ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಗ್ಯಾರಂಟಿ ಸರ್ಕಾರದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ರಾಯಚೂರು ಜಿಲ್ಲೆಯ ಪಾಲಿಗೆ ಖಟ್ಟಾ-ಮೀಠಾ (ಸಿಹಿ-ಹುಳಿ)ಆಗಿ ಉಳಿದುಬಿಟ್ಟಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆಯನ್ನಿಟ್ಟುಕೊಂಡಿದ್ದ ಜಿಲ್ಲೆ ಜನಸಾಮಾನ್ಯರು ಬಜೆಟ್‌ನಲ್ಲಿ ಏನಾದರೂ ವಿಶೇಷ ಕೊಡುಗೆ ನೀಡುತ್ತಾರೆ ಇದರೊಂದಿಗೆ ಹಳೆ ಯೋಜನೆಗಳು, ಹೊಸ ಕಾಮಗಾರಿಗಳು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ಮೂಲೆಗುಂಪಾಗಿರುವ ಕಾಮಗಾರಿಗಳಿಗೆ ಚೈತನ್ಯ ತುಂಬುವ ಕಾರ್ಯ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಬೆಟ್ಟದಷ್ಟು ಬೇಡಿಕೆಗಳನ್ನಿಟ್ಟುಕೊಂಡಿದ್ದವರಿಗೆ ಈ ಬಜೆಟ್‌ನಲ್ಲಿ ಬೆರಳೆಣಿಕೆಯಷ್ಟಾದರೂ ಈಡೇರಿವೆ ಸಮಾಧಾನವಿದೆ.ಹಿಂದಿನ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ವಿಶೇಷ ಯೋಜನೆ, ಅನುದಾನ ನೀಡದೇ ಕೇವಲ ಹೆಸರಿಗಷ್ಟೇ ಸೀಮಿತಗೊಳಿಸಲಾಗುತ್ತಿತ್ತು ಆದರೆ ಪ್ರಸಕ್ತ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.
ತುಂಗಭದ್ರಾ ಜಲಾಶಯದ ಕೆಳಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ಸಮಸ್ಯೆ, ರಾಯಚೂರಿನ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ರಿಂಗ್ ರಸ್ತೆ ಅಭಿವೃದ್ಧಿಗೆ ಹಣ, ನಗರಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರಪಾಲಿಕೆಯನ್ನಾಗಿಸುವುದು ಸೇರಿದಂತೆ ರಾಜ್ಯ ಹೆದ್ದಾರಿಗಳ ಸುಧಾರಣೆ, ಹೊಸ ಮಾರ್ಗಗಳಿಗೆ ಯೋಜನೆ, ಒಪೆಕ್ ಆಸ್ಪತ್ರೆ ಸ್ವಾಯುತ್ತ ಸಂಸ್ಥೆಯನ್ನಾಗಿಸುವುದು, ಗಡಿಭಾಗದ ಹಳ್ಳಿಗಳಲ್ಲಿ ಕನ್ನಡದ ಸಂರಕ್ಷಣೆಯ ಕಾರ್ಯ, ಕೈಗಾರಿಕಾ ವಲಯದ ಏಳಿಗೆಗೆ ಭೂಮಿ ಸೇರಿ ಇತರೆ ಸವಲತ್ತು ಕಲ್ಪಿಸುವುದು. ಏಮ್ಸ್ ವಿಚಾರವಾಗಿ ಕೇಂದ್ರಕ್ಕೆ ಪ್ರಸ್ತಾಪದ ಜೊತೆಗೆ ಅಗತ್ಯವಾದ ಭೂಮಿ, ಸವಲತ್ತುಗಳನ್ನು ಒದಗಿಸಲು ಬಜೆಟ್‌ನಲ್ಲಿ ಯಾವುದೇ ಅಂಶಗಳನ್ನು ಸೇರಿಸದೇ ಇರುವುದು ಬೇಸರವನ್ನುಂಟು ಮಾಡಿದೆ.ಒಂದಾನೊಂದು ಕಾಲದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವರದಾನವಾಗಿದ್ದ ಅತ್ಯಾಧುನಿಕ ತಂತ್ರಜ್ಞಾನದ (ಒಪೆಕ್) ಆಸ್ಪತ್ರೆಯು ಇಂದು ರಿಮ್ಸ್ ಅಡಿಯಲ್ಲಿ ಕೆಲಸ ಮಾಡುವ ದೌರ್ಭಾಗ್ಯ ಬಂದಿದ್ದು, ಈ ಆಸ್ಪತ್ರೆಯಲ್ಲಿ ಸ್ವಾಯುತ್ತ ಸಂಸ್ಥೆಯನ್ನಾಗಿಸಬೇಕು ಎನ್ನುವ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಸಹ ಒಪೆಕ್ ಆಸ್ಪತ್ರೆಗೆ ಮರುಜೀವ ತಂದುಕೊಡುವ ಕೆಲಸವನ್ನು ಉಸ್ತುವಾರಿಗಳು ಮಾಡಿಲ್ಲ.
ತುಂಗಭದ್ರಾ ಜಲಾಶಯದಲ್ಲಿ ಹೂಳು ಸಮಸ್ಯೆ ನಿವಾರಣೆಯ ಕ್ರಮ ಕೈಗೊಳ್ಳದೇ ಮತ್ತೆ ಅದೇ ಅಡ್ಡ ಗೋಡೆ ಮೇಲೆ ದೀಪವಿಡುವ ಕೆಲಸವನ್ನು ಮಾಡಲಾಗಿದೆ. ಸಮಸ್ಯೆ ನಿವಾರಣೆಗಾಗಿ ರೂಪಿಸಿರುವ ನವಲಿ ಸಮನಾಂತರ ಜಲಾಶಯದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಅದು ಪರಿಣಾಮಕಾರಿಯಾಗಿಲ್ಲ. ಕೊಪ್ಪಳ ಜಿಲ್ಲೆ ನವಲಿ ಸಮೀಪ ಸಮನಾಂತರ ಜಲಾಶಯ ನಿರ್ಮಾಣಕ್ಕಾಗಿ 15,900 ಕೋಟಿ ರು. ವೆಚ್ಚದ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳೊಂದಿಗೆ ಯೋಜನೆ ಆರಂಭ ಕುರಿತು ಚರ್ಚೆ ನಡೆಸಿ ಕಾರ್ಯಾರಂಭಿಸಲು ಆದ್ಯತೆ ನೀಡಲಾಗುವುದು ಎಂದು ನಮೂದಿಸಿರುವುದು ಬಜೆಟ್ ಹೇಳಿಕೆಯಾಗಿಯೇ ಉಳಿದುಬಿಟ್ಟಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಾಗಿದೆ. ಆದರೆ, ರಾಯಚೂರು ಜಿಲ್ಲೆಗೆ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡುವ ಬಗ್ಗೆ ಸ್ಪಷ್ಟತೆ ಇಲ್ಲ. ಅಲ್ಲದೇ ಕೆಲ ಜಿಲ್ಲೆಗಳಲ್ಲಿ ಸ್ಥಾಪನೆಗೊಳ್ಳುವ ನೂತನ ಯೋಜನೆಗಳನ್ನು ರಾಯಚೂರು ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ.