ಕನ್ನಡಪ್ರಭ ವಾರ್ತೆ ದಾವಣಗೆರೆ
ನಾಗರಿಕತೆ ಅಭಿವೃದ್ಧಿಯಾಗಲು, ಜನ ನೆಮ್ಮದಿ ಬದುಕು ಕಾಣಲು, ಜವಾಬ್ದಾರಿ ಕೆಲಸ ಕೊಡುವ ಆರ್ಥಿಕ ಚಟುವಟಿಕೆ ಮುಖ್ಯವೆಂಬುದನ್ನು ಐದು ನೂರು ವರ್ಷಗಳ ಹಿಂದೆಯೇ ಅರಿತಿದ್ದ ನಾಡಪ್ರಭು ಕೆಂಪೇಗೌಡರು ಸುಸಜ್ಜಿತ ಬೆಂಗಳೂರನ್ನು ನಿರ್ಮಿಸದಿದ್ದರೆ ಇಂದು ನಾಡಿನ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿರುತ್ತಿತ್ತು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಬೆಂಗಳೂರನ್ನು ಐದು ಶತಮಾನಗಳ ಹಿಂದೆಯೇ ಕಟ್ಟುವ ಮೂಲಕ ಜನ ಜೀವನ ರೂಪಿಸಲು ಅನುವು ಮಾಡಿದ್ದರು. ರೈತರಿಗೂ ಅನುಕೂಲ ಮಾಡಿ, ಕೆರೆಗಳ ನಿರ್ಮಿಸಿದ್ದರು. ಈ ಮೂಲಕ ಸುಸ್ಥಿರ ಕೃಷಿಗೆ ಅಂದೇ ಒತ್ತು ನೀಡಿದ್ದರು ಎಂದರು.
ಅಪ್ರತಿಮ ಆಡಳಿತಗಾರರಾಗಿದ್ದ ಕೆಂಪೇಗೌಡರ ಕಾರ್ಯ ನಿಷ್ಟೆ, ಸಮಯಪ್ರಜ್ಞೆ, ದೂರದೃಷ್ಟಿಯಂತಹ ಆದರ್ಶಗಳು ಮತ್ತು ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡಾಗ ಬಲಿಷ್ಟ ಕರ್ನಾಟಕ ಮಾತ್ರವಲ್ಲದೇ, ಬಲಿಷ್ಟ ಭಾರತ ಕಟ್ಟಲು ಸಾಧ್ಯ. ಕೆಂಪೇಗೌಡರು ಕೇವಲ ಅಪ್ರತಿಮ ಆಡಳಿತಗಾರನಷ್ಟೇ ಆಗಿರದೇ, ಶ್ರೇಷ್ಟ ರಾಜಕೀಯ, ಶಿಕ್ಷಣ ತಜ್ಞ, ದೂರದೃಷ್ಟಿ ಹೊಂದಿದ್ದ ಮೇದಾವಿಯಾಗಿದ್ದರು. ರಾಜ್ಯ, ರಾಷ್ಟ್ರಕ್ಕೆ ಕೆಂಪೇಗೌಡರ ಕೊಡುಗೆ ಅವಿಸ್ಮರಣೀಯವಾದುದು ಎಂದರು.ಕೆಂಪೇಗೌಡರು ಅತ್ಯಂತ ಕ್ರಿಯಾಶೀಲರಾಗಿದ್ದರು. ಸಮನ್ವಯತೆ ನಗರ ನಿರ್ಮಾಣ ಮಾಡಿದ ಖ್ಯಾತಿ ನಾಡಪ್ರಭುವಿಗೆ ಸಲ್ಲುತ್ತದೆ. ಸುಮಾರು 38 ವರ್ಷಗಳ ಸುಧೀರ್ಘ ಕಾಲ ರಾಜ್ಯಭಾರ ಮಾಡಿದ್ದಲ್ಲದೇ, ಶಾಂತಿ, ಸುವ್ಯವಸ್ಥೆ, ಆರ್ಥಿಕತೆ, ಸುಖಮಯ ಜೀವನ ಜನರಿಗೆ ಕಟ್ಟಿಕೊಟ್ಟಿದ್ದಲ್ಲದೇ, ಸುಸ್ಧಿರ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟಂತಹ ದಕ್ಷ ಆಡಳಿತಗಾರ ಕೆಂಪೇಗೌಡರು. