ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಆಸ್ತಿ ಕರ ಸಿಕ್ಕಾಪಟ್ಟೆ ಹೆಚ್ಚಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಮುಂದಿನ 15 ದಿನ ಮಹಾನಗರದ ಯಾರೊಬ್ಬರೂ ಆಸ್ತಿ ತೆರಿಗೆ ಪಾವತಿಸದಂತೆ ನಾಗರೀಕರಿಗೆ ಕರೆನೀಡಿದೆ.
ಈ ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಚರ್ಚಿಸಲು ಸಂಸ್ಥೆಯು ತನ್ನ ಸಭಾಂಗಣದಲ್ಲಿ ಗುರುವಾರ ಸಂಜೆ ಕರೆದಿದ್ದ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿತು.ಮಹಾನಗರ ಪಾಲಿಕೆಗೆ ತನ್ನ ನಿಲುವು ಪರಾಮರ್ಶಿಸಲು 15 ದಿನಗಳ ಕಾಲಾವಕಾಶ ನೀಡೋಣ. ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಹುಬ್ಬಳ್ಳಿ- ಧಾರವಾಡ ಬಂದ್ ಮಾಡಿ ಉಗ್ರ ಹೋರಾಟ ಮಾಡಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ತಜ್ಞರ ಸಮಿತಿ ರಚನೆ: ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಕರ ವಿಪರೀತ ಎನ್ನುವಷ್ಟರ ಮಟ್ಟಿಗೆ ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರ ಕಾರಣ ಎಂದು ಪಾಲಿಕೆ ಹೇಳುತ್ತಿದೆ. ಆದಕಾರಣ ವಾಣಿಜ್ಯೋದ್ಯಮ ಸಂಸ್ಥೆಯ ನೇತೃತ್ವದಲ್ಲೇ ಹೋರಾಟ ಮಾಡೋಣ. ಸದ್ಯ ಸಂಸ್ಥೆ 7-8 ಜನರ ಸಮಿತಿ ರಚಿಸಲಾಗುವುದು. ಈ ಸಮಿತಿಯೂ ಪೂರ್ವಾಪರ ಯೋಚನೆ ಮಾಡಿ, ತೆರಿಗೆ ಯಾವ ರೀತಿ ಅವೈಜ್ಞಾನಿಕವಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತವಾದ ಮನವಿ ಪತ್ರ ತಯಾರಿಸಲಿದೆ ಎಂದರು.ಬಳಿಕ ಮೇಯರ್, ಪಾಲಿಕೆ ಆಯುಕ್ತರು, ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಅದಕ್ಕೆ ಅವರು ಸ್ಪಂದಿಸಿದರೆ ಸರಿ ಇಲ್ಲವೆಂದರೆ ಎಲ್ಲರೂ ಸೇರಿಕೊಂಡು ಹುಬ್ಬಳ್ಳಿ-ಧಾರವಾಡ ಬಂದ್ ಮಾಡೋಣ. ಈ ಎಲ್ಲ ಪ್ರಯತ್ನಗಳಿಗೆ 15 ದಿನ ಬೇಕಾಗಬಹುದು. ಆದಕಾರಣ ಈ 15 ದಿನಗಳ ಕಾಲ ಯಾರೊಬ್ಬರು ಆಸ್ತಿ ಕರ ತುಂಬುವುದು ಬೇಡ. ಬೆಂಗಳೂರು, ಮೈಸೂರ ಸೇರಿದಂತೆ ಯಾವುದೇ ಮಹಾನಗರ ಪಾಲಿಕೆಯಲ್ಲಿ ಇಲ್ಲದಿರುವ ಹೆಚ್ಚಿನ ತೆರಿಗೆ ಇಲ್ಲಿ ಯಾಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಒಪ್ಪಿಗೆ ಇದ್ದರೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಹಮತಿ ಸೂಚಿಸಬೇಕು. ನಾವು ಮುಂದುವರಿಯುತ್ತೇವೆ ಎಂದರು. ಅದಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿಸಿದರು.
