ಗದಗಿಗೆ ಕೇಂದ್ರೀಯ ವಿದ್ಯಾಲಯ ಇನ್ನೂ ಮರೀಚಿಕೆ!

KannadaprabhaNewsNetwork | Published : Jul 6, 2024 12:53 AM

ಸಾರಾಂಶ

ಮೊದಲಿನ ಜಾಗೆ ಬಿಟ್ಟು ಬೇರೆಡೆ ಭೂಮಿ ಗುರುತಿಸಲು ನಿರ್ಧರಿಸಿ ಇದರಲ್ಲಿಯೇ ಕಾಲಹರಣ ಮಾಡಿದ ಹಿನ್ನೆಲೆಯಲ್ಲಿ 3ನೇ ಅವಧಿ ಮುಗಿಯವ ವೇಳೆಗೆ ಗದಗ ತಾಲೂಕಿನ ಶಿರುಂಜ ಗ್ರಾಮದ ಬಳಿ ಭೂಮಿ ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅಲ್ಲಿಂದ ಕೇಂದ್ರಕ್ಕೆ ಹೋಗಬೇಕಿದೆ

ಶಿವಕುಮಾರ ಕುಷ್ಟಗಿ ಗದಗ

ಧಾರವಾಡ ಜಿಲ್ಲೆಯಿಂದ ಗದಗ ಬೇರ್ಪಟ್ಟು ಜಿಲ್ಲಾ ಕೇಂದ್ರವಾಗಿ ರೂಪಗೊಂಡು 25 ವರ್ಷಗಳೇ ಕಳೆದು ಹೋದರೂ ಇಲ್ಲಿ ಇಂದಿಗೂ ಒಂದು ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ. ಅಧೊಕಾರಿಗಳು ಮತ್ತು ಜನಪ್ರತಿನಿಧಿಗಳ ಈ ನಿರ್ಲಕ್ಷ್ಯಕ್ಕೆ ಜಿಲ್ಲೆಯ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರದ ನೌಕರರ ಮಕ್ಕಳು ಹಾಗೂ ಪ್ರತಿಭಾವಂತ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸುತ್ತದೆ. ಈ ರೀತಿ ಪ್ರಾರಂಭವಾಗುವ ವಿದ್ಯಾಲಯಗಳಿಗೆ ಜಮೀನು ಸೇರಿದಂತೆ ಅಗತ್ಯ ಸೌಲಭ್ಯ ಜಿಲ್ಲಾಡಳಿತ ಕಲ್ಪಿಸಬೇಕು. ಆದರೆ ಆ ರೀತಿಯ ಪ್ರಯತ್ನಗಳು ಮಾತ್ರ ನೆಪ ಮಾತ್ರಕ್ಕೆ ನಡೆದಿವೆ.

ಬಾಡಿಗೆ ಕಟ್ಟಡವೂ ಸಿಗಲಿಲ್ಲವೇ?: ಪೂರ್ಣ ಪ್ರಮಾಣದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗುವವರೆಗೂ ಉತ್ತಮವಾದ ಬಾಡಿಗೆ ಕಟ್ಟಡ ಗುರುತಿಸಿ, ಕೇಂದ್ರೀಯ ವಿದ್ಯಾಲಯದ ಸಂಘಟನ್‌ಗೆ ರವಾನಿಸಬೇಕಾದದ್ದು ಆಯಾ ಜಿಲ್ಲಾಡಳಿತ ಮತ್ತು ಶಾಸಕರು, ಸಚಿವರು, ಲೋಕಸಭಾ ಸದಸ್ಯರ ಕರ್ತವ್ಯ. ಆದರೆ ಆ ಪ್ರಯತ್ನ ಇದುವರೆಗೂ ಗದಗ ಜಿಲ್ಲೆಯಲ್ಲಿ ನಡೆದಿಲ್ಲ.

ಸ್ಥಳ ನಿಗದಿಯಲ್ಲಿಯೇ 15 ವರ್ಷ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದಾಗಲೇ ಅಂದಿನ ಸಂಸದ ಶಿವಕುಮಾರ ಉದಾಸಿ ಗದಗ ಜಿಲ್ಲೆಯಲ್ಲೊಂದು ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡುವುದಕ್ಕೆ ಚಾಲನೆ ನೀಡಿದ್ದರು. ಆದರೆ ಅವರಿಗೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ ಮೊದಲ 5 ವರ್ಷ ಚರ್ಚೆಯಲ್ಲಿಯೇ ಕಳೆದರು. 2ನೇ ಅವಧಿಯ ವೇಳೆಯಲ್ಲಿ ಗದಗ ತಾಲೂಕಿನ ಲಕ್ಷ್ಮೇಶ್ವರ ರಸ್ತೆಯಲ್ಲಿನ ಹರ್ತಿ ಗ್ರಾಮದ ಸಮೀಪದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ಭೂಮಿ ಗುರುತಿಸಿ ಅದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆ ನೀಡುವ ಹಂತದಲ್ಲಿದ್ದಾಗಲೇ ಅದು ಕೂಡಾ ನನೆಗುದಿಗೆ ಬಿದ್ದು 2ನೇ ಅವಧಿಯೂ ಹಾಗೆಯೇ ಮುಗಿದು ಹೋಯಿತು. ಮತ್ತೆ 3 ನೇ ಅವಧಿಯ ಕೊನೆ ಕೊನೆ ಚಾಲನೆ ದೊರೆಯಿತಾದರೂ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಇದುವರೆಗೂ ಅದು ಕೂಡಾ ಸಾಕಾರಗೊಂಡಿಲ್ಲ.

