ಸಂಭ್ರಮದ ಕಾಯಕಯೋಗಿ ಚರಬಸವ ತಾತನ ರಥೋತ್ಸವ

KannadaprabhaNewsNetwork |  
Published : Apr 14, 2024, 01:52 AM ISTUpdated : Apr 14, 2024, 01:53 AM IST
(ಚಿತ್ರ : ಮಂಜುನಾಥ್ ಬಿರಾದಾರ್ ). | Kannada Prabha

ಸಾರಾಂಶ

ಸಗರನಾಡಿನ ಆರಾಧ್ಯದೈವ ಶತಮಾನ ಕಂಡ ಕಾಯಕಯೋಗಿ ಸಂತ ಚರಬಸವೇಶ್ವರರ 102ನೇ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಗದ್ದುಗೆ ಸಂಸ್ಥಾನದ ಮೂಲ ದೇವಸ್ಥಾನದಿಂದ ನಾಗರ ಕೆರೆಯ ನಂದಿ ಕಟ್ಟೆವರೆಗೂ ಜರುಗಿದ ಸಂಭ್ರಮದ ಮಹಾ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದಲ್ಲಿ ಸಗರನಾಡಿನ ಆರಾಧ್ಯದೈವ ಶತಮಾನ ಕಂಡ ಕಾಯಕಯೋಗಿ ಸಂತ ಚರಬಸವೇಶ್ವರರ 102ನೇ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಗದ್ದುಗೆ ಸಂಸ್ಥಾನದ ಮೂಲ ದೇವಸ್ಥಾನದಿಂದ ನಾಗರ ಕೆರೆಯ ನಂದಿ ಕಟ್ಟೆವರೆಗೂ ಜರುಗಿದ ಸಂಭ್ರಮದ ಮಹಾ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಶನಿವಾರ ಮಧ್ಯಾಹ್ನ ತಾಲೂಕಿನ ಅನ್ವಾರ ಮತ್ತು ನಗರದ ಸುಮಂಗಲಿಯರು ಕುಂಭ ಕಳಸದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ರಥದ ಗಾಳಿಗಳಿಗೆ ಕುಂಭಾಭಿಷೇಕ ಮತ್ತು ಕರಿ ಕುಂಬಳಕಾಯಿ ಹೊಡೆದು ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆ ಮೂಲಕ ಚರಬಸವ ತಾತನ ಗುರುಗಳಾದ ಬಾಡಿಯಾಲ ಹಿರೆಮಠದ ಚನ್ನವೀರ ಶಿವಾಚಾರ್ಯರು ಹಾಗೂ ಚರಬಸವೇಶ್ವರ ಗದ್ದುಗೆಯ ಪೀಠಾಧಿಪತಿ ವೇದಮೂರ್ತಿ ಬಸವಯ್ಯ ಶರಣರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉಬಯ ಶ್ರೀಗಳು ರಥವನ್ನೇರಿ, ಭಕ್ತಾದಿಗಳಿಗೆ ಕೈ ಸನ್ನೆ ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಿದರು. ರಥೋತ್ಸವದುದ್ದಕ್ಕೂ ಚರಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಭಕ್ತರ ಜಯಘೋಷ ಮಧ್ಯೆ ರಥೋತ್ಸವ ನೆರವೇರಿತು.

ಈ ಸಂದರ್ಭದಲ್ಲಿ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ರಥದ ಮೇಲೆ ಎರಚುವ ಮೂಲಕ ಧನ್ಯತಾಭಾವ ಸಮರ್ಪಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗೆ ನಿಂತಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

ಏ.14 ರಿಂದ ಬೃಹತ್ ಜಾನುವಾರುಗಳ ಜಾತ್ರೆಗೆ ಚಾಲನೆ ದೊರೆಯಲಿದ್ದು, ಅಂದು ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಭಾರ ಎತ್ತುವ ಸ್ಪರ್ದೆಗಳು ಜರಗುವವು. ಏ.14 ರಂದು ಭಾನುವಾರ ಸಂಜೆ 6 ಗಂಟೆಗೆ ವಿಶೇಷ ಪೂಜೆಯೊಂದಿಗೆ ರಥೋತ್ಸವದ ಕಳಸ ವಿಸರ್ಜನೆ ನಡೆಯಲಿದೆ. ರೈತರು ಆರೋಗ್ಯವಾಗಿರಲಿ. ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ದೇಶ ಕಾಯುವ ಸೈನಿಕನಿಗೆ ಭಗವಂತ ಶಕ್ತಿ ಮತ್ತು ಆರೋಗ್ಯ ನೀಡಲಿ. ಭಕ್ತರ ಇಷ್ಟಾರ್ಥಗಳು ನೆರವೇರಲಿ. ದೇಶದಲ್ಲಿ ಶಾಂತಿ, ಸಹಬಾಳ್ವೆ ವಾತಾವರಣ ನಿರ್ಮಾಣವಾಗಲಿ. ಇದು ಭಗವಂತನಲ್ಲಿ ನನ್ನ ಪ್ರಾರ್ಥನೆ.

- ವೇದಮೂರ್ತಿ ಬಸವಯ್ಯ ಶರಣರು, ಚರಬಸವೇಶ್ವರ ಗದ್ದುಗೆಯ ಪೀಠಾಧಿಪತಿ, ಶಹಾಪುರ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