ಯುಜಿಡಿ ಸೆಸ್‌ಗೆ ಕಿಡಿ: ಸಭೆಯಲ್ಲಿ ಉದ್ಯಮಿ ಆರ್.ಎಂ. ಶ್ಯಾನಬಾಗ್ ಮಾತನಾಡಿ, ನಗರದ ಮಾರುಕಟ್ಟೆ ಪ್ರದೇಶದಲ್ಲಿ ಯುಜಿಡಿ ಹಾಳಾಗಿ ತಿಂಗಳು ಕಳೆದರೂ ಮಹಾನಗರ ಪಾಲಿಕೆ ಅದನ್ನು ದುರಸ್ತಿ ಮಾಡಲ್ಲ. ಈಗ ನೋಡಿದರೆ ಯುಜಿಡಿ ಸೆಸ್ ಹೆಚ್ಚಳ ಮಾಡಿದ್ದಾರೆ. ಸರಿಯಾಗಿ ಕೆಲಸ ಮಾಡದಿದ್ದರೆ ಹಣ ಯಾಕೆ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇರಲಾರದ ಶುಲ್ಕ ಇಲ್ಲಿ ಯಾಕೆ? ಎಂದು ಪ್ರಶ್ನಿಸಿದರು.ತೆರಿಗೆ ಹೆಚ್ಚಿಸಲು 2021ರಲ್ಲೇ ಮಾರ್ಗಸೂಚಿ ಬಂದಿದೆ. ಆದರೆ, ಆಗ ಏಕೆ ಮಾಡಲಿಲ್ಲ. ಈಗ ಏಕಾಏಕಿ ಪಾಲಿಕೆ ನಿರ್ಧಾರ ಕೈಗೊಂಡಿದೆ. ಇಷ್ಟು ದಿನ ಯಾಕೆ ವಿಳಂಬ ಮಾಡಿದರು. ತೆರಿಗೆ ಹಾಗೂ ಇ-ಸ್ವತ್ತು ಸಮಸ್ಯೆ ಪರಿಹರಿಸಲು ಪಾಲಿಕೆ ಆಯುಕ್ತರ ಭೇಟಿ ಮಾಡಿದರೆ ನಮ್ಮ ಹತ್ತಿರ ಏನು ಇಲ್ಲ. ಸರ್ಕಾರ ಕೈಯಲ್ಲಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಪಾಲಿಕೆ ಆಯುಕ್ತರೇ ಸುಪ್ರೀಂ ಆಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯಮಿ ಶಾಂತರಾಜ ಪೋಳ ಮಾತನಾಡಿ, ತೆರಿಗೆ ಹೆಚ್ಚಳವಾದ ಬಳಿಕ ಮಹಾನಗರ ಪಾಲಿಕೆಗೆ ಕೇವಲ 4-5 ದಿನದಲ್ಲಿ 5 ಕೋಟಿ ತೆರಿಗೆ ಸಂಗ್ರಹವಾಗಿದೆ. ಕರದಾತರಿಗೆ ಪಾಲಿಕೆ ಅಧಿಕಾರಿಗಳು ಬೆಲೆ ಕೊಡಲ್ಲ. ನಾವು ಸುಮ್ಮನಿದ್ದರೆ ಏನು ಆಗಲ್ಲ. ಹು-ಧಾ ಬಂದ್ ಮಾಡಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.ಡಾ. ರಘು ಮಾತನಾಡಿ, ಸಬ್ ರಿಜಿಸ್ಟರ್ ವ್ಯಾಲ್ಯೂ ಅನ್ವಯ ತೆರಿಗೆ ಸಂಗ್ರಹಿಸುತ್ತಿದ್ದು, ಇದನ್ನು ಹಿಂಪಡೆಯಬೇಕು. 2023 ರಿಂದ ಸೆಲ್ಫ್ ಅಸೆಸ್‌ಮೆಂಟ್ ಸ್ಥಗಿತವಾಗಿಲ್ಲ. ತೆರಿಗೆ ಸಂಗ್ರಹಿಸಲು ಮಹಾನಗರ ಪಾಲಿಕೆ ₹80 ಲಕ್ಷ ಖರ್ಚು ಮಾಡಿ ಆಧುನಿಕ ತಂತ್ರಜ್ಞಾನ ಅಳವಡಿಸಿದೆ. ಆದರೆ, ಅದು ಸರಿಯಿಲ್ಲ ಎಂದು ತಿಳಿಸಿದರು.
