ಅಜೀಜಅಹ್ಮದ್ ಬಳಗಾನೂರ
ಹುಬ್ಬಳ್ಳಿ: ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣದ ಬೆನ್ನೆಲೆ ಇದೀಗ ಇಲ್ಲಿನ ಕೆಎಂಸಿಆರ್‌ಐನಲ್ಲಿ ಒಂದೇ ವರ್ಷದಲ್ಲಿ 33 ಗರ್ಭಿಣಿಯರು, 148 ಶಿಶುಗಳು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರು ಯಾವ ಕಾರಣದಿಂದ ಮೃತರಾಗಿದ್ದಾರೆ ಎಂಬುದನ್ನು ತಿಳಿಯಲು ಹಾಗೂ ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಐವರ ನೇತೃತ್ವದ ಸಮಿತಿ ರಚಿಸಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿಯೇ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಪ್ರಖ್ಯಾತಿ ಗಳಿಸಿರುವ ಇಲ್ಲಿನ ಕೆಎಂಸಿ ಆರ್‌ಐ 1800 ಹಾಸಿಗೆ ಹೊಂದಿದೆ. ಇಲ್ಲಿಗೆ ಧಾರವಾಡ ಜಿಲ್ಲೆಯಷ್ಟೇ ಅಲ್ಲ ಸುತ್ತಮುತ್ತಲಿನ ಜಿಲ್ಲೆಗಳಾದ ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ.
ಇಲ್ಲಿ ಪ್ರತಿನಿತ್ಯ ಹತ್ತಾರು ಗರ್ಭಿಣಿಯರ ಹೆರಿಗೆ ಮಾಡಲಾಗುತ್ತದೆ. ಸ್ವಲ್ಪ ಏರುಪೇರಾದರೂ ದೊಡ್ಡ ಅನಾಹುತವೇ ಸಂಭವಿಸುವುದು ಗ್ಯಾರಂಟಿ. ಹೀಗಾಗಿ ಮೊದಲಿನಿಂದಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಆದರೂ ಬಳ್ಳಾರಿಯಲ್ಲಿನ ಘಟನೆ ನಡೆಯುತ್ತಿದ್ದಂತೆ ಇತ್ತ ಹುಬ್ಬಳ್ಳಿ ಕೆಎಂಸಿಆರಐನಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಇಲ್ಲಿನ ಕೆಎಂಸಿ ಆರ್‌ಐನಲ್ಲಿಯೂ ಗರ್ಭಿಣಿ ಮತ್ತು ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಜನವರಿಯಿಂದ ಈ ವರೆಗೆ 33 ಗರ್ಭಿಣಿಯರು ಹಾಗೂ 148 ಶಿಶುಗಳ ಮೃತಪಟ್ಟಿವೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಎಂಬುದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಅವರ ಅನಿಸಿಕೆ.
ಹಿಂದೆ 2023ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 38 ಗರ್ಭಿಣಿಯರು, 162 ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಎಲ್ಲ ಘಟನೆಗಳು ಡ್ರಗ್ ಡಿಯಾಕ್ಟ್‌ನಿಂದ ಆಗಿರುವ ಘಟನೆಗಳಲ್ಲ, ಬದಲಾಗಿ ಹೃದಯ ಸ್ತಂಬನ, ಲೋ ಬಿಪಿ, ಅತಿಯಾದ ರಕ್ತಸ್ರಾವದಿಂದ ಗರ್ಭಿಣಿಯರು ಮೃತಪಟ್ಟಿದ್ದರೆ, ಅವಧಿಪೂರ್ವ ಜನನ, ಕಡಿಮೆ ತೂಕ, ನಂಜು, ಡೆಂಘೀನಿಂದಾಗಿ ನವಜಾತ ಶಿಶುಗಳು ಮೃತಪಟ್ಟಿದ್ದಾರೆ.
ಸಮಿತಿ ರಚನೆ:
ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಮರಣದ ಕುರಿತು ಮತ್ತೊಮ್ಮೆ ಪರೀಕ್ಷಿಸಲು ಹಾಗೂ ಈ ರೀತಿಯ ದುರ್ಘಟನೆಗಳು ನಡೆಯದಂತೆ ಈಗಾಗಲೇ ಕೆಎಂಸಿಆರ್‌ಐನ ನಿರ್ದೇಶಕರು ಐವರು ವೈದ್ಯರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸಿದ್ದು, ಅವರು ಕಿಮ್ಸ್‌ಗೆ ಚಿಕಿತ್ಸೆಗಾಗಿ ಆಗಮಿಸುವ ಗರ್ಭಿಣಿಯರು, ಶಿಶುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬೇಕಾದ ಅಗತ್ಯ ಕ್ರಮಕೈಗೊಳ್ಳುವುದು, ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ನಿರ್ದೇಶಕರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಲು ಸಮಿತಿ ಕಾರ್ಯನಿರ್ವಹಿಸಲಿದೆ
ಯಾವುದೇ ಸಮಸ್ಯೆಯಾಗಿಲ್ಲ :
ಜನವರಿಯಿಂದ ಈ ವರೆಗೆ 33 ಗರ್ಭಿಣಿಯರು, 148 ಶಿಶುಗಳ ಸಾವಾಗಿದೆ. ಬೇರೆ ಬೇರೆ ಕಾರಣಗಳಿಂದ ಗರ್ಭಿಣಿಯರು, ನವಜಾತ ಶಿಶುಗಳ ಮೃತಪಟ್ಟಿದ್ದಾರೆ. ಆದರೆ, ಡ್ರಗ್ ಡಿಯಾಕ್ಟ್‌ನಿಂದ ಯಾರೂ ಮೃತಪಟ್ಟಿಲ್ಲ. ನ್ಯಾಷನಲ್ ಲೇವಲ್ ಡೆತ್ ರೇಟ್‌ಗೆ ನೋಡಿದರೆ ಕೆಎಂಸಿಆರ್‌ಐನಲ್ಲಿ ಡೆತ್ ರೇಟ್ ಶೇ. 3ರಿಂದ 4 ರಷ್ಟಿದೆ. ಸೆಪ್ಟೆಂಬರ್‌ನಲ್ಲೂ ಸರ್ಕಾರ ನೀಡುವ ಸಲಾಯಿನ್ ಬಳಸಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿರುವ ರೋಗಿಗಳಿಗೆ ಸಲಾಯಿನ್ ನೀಡಲಾಗಿತ್ತು. ಆದರೆ, ಸಲಾಯಿನ್ ಬಳಕೆಯಿಂದ ಯಾವ ರೋಗಿಗೂ ಸಮಸ್ಯೆಯಾಗಿರುವ ಕುರಿತು ವರದಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಕನ್ನಡಪ್ರಭಕ್ಕೆ ತಿಳಿಸಿದರು.