- ಜಿಲ್ಲಾ ವಕೀಲರ ಸಂಘಕ್ಕೆ ಹೈಕೋರ್ಟ್ ಪ್ರಶಂಸಾ ಪತ್ರ ಹಸ್ತಾಂತರ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶೋಷಿತರು, ದಮನಿತರು, ಸಮಾಜದ ಕೆಳಸ್ತರದಲ್ಲಿ ಇರುವವರು ನ್ಯಾಯ ವಿತರಣೆಯಿಂದ ವಂಚಿತರಾಗಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ನ್ಯಾಯ ದೊರಕಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಜುಲೈನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕಾಗಿ ಏರ್ಪಡಿಸಲಾಗಿದ್ದ ವಕೀಲರಿಗೆ ಅಭಿನಂದನಾ ಸಮಾರಂಭ ಹಾಗೂ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಲೋಕ್ ಅದಾಲತ್ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಜಿಲ್ಲಾ ವಕೀಲರ ಸಂಘಕ್ಕೆ ಪ್ರಶಂಸಾ ಪತ್ರ ನೀಡಿ ಅವರು ಮಾತನಾಡಿದರು.ಭಾರತದಲ್ಲಿ ಧರ್ಮ, ವರ್ಗ, ಜಾತಿ, ಲಿಂಗ ಹಾಗೂ ಲಿಂಗಬೇಧವನ್ನು ಮೀರಿ ಜನತೆ ನ್ಯಾಯಾಲಯಗಳನ್ನು ನ್ಯಾಯ ದೇಗುಲಗಳೆಂದು ಭಾವಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಲು ಅತ್ಯಂತ ಪರಿಣಾಮಕಾರಿಯಾಗಿ ನ್ಯಾಯಾಲಯಗಳು ವಕೀಲರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲೇ ಮುಂಚೂಣಿ:ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಮಾತನಾಡಿ, ಹಸಿದವರಿಗೆ ಅನ್ನ, ಕಷ್ಟದಲ್ಲಿರುವವರಿಗೆ ಸಹಾಯ, ತಪ್ಪು ಮಾಡಿದವರನ್ನು ಸರಿದಾರಿಗೆ ತರುವ ಮೂಲಕ ಸೋಲಿನಲ್ಲೂ ಧೈರ್ಯ, ಉತ್ಸಾಹ ತುಂಬುವ ಮೂಲಕ, ಕಕ್ಷಿದಾರರಿಗೆ ತಾಯಿಬೇರುಗಳಾಗಿ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಲೋಕ್ ಅದಾಲತ್‌ನಲ್ಲಿ 25 ಕುಟುಂಬಗಳನ್ನು ಒಂದು ಮಾಡುವ ಮೂಲಕ ಕೌಟುಂಬಿಕ ನ್ಯಾಯಾಲಯ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಜಿಲ್ಲಾ ಸೇವಾ ಮತ್ತು ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಮಾತನಾಡಿ, ಜಿಲ್ಲಾ ವಕೀಲರ ಸಂಘವು ಲೋಕ್ ಅದಾಲತ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಈ ಸಾಧನೆಗೆ ಕರ್ನಾಟಕ ಹೈಕೋರ್ಟ್‌ನಿಂದ ಪ್ರಶಂಸಾ ಪತ್ರ ಪಡೆಯುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್‌ಕುಮಾರ, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ, ನ್ಯಾಯಾಧೀಶರಾದ ರೇಷ್ಮಾ, ವಿ.ಎಲ್. ಅಮರ್, ಸಿ.ನಾಗೇಶ್, ಎಚ್.ಡಿ.ಗಾಯಿತ್ರಿ, ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ, ಕಾರ್ಯದರ್ಶಿ ಎಸ್.ಬಸವರಾಜ, ವಾಗೀಶ್ ಕಟಗಿಹಳ್ಳಿ ಮಠ, ಆರ್.ಭಾಗ್ಯಲಕ್ಷ್ಮೀ, ಮಧುಸೂದನ್, ಎಂ.ರಾಘವೇಂದ್ರ, ಜಿ.ಜೆ.ಸಂತೋಷ್ ಕುಮಾರ, ಎಲ್.ನಾಗರಾಜ, ಕೆ.ಎಂ.ನೀಲಕಂಠಯ್ಯ, ಬಿ.ಅಜಯ, ಎಂ.ಚೌಡಪ್ಪ, ಇನ್ನಿತರ ವಕೀಲರು ಪಾಲ್ಗೊಂಡಿದ್ದರು.
- - -ಬಾಕ್ಸ್ * ನ್ಯಾಯಕ್ಕಾಗಿ ಹೆಚ್ಚು ಹೊಣೆಗಾರಿಕೆ ಅಗತ್ಯ: ಅಧ್ಯಕ್ಷ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಭಾರತದಲ್ಲಿ ನ್ಯಾಯಾಂಗವು ಇಂದಿಗೂ ಜನತೆಯ ವಿಶ್ವಾಸ, ನಂಬಿಕೆ ಉಳಿಸಿಕೊಂಡಿದೆ. ಆ ನಿಟ್ಟಿನಲ್ಲಿ ನ್ಯಾಯಾಂಗದ ಭಾಗವಾಗಿರುವ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ಹೆಚ್ಚು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಲೋಕ್ ಅದಾಲತ್‌ನಲ್ಲಿ ವಕೀಲರ ಸಹಕಾರದಿಂದ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಕರ್ನಾಟಕ ಹೈಕೋರ್ಟ್ ನೀಡಿರುವ ಪ್ರಶಂಸಾ ಪತ್ರ ದಾವಣಗೆರೆ ವಕೀಲ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಪ್ರತಿಪಾದಿಸಿದರು.
- - --6ಕೆಡಿವಿಜಿ37ಃ:
ದಾವಣಗೆರೆ ಜಿಲ್ಲಾ ವಕೀಲರ ಸಂಘಕ್ಕೆ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಕರ್ನಾಟಕ ಹೈಕೋರ್ಟ್‌ನಿಂದ ನೀಡಲಾದ ಪ್ರಶಂಸಾ ಪತ್ರ ವಿತರಿಸಿ, ಅಭಿನಂದಿಸಿದರು.