ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ವ ಕ್ಷೇತ್ರದಲ್ಲಿಯೂ ಇಂದು ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ನೂತನ ತಂತ್ರಜ್ಞಾನದ ತಿಳಿವಳಿಕೆ ಪಡೆಯುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ವ್ಯಾಪಕ ಪ್ರಚಾರವನ್ನು ಬಯಸುತ್ತಿದೆ. ಉತ್ತಮ ಜೀವನಕ್ಕಾಗಿ ನಮ್ಮ ಶಿಕ್ಷಣದ ಉದ್ದೇಶವಾಗಬೇಕು ಎಂದು ಎಐಇಎಂ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಖ್ವಾಜಾ ಶಹೀದ್ ಹೇಳಿದರು.ನಗರದ ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ಎಐಇಎಂ 14ನೇ ಅಖಿಲ ಭಾರತ ಶಿಕ್ಷಣಿಕ ಸಮ್ಮೇಳನ ಹಾಗೂ ಎಸ್‌ಐಇಟಿ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಪರಿಚಯಾತ್ಮಕ ಭಾಷಣ ಮಾಡಿದ ಅವರು, ತಮ್ಮ ಅಭಿಮತ ಹಂಚಿಕೊಂಡರು. ಸಮಾಜದಲ್ಲಿ ಸಮಾನತೆ ಬರದ ಹೊರತು ಶಿಕ್ಷಣದಲ್ಲಿ ಸಮಾನತೆ ಬರುವುದು ಕಷ್ಟಸಾಧ್ಯ. ಶಿಕ್ಷಣವು ಸರ್ವರಿಗೂ ಲಭಿಸುವಂತಾಗಬೇಕು. ದೇಶ, ಸಮಾಜ ಮತ್ತು ಕುಟುಂಬದ ಬೆಳವಣಿಗೆಗೆ ನಾವೆಲ್ಲರೂ ಕಾರಣಿಕರ್ತರಾಗೋಣ. ಈ ಸಮಾವೇಶದ ಉದ್ದೇಶ ಅರ್ಥಪೂರ್ಣವಾಗಲಿ ಎಂದು ಹೇಳಿದರು.
ಆನ್‌ಲೈನ್ ವಿಡಿಯೋ ಮುಖಾಂತರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯೆ ಮತ್ತು ಎಐಇಎಂ ಪೋಷಕಿಯಾಗಿರುವ ಡಾ.ಫೌಜಿಯಾ ಖಾನ್ ಮಾತನಾಡಿ, ಪ್ರಸ್ತುತ ಜಾಗತಿಕ ಸಂದರ್ಭವು ವಿಷಮಕಾರಿಯಾಗುತ್ತಿರುವುದು ವಿಷಾದನೀಯ. ಮುಗ್ಧ, ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದ್ದು, ಇಂದಿನ ದಿನಗಳಲ್ಲಿ ಮಾನವೀಯತೆಯೇ ಮೌನವಾಗುತ್ತಿವೆ. ಧರ್ಮದ ಅವಹೇಳನಗಳು ನಡೆಯುತ್ತಿವೆ. ಇಂತಹ ದೌರ್ಜನ್ಯಗಳು ಯಾತಕ್ಕೆ ನಡೆಯುತ್ತಿವೆಯೋ ನಾನು ಕಾಣೆ. ಎಲ್ಲರೂ ಸಂಘಟಿತರಾಗಿರಿ, ದೈವನಂಬಿಕೆ ಇರಲಿ ಎಂದು ತಿಳಿಸಿದರು.ಜೋಧಪುರದ ಮೌಲಾನಾ ಆಝಾದ ವಿವಿಯ ಮಾಜಿ ಉಪಕುಲಪತಿ ಪದ್ಮಶ್ರೀ ಡಾ.ಅಖ್ತರುಲ್ ವಸಿ ಅವರು ಮಾತನಾಡಿ, ಶಿಕ್ಷಣ ಸಂಪಾದನೆಯಿಂದ ಜೀವನಕ್ಕೆ ಅರ್ಥ ಬರುವುದು. ಪ್ರವಾದಿ ಮಹ್ಮದರ(ಸ) ಕಾಲದಲ್ಲಿ ಸ್ತ್ರೀಯರ ಶಿಕ್ಷಣಕ್ಕೆ ಪ್ರಾಮುಖ್ಯತೆ ದೊರೆಯಿತು. ತಾಯಿಯ ಆರೋಗ್ಯ, ಪುತ್ರಿಯ ವಯಸ್ಸು, ಪುತ್ರನ ಶಿಕ್ಷಣದ ಕುರಿತು ಚಿಂತಿಸಿರಿ. ಮಾನವೀಯತೆವೊಂದು ಬಲವಾಗಬೇಕಿದೆ, ಎಂತಹ ಪರಿಸ್ಥಿತಿಯಲ್ಲಿಯೂ ಅಧೀರರಾಗದಿರಿ, ದೈವಶ್ರದ್ಧೆ ಕಳಚಿಕೊಳ್ಳದಿರಿ ಎಂದು ಸಲಹೆ ನೀಡಿದರು.
