀಪ ‘ಪ್ಲಾಸ್ಟಿಕ್ ಮುಕ್ತ ಆವರಣವೇ ಉದಿನೂರಿಗೆ ಸ್ವರ್ಣಾಭರಣ’ ಎಂದು ಬರೆದಿರುವುದನ್ನು ಹೊರತುಪಡಿಸಿದರೆ, ಬೇರೆಲ್ಲೂ ಕನ್ನಡ ಭಾಷೆ ಕಂಡುಬಂದಿಲ್ಲ ಎನ್ನುವ ಆರೋಪ ಕೇಳಿಬಂದಿದೆ.ಕಾಸರಗೋಡು ಜಿಲ್ಲೆಯ ಒಟ್ಟು 7 ಉಪ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಕಾಸರಗೋಡು, ಕುಂಬಳೆ, ಮಂಜೇಶ್ವರ ಉಪಜಿಲ್ಲೆಗಳಿಂದ ಭಾಗವಹಿಸುವ ವಿದ್ಯಾರ್ಥಿಗಳ ಪೈಕಿ ಬಹುಪಾಲು ಕನ್ನಡ ಭಾಷಿಕ ಮಕ್ಕಳೇ ಆಗಿದ್ದಾರೆ. ಹಾಗಿರುವಾಗ ಯಾವುದಾದರೂ ವೇದಿಕೆಗೆ ಕನ್ನಡ ಭಾಷೆಯಲ್ಲಿ ಹೆಸರಿಡಲು ಅಥವಾ ಸೂಚನೆಗಳನ್ನು ಮಲೆಯಾಳಂ ಜತೆಗೆ ಕನ್ನಡದಲ್ಲೂ ಬರೆಯಲು ಸಂಬಂಧಪಟ್ಟವರು ಆಸಕ್ತಿ ವಹಿಸಿಲ್ಲ ಎಂಬುದು ಕನ್ನಡಿಗರ ಆರೋಪ.
2 ವರ್ಷಗಳ ಹಿಂದೆ ಕನ್ನಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದ ಕಾರಣ ಕನ್ನಡ ಅಧ್ಯಾಪಕರ ಸಂಘಟನೆ ನೇತೃತ್ವದಲ್ಲಿ ಕೇರಳದ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು. ಆಯೋಗದ ಅಧ್ಯಕ್ಷರು ಜಿಲ್ಲಾ ವಿದ್ಯಾಂಗ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಿದ್ದರು. ಬಳಿಕ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡದಲ್ಲೇ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು. ಈ ಬಗ್ಗೆ ಯಾವುದೇ ಅಡ್ಡಿ ಆತಂಕ ಸಲ್ಲದು ಎಂದಿತ್ತು.