ಖಾಕಿ ಪಾಠ: ವೃದ್ಧಾಶ್ರಮದಿಂದ ಪೋಷಕರು ಮರಳಿ ಮನೆಗೆ!

KannadaprabhaNewsNetwork | Updated : Feb 18 2024, 12:18 PM IST

ಸಾರಾಂಶ

ತಮ್ಮ ವೃದ್ಧ ಪೋಷಕರನ್ನು ಹಣ-ಆಸ್ತಿಗೆ ಜಗಳ ಮಾಡಿಕೊಂಡು ಬೀದಿಗೆ ತಳ್ಳುವ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರಾಜಧಾನಿ ಬೆಂಗಳೂರಿನ ಪೊಲೀಸರ ಎಚ್ಚರಿಕೆ ಬೆನ್ನಲ್ಲೇ ವೃದ್ಧಾಶ್ರಮಗಳಲ್ಲಿ ಇರುವ ಹಿರಿಯ ಜೀವಗಳ ಬದುಕಿಗೆ ಹೊಸ ಬೆಳಕು ಮೂಡಿದೆ.

ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ವೃದ್ಧ ಪೋಷಕರನ್ನು ಹಣ-ಆಸ್ತಿಗೆ ಜಗಳ ಮಾಡಿಕೊಂಡು ಬೀದಿಗೆ ತಳ್ಳುವ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರಾಜಧಾನಿ ಬೆಂಗಳೂರಿನ ಪೊಲೀಸರ ಎಚ್ಚರಿಕೆ ಬೆನ್ನಲ್ಲೇ ವೃದ್ಧಾಶ್ರಮಗಳಲ್ಲಿ ಇರುವ ಹಿರಿಯ ಜೀವಗಳ ಬದುಕಿಗೆ ಹೊಸ ಬೆಳಕು ಮೂಡಿದೆ.

ಈಗ ಪೊಲೀಸರ ಪ್ರಯತ್ನದ ಫಲವಾಗಿ ತಮ್ಮ ಗೂಡಿಗೆ ಇಬ್ಬರು ವೃದ್ಧರು ಮರಳಿದ್ದು, ಇದೇ ರೀತಿ ಮತ್ತಷ್ಟು ವೃದ್ಧರು ಪರರ ಆಸರೆ ತೊರೆದು ಸ್ವಂತ ನೆಲೆಗೆ ಸಾಗುವ ನಿರೀಕ್ಷೆಯಲ್ಲಿದ್ದಾರೆ. 

ಆ್ಯಸಿಡ್ ಸಂತ್ರಸ್ತೆಯರ ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿ ಹೊತ್ತ ಬಳಿಕ ತಮ್ಮ ಬಳಗದಿಂದಲೇ ಅನಾಥರಾಗುವ ಹಿರಿಯ ಜೀವಗಳ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ.

ಕೊತ್ತನೂರು ಸಮೀಪದ ದೊಡ್ಡಗುಬ್ಬಿ ಗ್ರಾಮದ ಆನಂದಪ್ಪ (67) ಹಾಗೂ ವಿದ್ಯಾರಣ್ಯಪುರ ಹತ್ತಿರದ ವಡೇರಹಳ್ಳಿಯ ಶಂಕರ್‌ (70) ಮನೆಗೆ ಮರಳಿದವರು. ಈ ಇಬ್ಬರು ಯಲಹಂಕದ ಕೊಗಿಲು ಬಳಿಯ ‘ಕರ್ನಾಟಕ ಸ್ನೇಹ ಜೀವಿ ಟ್ರಸ್ಟ್’ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಗೂಡು ಸೇರಿದ ಬಳಿಕವು ಆ ವೃದ್ಧರ ಕಾಳಜಿ ಬಗ್ಗೆ ಪೊಲೀಸರು ನಿಗಾವಹಿಸಿದ್ದಾರೆ.

ಹೊಸ ವರ್ಷಾಚರಣೆಯನ್ನು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾರ್ಥಕವಾಗಿಸಲು ಯೋಜಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಹೊಸ ವರ್ಷದ ಸಂಭ್ರಮವನ್ನು ನೊಂದವರೊಂದಿಗೆ ಕಳೆಯುವಂತೆ ಪೊಲೀಸರಿಗೆ ಸೂಚಿಸಿದರು. 

ಅಂತೆಯೇ ವೃದ್ಧಾಶ್ರಮಗಳು, ನಿರಾಶ್ರಿತರ ಮತ್ತು ಅಸಹಾಯಕ ಮಕ್ಕಳ ಪಾಲನಾ ಕೇಂದ್ರಗಳು ಹಾಗೂ ಅನಾಥಾಲಯಗಳಲ್ಲಿ ವರ್ಷದ ಮೊದಲ ದಿನವನ್ನು ಕಳೆದು ಸಂಕಷ್ಟದ್ದದಲ್ಲಿವರ ನೋವಿಗೆ ಪೊಲೀಸರು ದನಿಯಾದರು.

ಇತ್ತ ಆಯುಕ್ತ ಕಚೇರಿಯ ಕಮಾಂಡ್‌ ಸೆಂಟರ್‌ನಲ್ಲಿ ಆ್ಯಸಿಡ್ ಸಂತ್ರಸ್ತೆಯರೊಂದಿಗೆ ಆಯುಕ್ತರ ದಂಪತಿ ಆಚರಿಸಿದರು. ಕೇವಲ ಸಡಗರಕ್ಕೆ ಮಾತ್ರ ಕಾರ್ಯಕ್ರಮ ಸೀಮಿತಗೊಳಿಸಿದರೆ ಅರ್ಥವಿಲ್ಲವೆಂದು ಭಾವಿಸಿದ ದಯಾನಂದ್ ಅ‍ವರು, ನೊಂದ ಜೀವಗಳಿಗೆ ನೆರವಿನ ಹಸ್ತ ಚಾಚಿದರು. 

ಆಗ ಆ್ಯಸಿಡ್ ಸಂತ್ರಸ್ತೆಯರ ಮಕ್ಕಳ ಶಿಕ್ಷಣಕ್ಕೆ ದಾರಿಯಾಯಿತು. ಈಗ ಹಣ-ಆಸ್ತಿ ಸಲುವಾಗಿ ತಂದೆ-ತಾಯಿಯನ್ನು ಬೀದಿ ಪಾಲು ಮಾಡುವ ಮಕ್ಕಳಿಗೆ ಕಾನೂನಿನ ಮೂಲಕ ಪೊಲೀಸರು ಸಾಮಾಜಿಕ ಹೊಣೆಗಾರಿಕೆ ತೋರಿಸಿದ್ದಾರೆ.

ಆಯುಕ್ತರ ಸೂಚನೆಯ ಹಿನ್ನೆಲೆಯಲ್ಲಿ ಕೊಗಿಲು ಗ್ರಾಮದ ‘ಕರ್ನಾಟಕ ಸ್ನೇಹ ಜೀವಿ ಟ್ರಸ್ಟ್‌’ನ ವೃದ್ಧಾಶ್ರಮದಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಯಲಹಂಕ ಉಪ ವಿಭಾಗದ ಎಸಿಪಿ ನರಸಿಂಹಮೂರ್ತಿ ಹಾಗೂ ಯಲಹಂಕ ಠಾಣೆ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಹೊಸ ವರ್ಷವನ್ನು ಆಚರಿಸಿದರು. 

ಆ ವೇಳೆ ಅಲ್ಲಿದ್ದ ಸುಮಾರು 20ಕ್ಕೂ ಹೆಚ್ಚಿನ ಹಿರಿಯ ಜೀವಗಳ ನೋವು ಆಲಿಸಿದ ಪೊಲೀಸರು, ಆ ಜೀವಗಳಿಗೆ ಧೈರ್ಯ ತುಂಬಿ ರಕ್ಷಣೆ ನಿಲ್ಲುವ ಅಭಯವಿತ್ತರು.