ಅತಿಥಿಗಳಾದ ಶಿರೂರ ಆಶ್ರಮದ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡಿ, ಸೃಷ್ಟಿಯ ಮುಕುಟ, ಮಾನವ. ಪ್ರತಿ ಮಾನವನಲ್ಲಿಯೂ 9 ನೋಬೆಲ್ ಪುರಸ್ಕಾರ ಪಡೆಯುವಷ್ಟು ಸಾಮರ್ಥ್ಯ ಇದೆ ಎಂದು ಐನಸ್ಟೀನ್ ಹೇಳುತ್ತಾರೆ. ಮನುಷ್ಯನಿಗೆ ಜ್ಞಾನ ಸಂಪಾದನೆಯೇ ಮಹಾಶಕ್ತಿ, ಸ್ಥಿತಪ್ರಜ್ಞತಾ ಸ್ಥಿತಿ ಸುಖ-ದುಃಖ ಮೀರಿದ್ದ, ಕಾಯವಿದ್ದು ಕಾಣುವುದು ವಿಜ್ಞಾನ. ಪ್ರಕೃತಿಯೆ ಗುರು. ಜ್ಞಾನದಿಂದ ಲಭಿಸಿದ ಆನಂದ ಅನುಪಮ. ಅನುಭಾವದ ಅಡುಗೆ ಉಣ್ಣಿರಿ. ಸ್ಥಿಮಿತತೆ, ಯೋಗದಿಂದ ಅನುಭಾವ ಸಾಧಿಸಬಹುದು. ತನು, ಮನ, ಧನ ಗೆಲ್ಲದೇ ಮತ್ತಾವುದನ್ನು ಗೆಲ್ಲಲಾಗದು. ಘನಮನ, ಸದ್ಗುಣಗಳೇ ಸಕಲ ಸಾಧನೆಗೂ ಕಾರಣ ಎಂದು ಅಭಿಪ್ರಾಯ ಪಟ್ಟರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಎಸ್.ಎ.ಖಾದ್ರಿ ಮಾತನಾಡಿ, ಜ್ಞಾನವೇ ಶಕ್ತಿ, ಪ್ರತಿ ಸಮಸ್ಯೆಗೂ ಶಿಕ್ಷಣವೇ ಔಷಧ. ಮಾನವಿಯತೆ ಗುಣ ಬೆಳೆಯಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಡಾ.ಮಕ್ಬೂಲ ಬಾಗವಾನ, ಹಿರಿಯ ಪತ್ರಕರ್ತ ರಫೀ ಭಂಡಾರಿ, ನಜೀಬ್ ಬಕ್ಷಿ, ಎಸ್.ಎಸ್. ಬೀಳಗಿಪೀರ, ಸಲೀಮ ಜಹಾಗೀರದಾರ, ಎಸ್ಐಇಟಿ ಪ್ರಾಚಾರ್ಯ ಡಾ.ಅಬ್ಬಾಸಲಿ, ಡೀನ್ ಎನ್.ಎಸ್.ಭೂಸನೂರ, ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ, ಅಬ್ದುಲ್ ರಶೀದ್, ಮಲ್ಲಿಕಾರ್ಜುನ ಮೇತ್ರಿ, ಉಜ್ಮಾ ಸತ್ತೀಕರ, ಡಾ.ಸಮೀವುದ್ದೀನ ಸೇರಿದಂತೆ ಇನ್ನು ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.------------
ಕೋಟ್ಸೃಷ್ಟಿಯ ಮುಕುಟ, ಮಾನವ. ಪ್ರತಿ ಮಾನವನಲ್ಲಿಯೂ 9 ನೋಬೆಲ್ ಪುರಸ್ಕಾರ ಪಡೆಯುವಷ್ಟು ಸಾಮರ್ಥ್ಯ ಇದೆ ಎಂದು ಐನಸ್ಟೀನ್ ಹೇಳುತ್ತಾರೆ. ಮನುಷ್ಯನಿಗೆ ಜ್ಞಾನ ಸಂಪಾದನೆಯೇ ಮಹಾಶಕ್ತಿ, ಸ್ಥಿತಪ್ರಜ್ಞತಾ ಸ್ಥಿತಿ ಸುಖ-ದುಃಖ ಮೀರಿದ್ದ, ಕಾಯವಿದ್ದು ಕಾಣುವುದು ವಿಜ್ಞಾನ. ಪ್ರಕೃತಿಯೆ ಗುರು. ಜ್ಞಾನದಿಂದ ಲಭಿಸಿದ ಆನಂದ ಅನುಪಮ.
- ಬಸವಲಿಂಗ ಸ್ವಾಮಿಗಳು, ಶಿರೂರ ಆಶ್ರಮ