ಮಂಜುನಾಥ ಸಾಯೀಮನೆ
ಕನ್ನಡಪ್ರಭ ವಾರ್ತೆ ಶಿರಸಿಸೊಪ್ಪಿನ ಬೆಟ್ಟಗಳು ಬ ಖರಾಬ್ ಕಾಲಂನಲ್ಲಿ ಸೇರಿ ರೈತರು ಇನ್ನೂ ಆತಂಕದಲ್ಲಿರುವಾಗಲೇ ಇನ್ನೊಂದು ಸಮಸ್ಯೆ ತಲೆ ಎತ್ತಿದೆ. ಕೆಲ ಅಡಕೆ ಬೆಳೆಗಾರ ಕ್ಷೇತ್ರಕ್ಕೆ ಇದುವರೆಗೂ ಇದ್ದ ಭಾಗಾಯ್ತ ಶಬ್ದ ಮಾಯ ಮಾಡಿರುವ ಕಂದಾಯ ಇಲಾಖೆ ಈ ಕಾಲಂ ನಲ್ಲಿ ಖುಷ್ಕಿ ಎಂದು ದಾಖಲಿಸಿದೆ.ಹೌದು, ಅಡಕೆ ತೋಟ ಖುಷ್ಕಿ ಎಂದು ಬದಲಾವಣೆಯಾಗಿರುವುದು ಹಲವು ರೈತರಿಗೆ ಆತಂಕ ಮೂಡಿಸಿದೆ. ಭಾಗಾಯ್ತ ಎಂಬುದರ ಅರ್ಥ ತೋಟ ಎಂದಾಗುತ್ತದೆ. ಮಲೆನಾಡಿನಲ್ಲಿ ಅಡಕೆ ತೋಟಗಳು ತಲೆಯೆತ್ತಿದ್ದು ಇಂದು ನಿನ್ನೆಯಲ್ಲ. ತಲೆ-ತಲಾಂತರದಿಂದ ಅಡಕೆ ಬೆಳೆಯೇ ಮಲೆನಾಡಿನ ಜೀವಾಳ. ಅಡಕೆ ತೋಟದಲ್ಲಿ ಕೊಳೆ ರೋಗ ಬರದಂತೆ ಹಾಳೆಯ ಕೊಟ್ಟೆ, ಕರಡ ಕಟ್ಟುತ್ತಿದ್ದ ಅಂದಿನ ಕಾಲದಲ್ಲಿ ಅಡಕೆ ಗೊನೆಗಳಿಗೆ ಬೋರ್ಡೋ ಸಿಂಪಡಿಸಿ ಎಂದು ಬ್ರಿಟೀಷರೇ ಮಲೆನಾಡಿನ ರೈತರಿಗೆ ಸೂಚಿಸಿದ್ದರ ಬಗ್ಗೆ ದಾಖಲೆ ಇದೆ. ಗ್ರಾಮ ನಕಾಶೆಗಳಲ್ಲೂ ಅಡಕೆ ತೋಟದ ಪ್ರದೇಶವನ್ನು ಮರಗಳ ಚಿತ್ರ ಬಿಡಿಸಿಯೇ ಉಲ್ಲೇಖಿಸಲಾಗಿದೆ. ಇಂತಹ ಹಲವಾರು ಸಾಂಪ್ರದಾಯಿಕ ತೋಟಗಳಿಗೂ ಈಗ ಕಂದಾಯ ಇಲಾಖೆ ಖುಷ್ಕಿ ಜಮೀನಿನ ಪಟ್ಟ ನೀಡಿದೆ.ವಾಸ್ತವವಾಗಿ ಖುಷ್ಕಿ ಶಬ್ದದ ಅರ್ಥ ಮಳೆಯ ನೀರಿನಿಂದ ಮಾತ್ರ ಬೆಳೆಯುವ ಭೂಮಿ ಅಥವಾ ಹೊಲ ಎಂಬ ಅರ್ಥ ನೀಡುತ್ತದೆ. ಇನ್ನು ಕೆಲವರ ತೋಟಕ್ಕೆ ತರಿ ಎಂದೂ ದಾಖಲಿಸಲಾಗಿದೆ. ತರಿ ಎಂದರೆ ಗದ್ದೆ.
