ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿ2023ರ ಮಾರ್ಚ್ 28ರಂದು ಅಧಿಕೃತವಾಗಿ ಆರಂಭವಾಗಿರುವ ಕೊಡಗು ವಿಶ್ವ ವಿದ್ಯಾಲಯ ಕಳೆದೆರಡು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಅಲ್ಲದೆ ಕೊಡಗು ವಿವಿಗೆ 100 ಎಕರೆ ವಿಶಾಲವಾದ ಜಾಗ ಹಾಗೂ ಸುಸಜ್ಜಿತ ಕಟ್ಟಡ ಕೂಡ ಇರುವುದರಿಂದ ಯಥಾ ಸ್ಥಿತಿಯಲ್ಲಿ ಕೊಡಗು ವಿವಿಯನ್ನು ಮುಂದುವರಿಸಬೇಕೆಂಬ ಆಗ್ರಹ ಜಿಲ್ಲೆಯ ಪ್ರಮುಖರದ್ದಾಗಿದೆ.
ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ರಾಜ್ಯದಲ್ಲಿ ಹೊಸ ವಿ.ವಿ.ಗಳನ್ನು ಘೋಷಣೆ ಮಾಡಲಾಯಿತು. ಇದರಂತೆ ಪುಟ್ಟ ಜಿಲ್ಲೆ ಕೊಡಗಿನಲ್ಲೂ ಕೂಡ ಕೊಡಗು ವಿವಿ ಆರಂಭ ಮಾಡಿತ್ತು. ಆರಂಭದಿಂದ ಇಲ್ಲಿಯ ವರೆಗೆ ಸರ್ಕಾರದ ಯಾವುದೇ ಅನುದಾನ ಇಲ್ಲದಿದ್ದರೂ ಕೂಡ ವಿಶ್ವ ವಿದ್ಯಾಲಯ ಹಲವು ಕಾರ್ಯ ಚಟುವಟಿಕೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ.ಕೊಡಗು ವಿ.ವಿ. ಕುಲಪ ಪ್ರೊ.ಅಶೋಕ ಸಂಗಪ್ಪ ಆಲೂರ್ ನೇತೃತ್ವದಲ್ಲಿ ರಾಷ್ಟ್ರದ ಹಲವು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡುವ ಮೂಲಕ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಮುಂದೆಯೂ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಆದರೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದಿದ್ದ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದ ನೂತನ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ನಿರ್ಧಾರ ತೆಗೆದಿಕೊಂಡಿರುವುದರಿಂದ ಇದರಲ್ಲಿ ಕೊಡಗು ವಿವಿ ಕೂಡ ಇದೆ. ಇದರಿಂದ ಜಾಗ, ಕಟ್ಟಡ ಹಾಗೂ ಅಭಿವೃದ್ಧಿಯ ದಾಪುಗಾಲಿಡುತ್ತಿರುವ ವಿವಿ ಮುಚ್ಚುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ.ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ:
ಕೊಡಗು ವಿ.ವಿ.ಯು ಹಲವು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಬ್ರಿಡ್ಜ್ವಾಟರ್ ಸ್ಟೇಟ್ ಯೂನಿವರ್ಸಿಟಿ ನಡುವೆ ಕೂಡ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಕೊಡಗು ವಿವಿಯಲ್ಲಿನ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮತ್ತು ತರಬೇತಿ ಪಡೆಯಲು ಸಹಕಾರಿಯಾಗಿದೆ.ಇದಲ್ಲದೆ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಹೊಸ ತಾಂತ್ರಿಕ ಪ್ರವೃತ್ತಿಗಳ ಕುರಿತು ಜ್ಞಾನ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ತಲೆಮಾರಿನ ಶಿಕ್ಷಕರು ಮತ್ತು ಉದ್ಯಮಶೀಲ ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ, ತಮಿಳುನಾಡು ಸರ್ಕಾರ ಮತ್ತು ಕೈಗಾರಿಕೆಗಳ ಒಕ್ಕೂಟದೊಂದಿಗೆ ಒಂದು ಸೊಸೈಟಿಯಾಗಿ ಸ್ಥಾಪಿತವಾಗಿರುವ ಐಸಿಟಿ ಅಕಾಡೆಮಿ ಹಾಗೂ ಕೊಡಗು ವಿಶ್ವವಿದ್ಯಾಲಯವು ಜಂಟಿಯಾಗಿ ಒಡಂಬಡಿಕೆ ಮಾಡಿಕೊಂಡಿವೆ. ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಜೊತೆಗೆ ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ. ಕೊಡಗು ಅಂಚೆ ಇಲಾಖೆಯು ಜಿಲ್ಲೆಯಲ್ಲಿ ವಿನೂತನ ಸೇವೆಯೊಂದನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ವಿನೂತನ ಸೇವೆಗೆ ‘ಪ್ರಾಜೆಕ್ಟ್ ಕಾವೇರಿ’ ಎಂಬ ಹೆಸರನ್ನಿಡಲಾಗಿದೆ.
