ಪೊಲೀಸರಿಗೆ ಖಾಕಿಯೇ ಧರ್ಮ, ಖಾಕಿಯೇ ಜಾತಿ: ಎಸ್ಪಿ

KannadaprabhaNewsNetwork | Published : Mar 11, 2024 1:21 AM

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆ ಕರ್ನಾಟಕ ಪೊಲೀಸ್‌ ಎಂದು ಹೆಸರು ಬದಲಾವಣೆಯಾಗಿ ಇಂದಿಗೆ 50 ವರ್ಷ ಪೂರೈಸಿದೆ. ಮಾದಕ ವಸ್ತುಗಳ ಸೇವನೆ ನಿಲ್ಲಿಸಿ ಆರೋಗ್ಯಕರ ಜೀವನ ನಡೆಸಿ ಎಂಬ ಧ್ಯೇಯವಾಕ್ಯದೊಂದಿಗೆ ಈ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ರೀಡೆ ಮನುಷ್ಯನನ್ನು ಲವಲವಿಕೆಯಿಂದ ಇಡುವ ಸಾಧನವಾಗಿದ್ದು, ಒತ್ತಡದ ಜೀವನ ನಡೆಸುತ್ತಿರುವವರಿಗೆ ಕ್ರೀಡೆ ಅತ್ಯವಶ್ಯಕ. ಯಾವುದೇ ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವಂತರಾಗಿರಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ತಿಳಿಸಿದರು.

ರಾಜ್ಯ ಪೊಲೀಸ್ ಇಲಾಖೆ ಕರ್ನಾಟಕ ಪೋಲಿಸ್ ನಾಮಕರಣಗೊಂಡು 50 ವರ್ಷ ಪೂರೈಸಿದ ಪ್ರಯುಕ್ತ, ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗದಲ್ಲಿ ಭಾನುವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳಿಗೆ ಆಯೋಜಿಸಿದ್ದ “ಕರ್ನಾಟಕ ಪೊಲೀಸ್ ರನ್-5ಕೆ” ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಳ್ಳಿ

ಇತ್ತೀಚೆಗೆ ಪ್ರತಿಯೊಬ್ಬರು ಮೊಬೈಲ್ ಜೊತೆಗೆ ಆಟವಾಡುತ್ತಾ, ಜಗತ್ತು ನಮ್ಮ ಕೈಯಲ್ಲಿದೆ ಎಂದು ಸಂತೋಷ ಪಡುವಾಗ ನಮ್ಮ ಆರೋಗ್ಯದ ಕಡೆ ಗಮನಕೊಡದೆ ಮೊಬೈಲ್‍ನ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದ ಹೊರಬಂದು ಗ್ರಾಮೀಣ ಪ್ರದೇಶಗಳಲ್ಲಿನ ಕ್ರೀಡೆಗಳಲ್ಲಿ ಭಾಗವಹಿಸಿ, ಇದಕ್ಕಾಗಿ ಉತ್ತೇಜನ ನೀಡುವವರು ಸಾಕಷ್ಟು ಜನರಿದ್ದಾರೆಂದರು.

ರಾಜ್ಯ ಪೊಲೀಸ್ ಇಲಾಖೆ ಕರ್ನಾಟಕ ಪೊಲೀಸ್‌ ಎಂದು ಹೆಸರು ಬದಲಾವಣೆಯಾಗಿ ಇಂದಿಗೆ 50 ವರ್ಷ ಪೂರೈಸಿದೆ. ಮಾದಕ ವಸ್ತುಗಳ ಸೇವನೆ ನಿಲ್ಲಿಸಿ ಆರೋಗ್ಯಕರ ಜೀವನ ನಡೆಸಿ ಎಂಬ ಧ್ಯೇಯವಾಕ್ಯದೊಂದಿಗೆ ಈ ಮ್ಯಾರಥಾನ್ ಅನ್ನು ಆಯೋಜಿಸಿದ್ದೇವೆ ಎಂದರು. ಖಾಕಿಯೇ ಧರ್ಮ, ಜಾತಿ

ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧವನ್ನು ಹೊಂದಿ, ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪೊಲೀಸ್‌ ವೃತ್ತಿಯಲ್ಲಿ ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ನಾವುಗಳು ಪೊಲೀಸ್‌ ಅಧಿಕಾರಿ, ಸಿಬ್ಬಂದಿಯಾಗುವ ಮೊದಲು ಕ್ರೀಡಾಪಟುವಾಗಿರುತ್ತೇವೆ. ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಧರ್ಮವಿಲ್ಲ, ನಮಗೆ ಖಾಕಿ ಧರ್ಮ, ಖಾಕಿಯೇ ಜಾತಿ ಎಂದರು. ಸುಮಾರು 500 ಮಂದಿ ಭಾಗಿ

ಕರ್ನಾಟಕ ಪೊಲೀಸ್ ರನ್ 5ಕೆ ಮ್ಯಾರಥಾನ್ ನಲ್ಲಿ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಿಂದ 400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ 100ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲಾ ಪೊಲೀಸ್ ಇಲಾಖೆಯ ಸಚಿನ್, ಪ್ರಥಮ, ಮಂಜುನಾಥ್, ದ್ವಿತೀಯ ಮತ್ತು ಪ್ರವೀಣ್, ತೃತೀಯ ಸ್ಥಾನ ಪಡೆದರು. ಸಾರ್ವಜನಿಕರ ಪರವಾಗಿ ಚಿರಂತ್ ಪ್ರಥಮ, ಹೇಮಂತ್, ದ್ವಿತೀಯ ಹಾಗೂ ಅಯ್ಯಪ್ಪ, ತೃತೀಯ ಸ್ಥಾನ ಪಡೆದರು.

ಮುಖ್ಯಪೇದೆ ಪದ್ಮ ಪ್ರಥಮಪೊಲೀಸ್ ಮಹಿಳಾ ವಿಭಾಗದಲ್ಲಿ ಗುಡಿಬಂಡೆಯ ಮುಖ್ಯಪೇದೆ ಪದ್ಮ ಪ್ರಥಮ ಸ್ಥಾನ ಪಡೆದರೆ, ಸಾರ್ವಜನಿಕರ ಮಹಿಳಾ ವಿಭಾಗದಲ್ಲಿ ಭೂಮಿಕಾ ಪ್ರಥಮ, ಭಾರ್ಗವಿ ದ್ವಿತೀಯ ಸ್ಥಾನ ಪಡೆದರು ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

Share this article