ಕೋರ್ಟ್ ಮೆಟ್ಟಿಲೇರಲು ಚಿಂತನೆ: ಇನ್ನು ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಪ್ರಕಾಶರಾವ್ ಮಾತನಾಡಿ, ಕೆಎಂಸಿ ಆ್ಯಕ್ಟ್‌ನ್ನು ಕೋರ್ಟ್‌ನಲ್ಲಿ ಚಾಲೆಂಜ್ ಮಾಡೋಣ. ಲೋಕಸಭೆಯಲ್ಲಿ ತೆಗೆದುಕೊಂಡಂತಹ ನಿರ್ಣಯವೊಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದುಂಟು. ಅದೇ ಮಾದರಿಯಲ್ಲಿ ಇಲ್ಲೂ ಹೋರಾಟವಾಗಬೇಕು ಎಂದರು.ಮತ್ತೆ ಕೆಲ ಉದ್ಯಮಿಗಳು, ಸಾರ್ವಜನಿಕರು, ಇದರ ವಿರುದ್ಧ ಕಾನೂನು ಹೋರಾಟವನ್ನೂ ನಡೆಸುವುದು ಸೂಕ್ತ. ಮೊದಲಿಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ರಿಟ್ ಹಾಕಿ ತಡೆಯಾಜ್ಞೆ ತರುವುದು ಬೆಸ್ಟ್. ಆ ಮೇಲೆ ಹೋರಾಟ ಮಾಡೋಣ ಎಂದು ಸಲಹೆ ನೀಡಿದರು.
ಕೆಸಿಸಿಐ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವಾಧ್ಯಕ್ಷ ರವೀಂದ್ರ ಬಳಿಗಾರ, ಜತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಸುರೇಶ ಕಿರೇಸೂರ, ಅಶೋಕ ಬಂಡಾರಿ, ಉದ್ಯಮಿ ಮುಕೇಶ ಎಸ್ ಇದ್ದರು.ಬೇಜವಾಬ್ದಾರಿ ಜನಪ್ರತಿನಿಧಿಗಳು:
ಕೈಗಾರಿಕಾ ಪ್ರದೇಶಗಳು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಆದರೂ ತೆರಿಗೆ ಕಟ್ಟಲಾಗುತ್ತಿದೆ. ಇಲ್ಲಿಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಬೇಜವಾಬ್ದಾರಿಯಿಂದ ಇದ್ದಾರೆ. ಅವೈಜ್ಞಾನಿಕ ಟ್ಯಾಕ್ಸ್ ನಿಲ್ಲಿಸಬೇಕು ಎಂದು ಉದ್ಯಮಿ ಅನಂತ ಕೆ. ಆರೋಪಿಸಿದರು.ಟ್ಯಾಕ್ಸ್ ಟೆರರಿಸಂ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ 20/10 ಸೈಜಿನಲ್ಲಿದ್ದ ಅಂಗಡಿಯೊಂದಕ್ಕೆ ₹3 ಸಾವಿರ ಟ್ಯಾಕ್ಸ್ ಪಾವತಿಸಿದ್ದೇವು. ಈ ವರ್ಷ ಅದು ₹9 ಸಾವಿರ ಆಗಿದೆ. ಇನ್ನು 17 ಸಾವಿರ ಪಾವತಿಸಿದ್ದ ಮನೆಯ ಟ್ಯಾಕ್ಸ್ ಈ ವರ್ಷ ₹41 ಸಾವಿರ ಆಗಿದೆ. ಇದನ್ನೆಲ್ಲ ನೋಡಿದರೆ ಪಾಲಿಕೆಯೂ ಟ್ಯಾಕ್ಸ್ ಟೆರರಿಸಂ (ಭಯೋತ್ಪಾದನೆ) ಮಾಡಿದಂತಾಗುತ್ತಿದೆ ಎಂದು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮೂಗು ಹಿಡಿಯಿರಿ, ಬಾಯಿ ತೆರೆಯುತ್ತಾರೆ: ಟ್ಯಾಕ್ಸ್ ವಿಷಯದಲ್ಲಿ ಜನಪ್ರತಿನಿಧಿಗಳೆಲ್ಲ ಸುಮ್ಮನೆ ಕುಳಿತ್ತಿದ್ದಾರೆ. ಜನಪ್ರತಿನಿಧಿಗಳನ್ನು ಇಲ್ಲಿಗೆ ಕರೆಯೋಣ. ಪ್ರಶ್ನೆ ಮಾಡೋಣ. ಹೋರಾಟ ಮಾಡೋಣ. ಮೂಗು ಹಿಡಿದರೆ ತಾನಾಗಿಯೇ ಬಾಯಿ ತೆರೆಯುತ್ತದೆ. ಆಸ್ತಿಕರ ಕುರಿತಂತೆ ಈ ರೀತಿ ಕ್ರಮಕ್ಕೆ ನಾವೆಲ್ಲ ಸಿದ್ಧರಾದರೆ ತಾನಾಗಿಯೇ ಸರಿದಾರಿಗೆ ಬರುತ್ತದೆ ಎಂದು ಎಂಜಿನೀಯರ್ ಸುರೇಶ ಕಿರೇಸೂರ ಹೇಳಿದರು.