ಶಿರುಂಜ ಬಳಿ ಅಂತಿಮ: ಮೊದಲಿನ ಜಾಗೆ ಬಿಟ್ಟು ಬೇರೆಡೆ ಭೂಮಿ ಗುರುತಿಸಲು ನಿರ್ಧರಿಸಿ ಇದರಲ್ಲಿಯೇ ಕಾಲಹರಣ ಮಾಡಿದ ಹಿನ್ನೆಲೆಯಲ್ಲಿ 3ನೇ ಅವಧಿ ಮುಗಿಯವ ವೇಳೆಗೆ ಗದಗ ತಾಲೂಕಿನ ಶಿರುಂಜ ಗ್ರಾಮದ ಬಳಿ ಭೂಮಿ ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅಲ್ಲಿಂದ ಕೇಂದ್ರಕ್ಕೆ ಹೋಗಬೇಕಿದೆ.

ನೂತನ ಸಂಸದರು ಗಮನಿಸಲಿ: ಹಲವಾರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಇತ್ತೀಚಿಗಷ್ಟೇ ಆಯ್ಕೆಯಾಗಿರುವ ಸಂಸದ ಬಸವರಾಜ ಬೊಮ್ಮಾಯಿ ಆದ್ಯತೆ ನೀಡಿ ಸ್ಥಾಪನೆಗೆ ಮುಂದಾಗಬೇಕಿದೆ. ಸಧ್ಯ ಭೂಮಿ ಗುರುತಿಸಲಾಗಿದೆ. ಅದಕ್ಕೆ ಬೇಕಾಗುವ ಅಗತ್ಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿಯಾದರೂ ನೂತನ ಸಂಸದರು ಈ ಬಗ್ಗೆ ಗಮನ ನೀಡಲಿ, ಗದಗ ಶಾಸಕರು ಇದಕ್ಕೆ ಸಾಥ್ ನೀಡಲಿ ಎನ್ನುವ ಮಹದಾಸೆ ಜಿಲ್ಲೆಯ ಜನರದ್ದಾಗಿದೆ.

ಅನ್ಯ ಜಿಲ್ಲೆಗಳಲ್ಲಿ ಪ್ರಾರಂಭ: ಗದಗ ಅಕ್ಕಪಕ್ಕದ ಜಿಲ್ಲೆಯಗಳಲ್ಲಿ ಈಗಾಗಲೇ ಕೇಂದ್ರೀಯ ವಿದ್ಯಾಲಯಗಳು ಪ್ರಾರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಸ್ವಂತ ಕಟ್ಟಡಗಳಿಲ್ಲದಿದ್ದರೂ ಬಾಡಿಗೆ ಕಟ್ಟಡಗಳಲ್ಲಾದರೂ ವಿದ್ಯಾಲಯಗಳನ್ನು ಪ್ರಾರಂಭಿಸುವ ಮೂಲಕ ಬಡ ಹಾಗೂ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಅಂತಹ ಪ್ರಯತ್ನಗಳು ಗದಗ ಜಿಲ್ಲೆಯಲ್ಲಿಯೂ ನಡೆಯಬೇಕಿದೆ.

ಮೊದಲು ನಿಗದಿಪಡಿಸಲಾಗಿದ್ದ ಜಮೀನು ಬೇರೆ ಬೇರೆ ಕಾರಣಗಳಿಂದ ಬಿಟ್ಟು ಹೋಗಿದೆ. ಈಗ ಗದಗ ತಾಲೂಕಿನ ಶಿರುಂಜ ಗ್ರಾಮದಲ್ಲಿ 10 ಎಕರೆ ಭೂಮಿ ಗುರುತಿಸಿ, ಅಂತಿಮಗೊಳಿಸಿ ಈ ಕುರಿತು ಕೇಂದ್ರೀಯ ವಿದ್ಯಾಲಯ ಸಂಘಟನ್ ಗೆ ಗದಗ ಜಿಲ್ಲಾಡಳಿತದಿಂದ ಅಧಿಕೃತವಾಗಿ ಪತ್ರ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಹೇಳಿದ್ದಾರೆ.

Share this article