ಇತ್ತೀಚೆಗೆ ಎಲ್ಲೆಂದರಲ್ಲಿ ಅಡಕೆ ತೋಟಗಳು ತಲೆ ಎತ್ತಿದ ಬಳಿಕ ನೀರಾವರಿ ಮಾಡಬೇಕಾಗಿ ಬರಬಹುದಾದರೂ, ಮಲೆನಾಡಿನ ಅಡಕೆ ತೋಟಗಳು ಈ ಸ್ಥಿತಿಯಲ್ಲಿ ಇಲ್ಲ. ಸದಾ ನೀರಿನ ಮೂಲ ಇರುವ, ರಾಂ ಪತ್ರೆ ಜಡ್ಡಿಗಳೂ ಸಹ ಸನಿಹದಲ್ಲಿ ಇದ್ದು, ನೀರು ಹರಿಯುವ ಮತ್ತು ತಂಪಾದ ಭೂಮಿ ಆಯ್ಕೆ ಮಾಡಿಕೊಂಡೇ ಹಿರಿಯರು ಅಡಕೆ ತೋಟ ನಿರ್ಮಿಸಿದ್ದರು. ಮಲೆನಾಡಿನ ಮುಕ್ಕಾಲು ಭಾಗದಲ್ಲಿರುವ ಸಾಂಪ್ರದಾಯಿಕ ತೋಟಗಳಿಗೆ ಇಂದಿಗೂ ಬಿರು ಬೇಸಿಗೆಯಲ್ಲಿ ನೀರು ಬೇಕಾಗುವುದಿಲ್ಲ. ಇಂತಹ ಭಾಗಾಯ್ತಗಳೂ ಈಗ ಖುಷ್ಕಿ ಜಮೀನಿನ ಹೆಸರು ಪಡೆದುಕೊಂಡಿವೆ.ರೈತನ ಅಡಕೆ ತೋಟವನ್ನು ಭಾಗಾಯ್ತ ಅಥವಾ ಖುಷ್ಕಿ ಎಂದು ಬದಲಾಯಿಸಿ ಪಹಣಿಗೆ ದಾಖಲಿಸಿರುವುದರಿಂದ ರೈತನ ಹಕ್ಕೇನೂ ಹೊರಟು ಹೋಗುವುದಿಲ್ಲ. ಅಥವಾ ಅಡಕೆ ಬೆಳೆ ಕಡಿಮೆ ಆಗುವುದಿಲ್ಲ. ಆದರೆ, ಭಾಗಾಯ್ತಕ್ಕೆ ಇರುವ ಸೌಲಭ್ಯಕ್ಕೂ, ಖುಷ್ಕಿ ಭೂಮಿಗೆ ಇರುವ ಸೌಲಭ್ಯಕ್ಕೂ ವ್ಯತ್ಯಾಸವಿದೆ. ಭಾಗಾಯ್ತಕ್ಕೆ ಸಿಗುವ ಬೆಳೆ ಸಾಲ ಖುಷ್ಕಿಗೆ ಲಭ್ಯವಾಗುವುದಿಲ್ಲ. ಸಹಕಾರಿ ಸಂಘಗಳು ನೀಡುವ ಸಾಲದ ಪ್ರಮಾಣವೂ ಈ ಎರಡೂ ಭೂಮಿಗಳಿಗೆ ವ್ಯತ್ಯಾಸವಿದೆ.
