ಹಳ್ಳಿಗಳಲ್ಲಿ ಕಾಯಕ ಚಳವಳಿ ಮರಳಬೇಕು: ಪ್ರಸನ್ನ ಚರಕ

KannadaprabhaNewsNetwork |  
Published : Jan 06, 2024, 02:00 AM IST
ಚಿತ್ರ:05ಎಚ್‍ಒಎಸ್1ಪಿ. ಹೊಸನಗರತಾಲ್ಲೂಕು ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲಲ್ಲಿ ನಡೆದ ತಾಲ್ಲೂಕುಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯರಂಗಕರ್ಮಿ ಪ್ರಸನ್ನ ಚರಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಗುಡಿ ಕೈಗಾರಿಕೆಗಳು ನಶಿಸುತ್ತಿದ್ದು, ಕೃಷಿ ಆಧಾರಿಕ ಕೆಲಸಗಳೆಲ್ಲ ಹಿನ್ನಡೆ ಅನುಭವಿಸುತ್ತಿವೆ. ಹಳ್ಳಿಗಳಲ್ಲಿ ಯುವಜನರು ಇಲ್ಲದೆ, ಮನೆಗಳಲ್ಲಿ ವೃದ್ಧರು ಪರಿತಪಿಸುವಂತಾಗಿದೆ. ನಗರ ಜೀವನ, ಹೊಸ ಉದ್ಯೋಗ ಅರಸುವ ಯುವಜನರು ಹಳ್ಳಿಗಳತ್ತ ಮರಳಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಕಾಯಕ ಚಳವಳಿ ಮರಳಲಿ ಎಂದು ರಂಗಕರ್ಮಿ ಪ್ರಸನ್ನ ಚರಕ ಹೊಸನಗರ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ಹಳ್ಳಿಗಳಲ್ಲಿನ ಕಾಯಕವೃತ್ತಿಗೆ ಗೌರವ, ಆಧಾರ ಇಲ್ಲವಾಗಿದೆ. ಪರಿಣಾಮ ಹಳ್ಳಿಗಳಲ್ಲಿ ಕ್ಷೋಭೆ ಆವರಿಸಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಚರಕ ವಿಷಾದಿಸಿದರು.

ತಾಲೂಕಿನ ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲ ಆವರಣದಲ್ಲಿ ನಡೆದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನ ಗುಳೆ ಹೊರಟು ಬದುಕಿನಾಸರೆಗಾಗಿ ಪೇಟೆ, ಪಟ್ಟಣ ಸೇರುತ್ತಿದ್ದಾರೆ. ಹಳ್ಳಿಗಳು ಖಾಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಭಾರತ ಹಳ್ಳಿಗಳಿಂದ ಕೂಡಿದ ದೇಶ. ಇಲ್ಲಿ ಕೃಷಿಯೇ ಪ್ರಧಾನ ಕಾಯಕ. ಅದರ ಜತೆಯಲ್ಲಿ ಹತ್ತಾರು ಕಾಯಕ ವೃತ್ತಿಗಳು ಇದ್ದು ಜನ ಸುಸ್ಥಿರ ಬದುಕುಕಟ್ಟಿಕೊಂಡಿದ್ದರು. ಆದರೀಗ ಹಳ್ಳಿಗಳಲ್ಲಿ ಕಾಯಕ ವೃತ್ತಿ ಅವನತಿ ಹಾದಿಯ ಕೊನೆಯಲ್ಲಿದೆ. ಹಳ್ಳಿಗಳು ಬರಿದಾಗುತ್ತಿವೆ. ನಮ್ಮ ಮಕ್ಕಳು ಪೇಟೆಯ ಗುಲಾಮರಾಗುತ್ತಿದ್ದಾರೆ. ಓದಿ ರಾಜಧಾನಿ ಸೇರಿ ಉದ್ಯೋಗ ಕಂಡುಕೊಂಡರೆ ಮುಗಿಯಿತು ಎಂಬ ಹಂತಕ್ಕೆ ಬಂದಿದ್ದಾರೆ ಎಂದು ಹೇಳಿದರು.

ಬಹುತೇಕ ಪೋಷಕರು ಕೂಡ ಪೇಟೆ ಪಟ್ಟಣ ಸೇರಿದ್ದಾರೆ. ಹಳ್ಳಿಗಳಲ್ಲಿ ಜನಜೀವನ ಸುಸ್ಥಿತಿಗೆ ಬರುವಂತಾಗಲು ಹಳ್ಳಿಗಳಲ್ಲಿ ಮತ್ತೆ ಕಾಯಕ ಚಳುವಳಿ ಆರಂಭವಾಗಬೇಕು. ಇಲ್ಲಿನ ಕಾಯಕ ವೃತ್ತಿ ಮರುಜೀವಕಂಡರೆ ತಾನಾಗಿ ಹಳ್ಳಿ ಜನಜೀವನಕ್ಕೆ ಅರ್ಥ ಬರುತ್ತದೆ. ಇಂದಿನ ಶಿಕ್ಷಣವು ದಾಸ್ಯ ಕಲಿಸುತ್ತಿದೆ. ಪರಂಪರೆ, ಮನೆ ಮನಕ್ಕೆ ಗೌರವ ಕೊಡುವ ಪಾಠ ಹೇಳಿಕೊಡುತ್ತಿಲ್ಲ. ಅದರ ಪರಿಣಾಮ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂದರು.

ಈ ಹಿಂದೆ ರಾಜ್ಯದಲ್ಲಿ 4.5 ಲಕ್ಷ ಕೈಮಗ್ಗಗಳು ಚಾಲ್ತಿಯಲ್ಲಿತ್ತು. ಆದರೆ, ಈಗ ಕೇವಲ 4.5 ಸಾವಿರ ಕೈಮಗ್ಗ ಮಾತ್ರ ಇವೆ. ನಮ್ಮ ಮಗ್ಗ ನೇಕಾರರು ಕೆಲಸ ಕೈ ಬಿಟ್ಟು ಬೇರೆಯವರ ಗುಲಾಮರಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.

ಗಮನ ಸೆಳೆದ ನೃತ್ಯ:

ಸಮ್ಮೇಳನದಲ್ಲಿ ವ್ಯಾಸ ಮಹರ್ಷಿ ಗುರುಕುಲ ಶಾಲೆಯ ಮಕ್ಕಳು ಪ್ರದರ್ಶಿಸಿದ ಸ್ವಾಗತ ನೃತ್ಯ ಸಭಿಕರ ಗಮನ ಸೆಳೆಯಿತು. ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ, ಮಾರುತೀಪುರ ಗ್ರಾಪಂ ಅಧ್ಯಕ್ಷೆ ಆರ್.ಕೆ.ದೀಪಿಕಾ, ಸಂತೋಷ್‍ ಗೌಡ, ಎಚ್.ಬಿ. ಚಿದಂಬರ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಬಿಇಒ ಕೃಷ್ಣಮೂರ್ತಿ, ಪ್ರಮುಖರಾದ ಲಕ್ಷ್ಮಣಗೌಡ, ಇಲಿಯಾಸ್, ಆಂಜನೇಯ ಜೋಗಿ ಇದ್ದರು.

ಕಸಾಪ ತಾಲೂಕು ಅಧ್ಯಕ್ಷ ತ.ಮ.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ನಾಗಭೂಷಣ್ ಸ್ವಾಗತಿಸಿದರು. ಕುಬೇಂದ್ರಪ್ಪ ನಿರೂಪಿಸಿದರು. ಉಮೇಶ ಭಟ್ ವಂದಿಸಿದರು.