ಆನಂತರ ಆ ವೃದ್ಧರ ಮಕ್ಕಳನ್ನು ಸಂಪರ್ಕಿಸಿ ಕಾನೂನಿನ ಬಗ್ಗೆ ತಿಳಿ ಹೇಳಿದ ಪೊಲೀಸರು, ಆಸ್ತಿಗೆ ಮಾತ್ರವಲ್ಲ, ಪೋಷಕರನ್ನು ಸಲಹುವ ಜವಾಬ್ದಾರಿ ಸಹ ಮಕ್ಕಳ ಮೇಲಿದೆ. ಒಪ್ಪದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು. 

ಈ ಕಾರ್ಯಕ್ರಮದ ಬಳಿಕ ದೊಡ್ಡಗುಬ್ಬಿಯ ಆನಂದಪ್ಪ ಅವರ ಪುತ್ರ ನರಸಿಂಹ ಹಾಗೂ ವಿದ್ಯಾರಣ್ಯಪುರದ ಶಂಕರ್ ಅವರ ಪುತ್ರಿ ಮಿನಿಮೋಳಾ ಅವರು, ಆಶ್ರಮಕ್ಕೆ ಬಂದು ತಮ್ಮ ತಂದೆಯರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ತಮ್ಮ ಕುಟುಂಬಗಳಿಂದಲೇ ವೃದ್ಧಾಪ್ಯದಲ್ಲಿ ನಿರ್ಗತಿಕರಾಗುವ ಹಿರಿಯರ ರಕ್ಷಣೆಗೆ 2007ರಲ್ಲಿ ಪೋಷಕರ ಕಲ್ಯಾಣ ಮತ್ತು ಹಿರಿಯನಾಗರಿಕರ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. 

ಈ ಕಾಯ್ದೆಯಡಿ ಪೋಷಕರನ್ನು ಬೀದಿಗೆ ತಳ್ಳುವ ಮಕ್ಕಳ ಮೇಲೆ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು. ಅಲ್ಲದೆ ಹೆತ್ತವರನ್ನು ಸಾಕುವ ಹೊಣೆಗಾರಿಕೆ ಹೊರದೆ ಹೋದರೂ ಅವರ ಪೋಷಣೆಗೆ ಮಕ್ಕಳು ಪರಿಹಾರ ನೀಡಬೇಕಾಗುತ್ತದೆ. 

ಇದಕ್ಕಾಗಿ ಉಪ ವಿಭಾಗಾಧಿಕಾರಿ (ಎಸಿ) ಕೋರ್ಟ್‌ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಬಹುದು. ಈ ಕಾಯ್ದೆ ಬಗ್ಗೆ ಹಿರಿಯ ನಾಗರಿಕರಲ್ಲಿ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.

ಪೊಲೀಸರ ಭಯಕ್ಕೆ ಹೆತ್ತವರನ್ನು ಮನೆಗೆ ಕರೆದುಕೊಂಡು ಹೋಗಿ ಬಳಿಕ ತೊಂದರೆ ನೀಡುವ ಮಕ್ಕಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ.

ದೊಡ್ಡಗುಬ್ಬಿಯ ಆನಂದಪ್ಪ ಅವರ ಬಗ್ಗೆ ಕೊತ್ತನೂರು ಠಾಣೆ ಹಾಗೂ ವಡ್ಡೇರಹಳ್ಳಿಯ ಶಂಕರ್‌ ಅವರ ಬಗ್ಗೆ ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 

ಆ ಇಬ್ಬರು ವೃದ್ಧರ ಮನೆಗಳಿಗೆ ನಿಯಮಿತವಾಗಿ ಸ್ಥಳೀಯ ಪೊಲೀಸರು ಭೇಟಿ ನೀಡಿ ಕ್ಷೇಮ ವಿಚಾರಿಸುತ್ತಾರೆ. ಆ ಹಿರಿಯರಿಗೆ ತೊಂದರೆಯಾದರೆ ಪೊಲೀಸರು ನೆರವಾಗಲಿದ್ದಾರೆ.

Share this article