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕೋಟ್ಯಾಂತರ ಜನರಿಗೆ ಬದುಕನ್ನು ಕಟ್ಟಿಕೊಟ್ಟಿದ್ದರೆ ಅದಕ್ಕೆ ಕೆಂಪೇಗೌಡರ ಪರಿಶ್ರಮ ಕಾರಣ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತರಲ್ಲ. ಬೆಂಗಳೂರು ನಗರಕ್ಕಷ್ಟೇ ಸೀಮಿತರೂ ಅಲ್ಲ. ಇಡೀ ನಾಡಿಗೆ ಸೇರಿದಂತಹವರು. ಬಸವಣ್ಣ ಹೇಗೆ ಎಲ್ಲಾ ಸಮಾಜಕ್ಕೂ ಬೇಕಾದವರೋ ಅದೇ ರೀತಿ ಕೆಂಪೇಗೌಡರು ಎಲ್ಲಾ ಸಮಾಜಕ್ಕೂ ಬೇಕಾದಂತಹವರು. ಕೆಂಪೇಗೌಡರ ಆದರ್ಶ, ಕಾರ್ಯನಿಷ್ಟೆ ನಾವೆಲ್ಲರೂ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. 5 ಶತಮಾನಗಳ ಹಿಂದೆಯೇ 64 ವೃತ್ತಿಗಳಿಗೆ ಪ್ರತ್ಯೇಕ ಪೇಟೆ ನಿರ್ಮಿಸಿದವರು ಕೆಂಪೇಗೌಡರು ಎಂದರು.ಕೋಟೆಗಳನ್ನು ಕಟ್ಟಿ, ಬೆಂಗಳೂರನ್ನು ಸಂರಕ್ಷಿಸಿದ ಕೆಂಪೇಗೌಡರು ಪೇಟೆ ನಿರ್ಮಿಸುವ ಮೂಲಕ ಸಮಾಜದ ಎಲ್ಲಾ ವೃತ್ತಿಗಳಿಗೂ ಸಂಬಂಧಿಸಿದಂತೆ ಅವಕಾಶ, ಆದ್ಯತೆ ನೀಡಿದ್ದರು. 64 ಪೇಟೆ ನಿರ್ಮಿಸಿದರೂ ಯಾವುದೇ ಜಾತಿ, ಮತ ಬೇಧವಿಲ್ಲದೇ ಎಲ್ಲಾ ವರ್ಗಕ್ಕೂ ಅನುಕೂಲ ಕಲ್ಪಿಸುವ ದೂರದೃಷ್ಟಿ ಹೊಂದಿದ್ದರು. ಇಂದಿನ ಬೃಹತ್ ಬೆಂಗಳೂರು ಆಗಿ ಬೆಳೆಯಲು ಅಂದೇ ಮುನ್ನುಡಿ ಬರೆದಿದ್ದರು. ಬೆಂಗಳೂರು ನಗರ ಉಳಿಸಲು ಯಾರನ್ನಾದರೂ ಬಲಿ ಕೊಡಬೇಕೆಂಬ ಮಾತು ಬಂದಾಗ ಅದನ್ನರಿತ ಕೆಂಪೇಗೌಡರ ಸೊಸೆ ತಾನಾಗಿಯೇ ಬಲಿಯಾಗಿ ಅರ್ಪಿಸಿಕೊಂಡಿದ್ದನ್ನು ಇತಿಹಾಸದಿಂದ ನಾವು ಅರಿಯಬಹುದು ಎಂದರು.
ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಉಪ ಮೇಯರ್ ಯಶೋಧ ಯೋಗೇಶ, ಡಿಡಿಪಿಐ ಜಿ.ಕೊಟ್ರೇಶ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ತಹಸೀಲ್ದಾರ್ ಡಾ.ಎಂ.ವಿ.ಅಶ್ವತ್ಥ್, ಪಶು ಸಂಗೋಪನಾ ಅಧಿಕಾರಿ ಡಾ.ಚಂದ್ರಶೇಖರ ಸುಂಕದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬಿಇಓ ಪುಷ್ಪಲತಾ, ದೂಡಾ ಆಯುಕ್ತ ಬಸವನಗೌಡ ಕೋಟೂರ, ಒಕ್ಕಲಿಗ ಸಮಾಜದ ಅಧ್ಯಕ್ಷ ಅಶೋಕ ಗೌಡ, ಮುಖಂಡರಾದ ಡಿ.ಎನ್.ಜಗದೀಶ, ಕೆ.ಟಿ.ಗೋಪಾಲಗೌಡ, ಎಸ್.ಟಿ.ಯೋಗೇಶ, ನಾಗರಾಜ, ಟಿ.ಕುಮಾರ, ಇತರರು ಇದ್ದರು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮಕ್ಕಳು ನೃತ್ಯ ಪ್ರದರ್ಶಿಸಿದರು. ಕೆಂಪೇಗೌಡರ ಕುರಿತ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.