ಕೊಡಗು ವಿದ್ಯಾಲಯ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಕೊಡಗು ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯ ಕಿರಣ್ ಮತ್ತು ಶ್ಲೋಕ್ಸಿ ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ. ಅವರು ಜೇನು ನೊಣ ಕುರಿತು ಪ್ರಬಂಧ ಮಂಡಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿಯ ಕೊಡಗು ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿಗಳು ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದು ಜೇನುನೊಣಗಳ ಸಂರಕ್ಷಣೆಗೆ ಸಂಬಂಧಿತ ಪ್ರಬಂಧ ಮಂಡಿಸುತ್ತಿದ್ದಾರೆ.

ಕೊಡಗು ವಿದ್ಯಾಲಯದ ವಿಜ್ಞಾನ ಶಿಕ್ಷಕಿ ಎಂ. ಎಸ್. ಶೃತಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶ್ರೇಯ ಕಿರಣ್ ಮತ್ತು ಶ್ಲೋಕ್ಸಿ ಜೇನು ನೊಣ ಕುರಿತು ಪ್ರಬಂಧ ಮಂಡಿಸಲಿದ್ದಾರೆ.

ಜೀವಸಂಕುಲದಲ್ಲಿ ಎರೆಹುಳು ಕೃಷಿಯಲ್ಲಿ ರೈತನ ಮಿತ್ರನಾಗಿರುವಂತೆ ಕೀಟಗಳ ಗುಂಪಿಗೆ ಸೇರುವ ಜೇನುಹುಳುವಿನದ್ದೂ ಕೃಷಿಯಲ್ಲಿ ವಿಶಿಷ್ಟ ಪಾತ್ರವಿದೆ. ಪರಾಗ ಸ್ರ‍್ಶಕ್ರಿಯೆಯ ಮೂಲಕ ತಮ್ಮ ಆಹಾರವನ್ನುಪಡೆದುಕೊಳ್ಳುವ ಶ್ರಮದಲ್ಲಿ ರೈತ ಬೆಳೆಯುವ ಆಹಾರ ಬೆಳೆಗಳ ಇಳುವರಿ ಹೆಚ್ಚಿಸುವ ಕಾರ್ಯ ಜೇನುಹುಳುನಿನಿಂದ ಆಗುತ್ತದೆ. ಆಯುರ್ವೇದ, ನಾಟಿ ಔಷಧಿಯಲ್ಲಿ ಜೇನಿನ ಪಾತ್ರ ಪ್ರಮುಖ.

ಆಹಾರ ಕ್ರಮ, ಸೌಂದರ್ಯವರ್ಧಕಗಳಲ್ಲೂ ಜೇನು ಬಹು ಉಪಯೋಗಗಳನ್ನು ಹೊಂದಿದೆ. ಜೇನುಹುಳುಗಳು ಪರಿಸರ ಸಮತೋಲನದಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತಿವೆ. ಕೊಡಗು ಜಿಲ್ಲೆಯ ಮೂಲಬೆಳೆಗಳು ಕಾಫಿ ಹಾಗೂ ಕರಿಮೆಣಸು. ಇವುಗಳ ಇಳುವರಿ ಹೆಚ್ಚಿಸುವಲ್ಲಿ ಜೇನುಹುಳುಗಳ ಸೇವೆ ಹಾಗೂ ಕೊಡಗು ಜಿಲ್ಲೆಯ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಜೇನಿನ ಕೊಡುಗೆ ಅನನ್ಯ.ಆಧುನಿಕ ತಂತ್ರಜ್ಞಾನಗಳು, ಮಾನವನ ಅತಿಯಾದ ದುರಾಸೆಗಳ ಫಲ ಇಂದು ಜೀವಸಂಕುಲಕ್ಕೆ ಕುತ್ತು ಬಂದೊದಗಿದೆ. ಅರಣ್ಯನಾಶ, ರಾಸಾಯನಿಕ ಗೊಬ್ಬರಗಳ ಬಳಕೆ, ಕೀಟ ನಾಶಕಗಳ ಬಳಕೆಗಳಿಗೆ ಬಲಿಯಾಗುತ್ತಿರುವುದರಿಂದಾಗಿ ರೈತನ ಕಾರ್ಯಕ್ಕೆ ಪೂರಕವಾಗಿಸಹಕರಿಸುತ್ತಿದ್ದ ಜೇನುಹುಳಗಳು ಕೂಡ ಅಳಿವಿನ ಅಂಚಿನಲ್ಲಿವೆ.

ಜೇನುಹುಳುಗಳ ಉಳಿವಿಗಾಗಿ ಪರಾಗಸ್ಪರ್ಷ ಸ್ನೇಹಿತೋಟಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತಪರ ಚಟುವಟಿಕೆಗಳು ಕಾರ್ಯಗತಗೊಳ್ಳಬೇಕು,, ಜೇನಿನ ಮಹತ್ವವನ್ನು ಯುವಸಮುದಾಯಕ್ಕೆ ಮನಗಾಣಿಸುವ ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆಗಳು ಆಯೋಜನೆಗೊಳ್ಳಬೇಕು. ನೈಸರ್ಗಿಕವಾಗಿ ನಮಗೆ ಸಿಗುವ ಹೂವು, ಹಣ್ಣು, ತರಕಾರಿಗಳ ಬೆಳೆಯ ಹಿಂದೆ ಇರುವುದು ಜೇನುನೊಣಗಳ ಪರಾಗ ಸ್ಪರ್ಷ ಶ್ರಮ.

ಇವುಗಳ ಅಗತ್ಯತೆ, ಅನಿವಾರ್ಯತೆಗಳನ್ನು ಮನಗಂಡು ಜೇನುನೊಣಗಳ ಸಂತತಿ ರಕ್ಷಿಸಿ ಪರಿಸರ ಸಮತೋಲನ ಕಾಪಾಡಬೇಕಾಗಿದೆ ಎಂದೂ ವಿದ್ಯಾರ್ಥಿಗಳು ಪ್ರಬಂಧದಲ್ಲಿ ಹೇಳಿದ್ದಾರೆ.

Share this article