ಕಾಶ್ಯಪ ಪರ್ಣಕುಟಿ ಅವರದ್ದು ಸಾರ್ಥಕ್ಯ ಜೀವನ: ಪ್ರಮೋದ ಹೆಗಡೆ

KannadaprabhaNewsNetwork | Published : May 23, 2024 1:10 AM

ಸಾರಾಂಶ

ಮನುಷ್ಯ ತನ್ನ ಬದುಕಿನ ಜೀವನದುದ್ದಕ್ಕೂ ಪ್ರಪಂಚದಿಂದ ಕಲಿಯುವುದು, ಅನುಭವಿಸುವುದು ಬಹಳಷ್ಟಿದೆ. ಆದರೆ ತನ್ನನ್ನು ತಾನು ಕಂಡುಕೊಳ್ಳುವ ಆತ್ಮಾನುಸಂಧಾನವೂ ಅಗತ್ಯವಾಗಿದೆ.

ಸಿದ್ದಾಪುರ: ಕಾಶ್ಯಪ ಪರ್ಣಕುಟಿ ಹಠವಾದಿ, ಛಲವಾದಿಯಾಗಿ ೭೦ರ ಸಾರ್ಥಕ್ಯ ಜೀವನ ಕಳೆದಿದ್ದಾರೆ. ಹತ್ತಿರದಿಂದ ಅವರನ್ನು ಕಂಡವರಿಗೆ ಹೂವಿನಂತಹ ಮೃದುತ್ವ ಕಂಡುಬರುತ್ತದೆ. ನಾಸ್ತಿಕನಂತೆ ಕಂಡುಬರುವ ಅವರು ಪೂಜೆ ಪುನಸ್ಕಾರಗಳ ಮೂಲಕ ಆಸ್ತಿಕತನ ಮೆರೆದಿದ್ದಾರೆ ಎಂದು ಯಲ್ಲಾಪುರ ಸಂಕಲ್ಪದ ಪ್ರಮೋದ ಹೆಗಡೆ ಹೇಳಿದರು.

ತಾಳಮದ್ದಲೆಯ ಅರ್ಥಧಾರಿಯಾಗಿ, ಹಿರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ತಾಲೂಕಿನ ಕಶಿಗೆಯ ಕಾಶ್ಯಪ ಪರ್ಣಕುಟಿ(ಜಿ.ಕೆ. ಭಟ್ಟ) ಹಾಗೂ ಲತಾ ಭಟ್ಟ ದಂಪತಿಗೆ ಆಯುರಾರೋಗ್ಯ ಭಾಗ್ಯ ದೊರೆಯಲೆಂಬ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಕಾವ್ಯಶ್ರೀ ಭಟ್ಟ ಹಾಗೂ ಪ್ರೀತಿವರ್ಧನ ಭಟ್ಟ ಕಶಿಗೆಯ ಕೇಶವ ನಾರಾಯಣ ದೇವರ ಸನ್ನಿಧಿಯಲ್ಲಿ ಭೀಮರಥ ಶಾಂತಿ ವೈದಿಕ ಕರ್ಮಾಂಗಗಳನ್ನು ನಡೆಸಿದ ಸಂದರ್ಭದಲ್ಲಿ ಕೇಶವನಾರಾಯಣ ಸಭಾಭವನದ ಗಣೇಶ ಹೆಗಡೆ ದೊಡ್ಮನೆ ವೇದಿಕೆಯಲ್ಲಿ ಏರ್ಪಡಿಸಿದ್ದ ಎಪ್ಪತ್ತರ ಏರು ಸಂಸ್ಕೃತಿ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ಕಾಲಕ್ಕೆ ಪ್ರಾಧಾನ್ಯತೆ ನೀಡುತ್ತೇವೆ. ಕಾಲಕ್ಕೆ ನೀಡಿದ ಗೌರವವೇ ಈ ಕಾರ್ಯಕ್ರಮ ಎಂದರು.

ವಿ. ಕೃಷ್ಣ ಭಟ್ಟ ಅಡವಿತೋಟ ಮಾತನಾಡಿ, ಮನುಷ್ಯ ತನ್ನ ಬದುಕಿನ ಜೀವನದುದ್ದಕ್ಕೂ ಪ್ರಪಂಚದಿಂದ ಕಲಿಯುವುದು, ಅನುಭವಿಸುವುದು ಬಹಳಷ್ಟಿದೆ. ಆದರೆ ತನ್ನನ್ನು ತಾನು ಕಂಡುಕೊಳ್ಳುವ ಆತ್ಮಾನುಸಂಧಾನವೂ ಅಗತ್ಯ ಎಂದರು.

ಜ್ಯೋತಿಷಿ ಕಮಲಾಕರ ಭಟ್ಟ ಮಾತನಾಡಿ, ಆಡಂಬರದಿಂದ ದೂರ ಉಳಿದು ಭಕ್ತಿ- ಶ್ರದ್ಧೆಯಿಂದ ಬದುಕುವ ಜೀವನ ಶ್ರೇಷ್ಠವಾಗಿದ್ದು, ಆ ಜೀವನವನ್ನು ಜಿ.ಕೆ. ಭಟ್ಟ ಅವರು ಸಾಧಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಜಿ.ಕೆ. ಭಟ್ಟ ದಂಪತಿಯನ್ನು ಗೌರವಿಸಿ ಮಾತನಾಡಿ, ಎಡಪಂಥೀಯರು ನಾಸ್ತಿಕರು ಅನ್ನುವಂತಿಲ್ಲ. ಕೇರಳದಲ್ಲಿಯ ನಂಬೂದರಿಗಳು ಕಮ್ಯುನಿಸ್ಟ್ ಸಿದ್ಧಾಂತವನ್ನು ನೆಚ್ಚಿಕೊಂಡರೂ ದೇವರನ್ನು ಪೂಜಿಸಿ, ಆರಾಧಿಸುತ್ತಾರೆ. ಅಂತೆಯೇ ಜಿ.ಕೆ. ಭಟ್ಟ ಅವರದ್ದು ಎಡಪಂಥೀಯ ವಿಚಾರಧಾರೆಯಾದರೂ ಬಲಪಂಥೀಯರೊಂದಿಗೆ ಸಂಪರ್ಕ- ಒಡನಾಟ ಇಟ್ಟುಕೊಂಡವರು. ಮಾನವೀಯ ಮೌಲ್ಯ ಅಳವಡಿಸಿಕೊಂಡವರು ಎಂದರು.

ಜಿ.ಕೆ. ಭಟ್ಟ ಕಶಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಸಂವಾದ, ಪತ್ರಿಕಾ ಸಂವಾದ, ಕಲಾ ಸಂವಾದ, ವಿದ್ವತ್ ಸಂಮಾನ ಹಾಗೂ ಸಮಾರೋಪ ನಡೆಯಿತು.

Share this article