ಕೊಡಗು ಜಿಲ್ಲೆ ಪ್ರತ್ಯೇಕ ರಾಜ್ಯ, ಒಂದು ವಿಧಾನಸಭಾ ಕ್ಷೇತ್ರ ಸೇರಿ ಹಲವು ಸಂಪನ್ಮೂಲವನ್ನು ಕಳೆದುಕೊಂಡಿದೆ. ಆದ್ದರಿಂದ ಕೊಡಗಿಗೆ ಸಿಕ್ಕಿರುವ ವಿಶ್ವ ವಿದ್ಯಾಲಯ ಮತ್ತೆ ವಿಲೀನ ಮಾಡುವುದು ಸರಿಯಲ್ಲ. ಕೊಡಗು ವಿವಿಗೆ ವಿಶಾಲವಾದ ಜಾಗ, ಸುಸಜ್ಜಿತ ಕಟ್ಟಡ ಕೂಡ ಇದೆ. ಮೂರು ಕೋಟಿ ಅನುದಾನಕ್ಕಾಗಿ ವಿವಿ ಮುಚ್ಚುವ ನಿರ್ಧಾರ ಸರಿಯಲ್ಲ. ಜಿಲ್ಲೆಯ ಬುಡಕಟ್ಟು ಹಾಗೂ ಬಡ ಜನರ ಉನ್ನತ ಶಿಕ್ಷಣಕ್ಕೆ ಕೊಡಗು ವಿವಿ ಯಥಾ ಸ್ಥಿತಿಯಲ್ಲಿ ಮುಂದುವರೆಯಬೇಕು. ಆದ್ದರಿಂದ ಕೊಡಗು ವಿವಿ ಮುಚ್ಚುವ ಪ್ರಸ್ತಾಪವನ್ನು ಪುನರ್ ಪರಿಶೀಲನೆ ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು.। ವಿ.ಪಿ. ಶಶಿಧರ್, ಸಾಮಾಜಿಕ ಹೋರಾಟಗಾರರು ಕುಶಾಲನಗರ
ಕಾಂಗ್ರೆಸ್ ಸರ್ಕಾರವು ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕೇವಲ ತನ್ನ ಸಂಪುಟ ಸಭೆಯ ಉಪಸಮಿತಿಯ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್‌ಓ ಉಗ್ರವಾಗಿ ಖಂಡಿಸುತ್ತದೆ. ಮುಚ್ಚಲ್ಪಡುತ್ತಿರುವ 9 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿಗಳ ಹೊಣೆ ಯಾರದ್ದು ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಡುತ್ತಿದೆ.। ಸ್ವಾತಿ, ಜಿಲ್ಲಾ ಸಹ ಸಂಚಾಲಕಿ ಎಐಡಿಎಸ್‌ಒ
ಕೊಡಗು ವಿವಿ ಮುಚ್ಚುವ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಾವು ಕರೆದ ಪಕ್ಷಾತೀತ ಸಭೆ ಯಶಸ್ವಿಯಾಗಿದೆ. ಸುಮಾರು 150ಕ್ಕೂ ಅಧಿಕ ಮಂದಿ ಸಭೆಯಲ್ಲಿ ಸೇರಿದ್ದರು. ಕೊಡಗು ವಿವಿ ಮುಚ್ಚುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು. ಬಿಜೆಟ್ ಮುಂಚಿತವಾಗಿ ಶಾಸಕರ ಮೂಲಕ ನಿಯೋಗ ತೆರಳಿ ಸರ್ಕಾರಕ್ಕೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲಾಗುವುದು. ಈ ಮೂಲಕ ಕೊಡಗು ವಿವಿಯನ್ನು ಉಳಿಸಲಾಗುವುದು.। ಕೃಷ್ಣೇಗೌಡ, ಅಧ್ಯಕ್ಷ, ಕೊಡಗು ವಿವಿ ಹಿತ ರಕ್ಷಣಾ ಬಳಗ