- - - ಬಾಕ್ಸ್‌-1ಸಾಹಿತ್ಯ ನನ್ನ ಉಸಿರು: ಸಮ್ಮೇಳನಾಧ್ಯಕ್ಷ ವೃತ್ತಿಯ ಜತೆಗೆ ಪ್ರವೃತ್ತಿಯ ಕಡೆಗೆ ಗಮನ ನೀಡಿದರೆ ನಿವೃತ್ತಿಯ ನಂತರವೂ ಜೀವನೋತ್ಸಾಹ ಹೆಚ್ಚಬಲ್ಲದು. ಸಾಹಿತ್ಯವು ನನ್ನ ಉಸಿರು. ಆದ್ದರಿಂದಲೇ ನಾನು ಈ ಇಳಿವಯಸ್ಸಿನಲ್ಲಿಯೂ ಚಟುವಿಟಿಕೆಯಿಂದ ಇದ್ದೇನೆ ಎಂದು ಸಮ್ಮೇಳನಾಧ್ಯಕ್ಷ ಹನುಮಂತ ಅನಂತ ಪಾಟೀಲ್‌ ಹೇಳಿದರು.

ಮನಸ್ಸಿಗೆ ತೋಚಿದ ಅಕ್ಷರ, ಪದಗಳೇ ಮುಂದೆ ಹನಿಗವನ, ಪ್ರಬಂಧ, ಕಿರುಕಥೆಯಿಂದ ಹಿಡಿದು ದೊಡ್ಡ ಸಾಹಿತ್ಯ ಗ್ರಂಥ ಮಾಲಿಕೆಯ ತನಕ ತಮ್ಮನ್ನು ಕೊಂಡೊಯ್ಯಬಲ್ಲದು. ಹಿರಿಯ ಸಾಹಿತಿಗಳ ಪುಸ್ತಕ ಓದು, ಶಾಲಾ ವಾಚಾನಾಲಯದ ಪುಸ್ತಕ ಸರಣಿಗಳು ತಮ್ಮನ್ನು ಸಾಹಿತ್ಯ ಕ್ಷೇತ್ರಕ್ಕೆ ತರಲು ಉತ್ತೇಜನ ನೀಡಿದೆ ಎಂದು ಅಭಿಪ್ರಾಯಟ್ಟರು.

- - - ಬಾಕ್ಸ್‌ -2

ವಿಧಾನಸಭಾ ಕ್ಷೇತ್ರ ಹೋರಾಟಕ್ಕೆ ನಾಂದಿಯಾದ ವೇದಿಕೆ

ಮೂಲೆಗದ್ದೆ ಚನ್ನಬಸವ ಶ್ರೀಗಳು, ಮಾಜಿ ಶಾಸಕ ಬಿ.ಸ್ವಾಮಿರಾವ್, ಸಮ್ಮೇಳನಾಧ್ಯಕ್ಷರು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರೆಲ್ಲ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸುವಲ್ಲಿ ಈ ವೇದಿಕೆ ನಾಂದಿಯಾಗಬೇಕು, ಇನ್ನು ಮುಂದಿನ ದಿನಗಳಲ್ಲಿ ಹೋರಾಟದ ತೀವ್ರತೆ ಹೆಚ್ಚಾಗಲಿದೆ ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿದರು. ಬಿದನೂರು ನಗರ ಕೋಟೆಯಿಂದ ಬಟ್ಟೆಮಲ್ಲಪದ ಕಸಪಾ ಸಮ್ಮೇಳನದ ಆವರಣದ ತನಕ ‘ಹೊಸನಗರ ವಿಧಾನಸಭಾ ಕ್ಷೇತ್ರ ಬೇಕು’ ಎಂಬ ಘೋಷಣೆಯೊಂದಿಗೆ ಬೈಕ್ ರ್ಯಾಲಿ ಸಹ ನಡೆಯಿತು.

- - - -05ಎಚ್‍ಒಎಸ್1ಪಿ:

ಹೊಸನಗರ ತಾಲೂಕು ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ರಂಗಕರ್ಮಿ ಪ್ರಸನ್ನ ಚರಕ ಉದ್ಘಾಟಿಸಿದರು. -05ಎಚ್‍ಒಎಸ್2ಪಿ:

ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷ ಹ.ಅ.ಪಾಟೀಲ್ ಮಾತನಾಢಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