ಅಲ್ಲದೇ, ತೋಟಗಾರಿಕೆ ಇಲಾಖೆಯ ಸಬ್ಸಿಡಿಗಳು, ಮೈಲು ತುತ್ತ ಸಬ್ಸಿಡಿ ಪಡೆಯಬೇಕೆಂದರೆ ಭಾಗಾಯ್ತದ ಪಹಣಿ ಪತ್ರಿಕೆಯೇ ಬೇಕಾಗುತ್ತದೆ.ಭವಿಷ್ಯದಲ್ಲಿ ಖುಷ್ಕಿ ಎಂಬುದೇ ಕಾಯಂಗೊಳಿಸಿದರೆ, ಕಾಸಿಲ್ಲದೇ ಕಡ್ಡಿಯನ್ನೂ ಅಲ್ಲಾಡಿಸದ ಸ್ವಭಾವದ ಕೆಲ ಅಧಿಕಾರಿಗಳನ್ನು ಹಿಡಿದು ಪಹಣಿ ಸರಿಪಡಿಸಿಕೊಳ್ಳುವುದೇ ನಿತ್ಯದ ಕಾಯಕವಾಗಬಹುದು ಎಂಬುದು ರೈತರ ಆತಂಕ. ಈಗಾಗಲೇ ಸೊಪ್ಪಿನ ಬೆಟ್ಟದ ವಿಷಯದಲ್ಲಿ ರೈತರು ಹೊಡೆತ ತಿಂದಿದ್ದಾರೆ. ಅ ಕಾಲಂನಲ್ಲಿ ಇರಬೇಕಿದ್ದ ಖರಾಬ್ ಉಲ್ಲೇಖ ಬ ಕಾಲಂನಲ್ಲಿ ಸೇರಿದ್ದನ್ನು ಸರಿಪಡಿಸಲು ಸಂಘ-ಸಂಸ್ಥೆಗಳು ಟೊಂಕ ಕಟ್ಟಿ ಹೋರಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಈಗ ಅಡಕೆ ತೋಟದಲ್ಲಿ ಭಾಗಾಯ್ತವೂ ಮಾಯವಾಗುತ್ತಿದ್ದುದು ರೈತರನ್ನು ಇನ್ನಷ್ಟು ಅಧೀರರನ್ನಾಗಿಸಿದೆ. ಈ ಕುರಿತಂತೆ ಯಡಳ್ಳಿ ಸೇರಿದಂತೆ ಹಲವು ಸಹಕಾರಿ ಸಂಘಗಳ ಮುಖ್ಯಸ್ಥರು ಶಿರಸಿ ತಹಸೀಲ್ದಾರರ ಗಮನಕ್ಕೆ ತಂದು ಭಾಗಾಯ್ತ ಉಳಿಸಲು ಶ್ರಮಿಸಿದ್ದಾರೆ.
ಗೊಂದಲ ಎಲ್ಲಿ?:
ವಾಸ್ತವವಾಗಿ ಕಂದಾಯ ಇಲಾಖೆ ಪೀಕ್ ಪಹಣಿ ಮಾಡುವಾಗ ಹಲವು ರೈತರಿಗೆ ವರ್ಷದ ಮೊದಲಾರ್ಧದಲ್ಲಿ ಭಾಗಾಯ್ತ ಎಂದು ದಾಖಲಿಸಿದೆ. ಬೆಳೆ ಅಡಕೆ ಎಂದೂ ನಮೂದಿಸಿದೆ. ವರ್ಷದ ಇನ್ನರ್ಧ ಭಾಗದ ಪೀಕ್ ಪಹಣಿಯಲ್ಲಿ ಖುಷ್ಕಿ ಎಂದು ದಾಖಲಿಸಿದೆ. ಈ ಗೊಂದಲ ಏಕೆ ಎಂಬುದು ರೈತರ ಪ್ರಶ್ನೆ. ಅಡಕೆ ತೋಟ ಹೊಂದಿರುವ ಭೂಮಿಯಲ್ಲಿ ಬೆಳೆಯುವ ಬೆಳೆ ವರ್ಷಕ್ಕೆ ಎರಡು ಬಾರಿ ಏನೂ ಬದಲಾಗುವುದಿಲ್ಲ. ಹೀಗಿರುವಾಗ ಎರಡನೇ ಅವಧಿಗೂ ಭಾಗಾಯ್ತವೇ ಇರಬೇಕು ಎಂದು ಆಗ್ರಹಿಸಿದ್ದಾರೆ.ಹಲವಾರು ರೈತರ ಅಡಕೆ ತೋಟದ ಪಹಣಿಯಲ್ಲಿ ಭಾಗಾಯ್ತ ಶಬ್ದದ ಬದಲು ಖುಷ್ಕಿ ಎಂದು ನಮೂದಿಸಲಾಗಿದೆ. ತೋಟದ ಭವಿಷ್ಯದ ದೃಷ್ಟಿಯಿಂದ ಭಾಗಾಯ್ತ ಎಂದೇ ನಮೂದಿಸುವಂತೆ ತಹಸೀಲ್ದಾರರಿಗೆ ವಿನಂತಿಸಿದ್ದೇವೆ ಎಂದು ಯಡಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ ಹೇಳಿದ್ದಾರೆ.