ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲೀಕರು ಮತ್ತು ಎನ್‌ಎಚ್‌ಎಐ ಅನುಮತಿಸಿದ ಡಿಬಿಎಲ್ ಕಂಪನಿಯವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತಿಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಎಂಎಂಡಿಎಲ್ ಕಾಯ್ದೆ-1957 ರಡಿ ಎಫ್‌ಐಆರ್ ದಾಖಲಿಸಲಾಗಿದೆ.
ಮಂಗಳೂರು : ಮಂಗಳೂರು ಹೊರ ವಲಯದ ಕೆತ್ತಿಕಲ್ಲು ಭೂಕುಸಿತ ಪ್ರದೇಶದಲ್ಲಿ ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲೀಕರು ಮತ್ತು ಎನ್‌ಎಚ್‌ಎಐ ಅನುಮತಿಸಿದ ಡಿಬಿಎಲ್ ಕಂಪನಿಯವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತಿಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಎಂಎಂಡಿಎಲ್ ಕಾಯ್ದೆ-1957 ರಡಿ ಎಫ್‌ಐಆರ್ ದಾಖಲಿಸಲಾಗಿದೆ. ವೆಟ್‌ವೆಲ್‌ನ ಸುರಕ್ಷತೆಗೆ ಅಪಾಯವಿರುವುದರಿಂದ ಮಹಾನಗರ ಪಾಲಿಕೆಯಿಂದಲೂ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
2018 ರಿಂದ 2022ರ ಅವಧಿಯಲ್ಲಿ ಗರಿಷ್ಟ ಮಣ್ಣು ಅಗೆಯುವಿಕೆ ನಡೆದಿರುವುದಾಗಿ ಎನ್‌ಎಚ್‌ಎಐ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಎಸ್‌ಐ ಉಪಗ್ರಹದ ಛಾಯಾಚಿತ್ರಗಳ ಮೂಲಕ ತಿಳಿಯಲಾಗಿದೆ. ಈ ಬಗ್ಗೆ ಸಾಕ್ಷಿಯಾಗಿ 2022 ಡಿಸೆಂಬರ್‌ನ ವಿಡಿಯೋವನ್ನು ಎನ್‌ಎಚ್‌ಎಐ ಒದಗಿಸಿದೆ.ಮಣ್ಣು ಅಗೆದ ಚಟುವಟಿಕೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಾರಂಭವಾಗಿದೆ. ಇಲಾಖಾ ಅಧಿಕಾರಿಗಳು, ಎನ್‌ಎಚ್‌ಎಐ ಮತ್ತು ಡಿಬಿಎಲ್ ಕಂಪನಿ, ಭೂಮಾಲೀಕರು, ಅಗತ್ಯ ದಾಖಲೆಗಳನ್ನು ಮಂಡಿಸಿದ್ದಾರೆ.
ಮುಂದಿನ ಕ್ರಮಕ್ಕಾಗಿ ಪೊಲೀಸ್ ತನಿಖೆಯನ್ನು ನಡೆಸಲು ಸಹಾಯಕ ಪೊಲೀಸ್ ಆಯುಕ್ತರು, ಸೆಂಟ್ರಲ್ ವಿಭಾಗ, ಮಂಗಳೂರು ನಗರ ಇವರನ್ನು ತನಿಖಾಧಿಕಾರಿಯಾಗಿ ಪೊಲೀಸ್ ಆಯುಕ್ತರು ನೇಮಿಸಿರುತ್ತಾರೆ. ಪೊಲೀಸ್ ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಂಸಿಸಿ ಮತ್ತು ಎನ್‌ಐಟಿಕೆ ತಂಡ , ಜಿಲ್ಲಾಡಳಿತದ ಪರವಾಗಿ ಜಿಎಸ್‌ಐ ತಂಡ ಹಾಗೂ ಎನ್‌ಎಚ್‌ಎಐ ಪರವಾಗಿ ಐಐಟಿ ತಂಡದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಒಟ್ಟು ಮೇಲ್ಮೈ ನೀರು, ನೀರಿನ ಮಟ್ಟ, ನೀರಿನ ಮೂಲ, ಮಣ್ಣಿನ ಗುಣ ಮತ್ತಿತರ ಮಾಹಿತಿಗಳನ್ನು ಈಗಾಗಲೇ ಸಂಗ್ರಹಿಸಿದ್ದಾರೆ. ಈ ಸಮಿತಿಯು ಕೆತ್ತಿಕಲ್‌ನಲ್ಲಿ ಯಾವ ರೀತಿಯ ಪರ್ಯಾಯ ವ್ಯವಸ್ಥೆ ಮಾಡಬೇಕು, ಶಾಶ್ವತ ಪರಿಹಾರ ಸಾಧ್ಯವೇ ಎಂಬುದರ ಬಗ್ಗೆ ವರದಿ ನೀಡಲಿದೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.