ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಕಿಚ್ಚು ಹತ್ತಿಸಿ ಆಂಗ್ಲೋ ಕಿತ್ತೂರು ಯುದ್ಧದಲ್ಲಿ ರಾಣಿ ಚನ್ನಮ್ಮ ದಾಖಲಿಸಿದ ದಿಗ್ವಿಜಯಕ್ಕೆ ಈಗ ಎರಡು ನೂರು ವಸಂತ. ಇಡೀ ದೇಶ ಅಕ್ರಮಿಸಿಕೊಳ್ಳಲು ದಂಡಯಾತ್ರೆ ಹೊರಟಿದ್ದ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ದಿಕ್ಕೆಟ್ಟು ಓಡುವಂತೆ ಮಾಡಿದ ಕಲಿ ವೀರ ಮಹಿಳೆ ಕಿತ್ತೂರು ಚನ್ನಮ್ಮ ಭಾರತ ಮಾತೆ ಹೆಮ್ಮೆಯ ಪುತ್ರಿ ಎಂದು ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಹೇಳಿದರು.ಪುರಸಭೆಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ 200ನೇ ವಿಜಯೋತ್ಸವ ಹಾಗೂ ಜಯಂತಿ ಕಾರ್ಯಕ್ರಮವನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಯುದ್ಧದ ಎರಡು ಶತಮಾನ ಬಳಿಕವೂ ವಿಜಯದ ರೋಚಕತೆ, ರೋಮಾಂಚನ ಕಡಿಮೆಯಾಗಿಲ್ಲ. ಗಂಡುಗಚ್ಛೆ ಹಾಕಿ ಕುದುರೆ ಮೇಲೆ ಕುಳಿತು ಎಡಗೈಯಲ್ಲಿ ಲಗಾಮು, ಬಲಗೈಯಲ್ಲಿ ಖಡ್ಗ ಎತ್ತಿಹಿಡಿದು ಕುದುರೆ ಸವಾರಿ ಹೊರಟರೇ ನೋಡುಗರ ಎದೆ ಜಲ್ಲ ಎನ್ನುವ ಗಾಂಭೀರ್ಯ ಚನ್ನಮ್ಮದ್ದು. ಚನ್ನಮ್ಮಳು ಚಿಕ್ಕಂದಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲುಗಾರಿಕೆ ತರಬೇತಿ ಪಡೆದಿದ್ದ ಯುದ್ಧದ ಕಲೆ ರಕ್ತಗತವಾಗಿತ್ತು ಎಂದರು.
ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ ಮಾತನಾಡಿ, ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಟ ನಡೆಸಿ ಕಿತ್ತೂರ ಸಂಸ್ಥಾನದ ಸ್ವಾಭಿಮಾನ ನಾಡ ಪ್ರೇಮ, ಅಖಂಡ ಭಾರತ ದೇಶದ ಸ್ವಾತಂತ್ರ್ಯ ಪ್ರೀಯರಿಗೆ ದಿಟ್ಟ ಹೋರಾಟದ ಮೂಲಕ ಸಾಬೀತು ಪಡಿಸಿದ ಸುದಿನವೇ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರೆ ತಪ್ಪಾಗಲಾರದು ಎಂದರು.ಸದಸ್ಯ ಶೇಖರ ಅಂಗಡಿ ಮಾತನಾಡಿ, ಮಹಿಳೆಯರೂ ರಣರಂಗದಲ್ಲಿ ಹೋರಾಡಿದ ಆಡಳಿತ ನಡೆಸಿದ ಸಾವಿರಾರು ಉದಾಹರಣೆಗಳು ಭಾರತೀಯ ಪರಂಪರೆಯಲ್ಲಿ ಇವೆ. ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ಚನ್ನಬೈರಾದೇವಿ, ಬೆಳವಡಿ ಮಲ್ಲಮ್ಮ, ರಾಣಿ ಅಹಲ್ಯಬಾಯಿ ಹೊಲ್ಕರ, ಝಾನ್ಸಿ ರಾಣಿ ಲಕ್ಷ್ಮಿಭಾಯಿರಂಥ ಅನೇಕ ವೀರರಮಣೀಯರು ಈ ಭರತ ಖಂಡದ ಪವಿತ್ರ ಪುಣ್ಯ ಭೂಮಿಯ ಮಣ್ಣಿನಲ್ಲಿ ಜನಿಸಿದ್ದಾರೆ. ಕಿತ್ತೂರ ಚನ್ನಮ್ಮ ದೇಶ ರಕ್ಷಣೆಗೆ ಧರ್ಮ ರಕ್ಷಣೆಗೆ ಹೋರಾಡಿದ ವೀರ ತಾಯಂದಿರ ಸಾಲಿನ ಮುಕುಟ ಮಣಿ. ಚನ್ನಮ್ಮ ಬಗ್ಗೆ ದೇಶದಲ್ಲೇಡೆ ಅಪಾರ ಗೌರವವಿದೆ. ದೆಹಲಿ ಸಂಸತ್ತಿನ ಸಂಕಿರ್ಣದಲ್ಲಿ 2007 ರಲ್ಲಿ ಚನ್ನಮ್ಮ ಪ್ರತಿಮೆ ಅನಾವರಣಗೊಳಿಸಿ ಗೌರವಿಸಲಾಗಿದೆ. ಭಾರತೀಯ ರೇಲ್ವೆ ಇಲಾಖೆ ಬೆಂಗಳೂರು ಮತ್ತು ಸಾಂಗ್ಲಿ ಮಧ್ಯ ಸಂಚರಿಸುವ ರೇಲ್ವೆಗೆ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ಎಂದು ಹೆಸರಿಟ್ಟು ಗೌರವಿಸಿದೆ. ಅವರ ಗೌರವಾರ್ಥವಾಗಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹೆಸರಿಸಿದೆ. ನಾಡಿನ ಅನೇಕ ಕಡೆ ಅವರ ಪ್ರತಿಮೆ ಅನಾವರಣಗೊಳಿಸಿವೆ ಇವು ದೇಶಭಕ್ತಿ ಪ್ರೇರಣೆ ನೀಡುತ್ತಿರುವುದು ಸಾಕ್ಷಿ ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಡಾ. ಅಶೋಕ ದಿನ್ನಿಮನಿ,ವಿಜುಗೌಡ ಪಾಟೀಲ, ಸಂತೋಷ ಹುದ್ದಾರ, ರಾಜೇಶ ಬಾವಿಕಟ್ಟಿ, ಡಾ.ವಿದ್ಯಾ ದಿನ್ನಿಮನಿ, ಈರಪ್ಪ ದಿನ್ನಿಮನಿ, ವಿಜಯಕುಮಾರ ಕುಳಲಿ, ರಾಮಣ್ಣ ಹಟ್ಟಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಬಸಪ್ಪ ಕೊಪ್ಪದ,ರಾಮು ಮಾಂಗ, ಮಾನಿಂಗ ಮಾಂಗ, ಸೇರಿದಂತೆ ಹಲವರು ಇದ್ದರು.