ಖರ್ಗೆ ಪರಿಶ್ರಮದಿಂದ ನಿರೀಕ್ಷೆ ಮೀರಿ ಕೈ ಗೆಲುವು

KannadaprabhaNewsNetwork |  
Published : Jun 08, 2024, 12:36 AM IST
ಖರ್ಗೆ ಅವರ ಪರಿಶ್ರಮದಿಂದ ಕೇಂದ್ರದಲ್ಲಿ ಕಾಂಗ್ರೆಸ್ ಗೆಲುವು : ಎಆರ್‌ಕೆ  | Kannada Prabha

ಸಾರಾಂಶ

ಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದು, ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಸಂಘಟನೆಗೊಂಡಿದೆ. ಹೀಗಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸು ಹಾಗೂ ಸಂಸದ ರಾಹುಲ್‌ಗಾಂಧಿ ಅವರ ನಾಯಕತ್ವಕ್ಕೆ ರಾಜ್ಯದ ಜನರು ಒಲವು ಹೊಂದಿದ್ದಾರೆ. ಕಳೆದ ೨೦೨೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ೧೩೫ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚನೆಯಾಗಲು ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶ್ರಮ ಇತ್ತು ಎಂದರು. ಕಳೆದ ಒಂದು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಐದು ಗ್ಯಾರಂಟಿಗಳನ್ನು ನೀಡಿದ ಪರಿಣಾಮ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮಗೆ ೧೫ಕ್ಕಿಂತ ಹೆಚ್ಚು ಸ್ಥಾನಗಳ ನಿರೀಕ್ಷೆ ಇತ್ತು. ಆದರೆ, ೯ ಸ್ಥಾನಗಳು ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ನಮ್ಮ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರಸ್ ಪಕ್ಷದ ಅಭೂತ ಪೂರ್ವ ಜಯ ದಾಖಲಿಸಿದೆ. ಕ್ಷೇತ್ರ ವ್ಯಾಪ್ತಿ ೭ ಶಾಸಕರು ಹಾಗೂ ಮಾಜಿ ಶಾಸಕರ ಸಂಘಟಿತ ಹೊರಾಟ ಕಾರಣವಾಗಿತ್ತು. ಅಲ್ಲದೇ ನಮ್ಮ ಅಭ್ಯರ್ಥಿ ವಿರುದ್ಧ ನಡೆದ ಅಪಪ್ರಚಾರಕ್ಕೆ ಕ್ಷೇತ್ರದ ಮತದಾರರು ಕಿವಿಗೊಡಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಟಾಸ್ಕ್ ಅನ್ನು ನಾವು ಪೂರ್ಣಮಾಡಿರುವ ಖುಷಿ ಇದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮ್ಮ ಕ್ಷೇತ್ರದಲ್ಲಿ ೬೯ ಸಾವಿರ ಲೀಡ್ ಬಂದಿದ್ದು ಈ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಷ್ಟೇ ಲೀಡ್ ಕೊಡಬೇಕು ಎಂದಿದ್ದರು. ಆದರೆ, ನಾನು ಲೋಕಸಭಾ ಚುನಾವಣೆಯೇ ವಿಭಿನ್ನವಾಗಿರುತ್ತದೆ. ಹೀಗಾಗಿ ೩೦ ಸಾವಿರಕ್ಕು ಹೆಚ್ಚು ಲೀಡ್ ಕೊಡಬಲ್ಲೆ ಎಂದು ಭರವಸೆ ನೀಡಿದ್ದೆ. ಅದರಂತೆ ೩೩ ಸಾವಿರ ಬಹುಮತ ಬಂದಿದೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ: ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ವರಿಷ್ಠರು ಸಚಿವ ಸ್ಥಾನ ನೀಡಿದರೆ, ಖಂಡಿತ ಸಮರ್ಥವಾಗಿ ನಿಭಾಯಿಸುತ್ತೇನೆ. ಜಿಲ್ಲೆಯ ಜನರ ನಾಡಿಮಿಡಿತ ಹಾಗೂ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ವರಿಷ್ಟರು ಸಂಪುಟದಲ್ಲಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವನನ್ನು ಕೃಷ್ಣಮೂರ್ತಿ ವ್ಯಕ್ತಪಡಿಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಕೊಳ್ಳೇಗಾಲ ನಗರಸಭೆ ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಷಾ, ಜಿಲ್ಲಾ ವಕ್ತಾರ ಗೌಡಹಳ್ಳಿ ರಾಜೇಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