ಕನ್ನಡಪ್ರಭ ವಾರ್ತೆ ಮಡಿಕೇರಿ
ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶದಿಂದ ಪವಿತ್ರ ಕೊಡವ ಲ್ಯಾಂಡ್ ನ್ನು ಬೃಹತ್ ಪ್ರಮಾಣದಲ್ಲಿ ಭೂಪರಿವರ್ತನೆ ಮಾಡುತ್ತಿದ್ದು, ಇದು ಮುಂದೊಂದು ದಿನ ಮೂಲನಿವಾಸಿ ಆದಿಮ ಸಂಜಾತ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.ಸಿದ್ದಾಪುರದ ಭೂತಪೂರ್ವ ಬಿಬಿಟಿಸಿಯ 2400 ಎಕರೆ ಕಾಫಿ ತೋಟಗಳು, ಇದೀಗ ಆರೆಂಜ್ ಕೌಂಟಿ ರೆಸಾರ್ಟ್ ಒಡೆತನದ ಪುನರ್ ನಾಮಕರಣಗೊಂಡ ‘ರಾಮಪುರಂ ಹೋಲ್ಡಿಂಗ್ಸ್ ಇವಾಲ್ವ್ ಬ್ಯಾಕ್ ಎಲ್ಖಿಲ್’ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಲವು ವರ್ಷಗಳ ಹಿಂದೆ ಬೆಂಗಳೂರು ಪ್ರದೇಶದಲ್ಲಿ ಮರಸು ಒಕ್ಕಲಿಗ ಸಮುದಾಯ ಮತ್ತು ತಿಗಲರು ಹೆಚ್ಚು ಭೂಪ್ರದೇಶವನ್ನು ಹೊಂದಿದ್ದರು. ಆದರೆ ಕ್ರಮೇಣ ಅನಿವಾಸಿ ಭಾರತೀಯ ಭೂಮಾಫಿಯಾಗಳ ಆಮಿಷಕ್ಕೆ ಒಳಗಾಗಿ ಭೂಮಿಯನ್ನೆಲ್ಲ ಮಾರಾಟ ಮಾಡಿದ್ದರು. ಈಗ ಈ ಎರಡು ಸಮುದಾಯದ ಮಂದಿ ಭೂಮಿ ಖರೀದಿಸಿದವರ ಬಳಿಯೇ ಕೂಲಿಯಾಳುಗಳಾಗಿ ಕೆಲಸ ಮಾಡುವ ದುಸ್ಥಿತಿ ಬಂದೊದಗಿದೆ.ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ದಂದೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಂದೆಕೋರರಿಗೆ ಮಾರ್ಗ ತೋರಿಸುತ್ತಿದೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ.ಆಡಳಿತ ವ್ಯವಸ್ಥೆ ಮಳೆಯ ನೆಪವೊಡ್ಡಿ ರೆಡ್ ಅಲರ್ಟ್, ಆರೆಂಜ್ ಅಲರ್ಟ್, ಎಲ್ಲೋ ಅಲರ್ಟ್ ಎಂದು ಘೋಷಿಸಿ ಬೆಟ್ಟಗುಡ್ಡಗಳಲ್ಲಿ ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಮೂಲನಿವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ. ಸ್ಥಳೀಯರಲ್ಲಿ ಭಯ ಮೂಡಿಸಿದರೆ ಭೂ ಮಾಫಿಯಾಗಳಿಗೆ ಕೊಡವ ಲ್ಯಾಂಡ್ ನ್ನು ಕಬಳಿಸಲು ಸುಲಭವಾಗುತ್ತದೆ ಎನ್ನುವ ಷಡ್ಯಂತ್ರ ಆಡಳಿತಶಾಹಿಗಳಿಂದ ಪರೋಕ್ಷವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಪಂಚಾಯಿತಿ ಪಿಡಿಒಗಳು ಜನಪೀಡಕರಾಗಿ ದೊಡ್ಡ ದೊಡ್ಡ ಕಂಪೆನಿಗಳಿಗೆ ಸಹಾಯ ಮಾಡುತ್ತಿದ್ದಾರೆ. ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯುವ ಬಂಡವಾಳಶಾಹಿಗಳು ರೆಸಾರ್ಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಸ್ಥಳೀಯರು ಕೇವಲ ಸ್ವಂತ ಮನೆ ಕಟ್ಟಲು ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ವರ್ಷ ಗಟ್ಟಲೆ ಅಲೆಯಬೇಕಾಗಿದೆ. ಅಧಿಕಾರಿಗಳಿಗೆ ಲಂಚ ನೀಡ ಬೇಕಾಗಿದೆ ಎಂದು ನಾಚಪ್ಪ ದೂರಿದರು.ಜಿಲ್ಲೆಯ ಇತರೆಡೆಯಂತೆ ಕಕ್ಕಬ್ಬೆ ನಾಲಡಿ ಪೂಮಾಲೆ ಎಸ್ಟೇಟ್ ನ 300 ಎಕರೆ ಜಾಗವನ್ನು ಭೂಪರಿವರ್ತನೆ ಮಾಡಲು ಹುನ್ನಾರ ನಡೆದಿದೆ. ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ದೆಹಲಿ ಮತ್ತು ಮುಂಬೈ ಭಾಗದ ರಾಜಕೀಯ ಸಂಕುಲಗಳು ಭೂಮಾಫಿ ಯಾದ ಪರವಾಗಿ ರೆಸಾರ್ಟ್ ನಿರ್ಮಾಣದ ಅನುಮತಿಗೆ ಪ್ರಭಾವ ಬೀರುತ್ತಿದ್ದಾರೆ. ಮರಂದೋಡು ಗ್ರಾಮದ ಮೇರಿಯಂಡ ಅಂಗಡಿ ಪ್ರದೇಶದಲ್ಲಿ ಬತ್ತದ ಗದ್ದೆ ಮತ್ತು ಪರ್ವತ ಕೊರೆದು ಟೌನ್ ಶಿಪ್ ಗಾಗಿ ಭೂಪರಿವರ್ತನೆಯಾ ಗುತ್ತಿದ್ದು, ಕೊಡವ ಲ್ಯಾಂಡ್ ನ ಕಾವೇರಿ ಒಡಲು ನಾಶವಾಗುತ್ತಿದೆ.
ಸಿದ್ದಾಪುರದ ಭೂತಪೂರ್ವ ಬಿಬಿಟಿಸಿಯ 2400 ಎಕರೆ ಕಾಫಿ ತೋಟಗಳು, ಇದೀಗ ಆರೆಂಜ್ ಕೌಂಟಿ ರೆಸಾರ್ಟ್ ಒಡೆತನದ ಪುನರ್ ನಾಮಕರಣಗೊಂಡ ‘ರಾಮಪುರಂ ಹೋಲ್ಡಿಂಗ್ಸ್ ಇವಾಲ್ವ್ ಬ್ಯಾಕ್ ಎಲ್ಖಿಲ್’ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ತಕ್ಷಣ ಸ್ಥಗಿತಗೊಳಿಸಬೇಕು. ಕಾಫಿ ಮಂಡಳಿ ಸದಸ್ಯರೋರ್ವರು ಒಂದು ಸಾವಿರ ಮರ ಕತ್ತರಿಸುವ ಅನುಮತಿಯಲ್ಲಿ ಮೂರು ಸಾವಿರ ಬೀಟೆ ಮರಗಳನ್ನು ಹನನ ಮಾಡಿದ್ದಾರೆ. ಅಲ್ಲದೆ ಎಲ್‌ಕಿಲ್ ಬ್ಲಾಕ್ ನ 10 ಎಕರೆ ತೋಟವನ್ನು ಬೃಹತ್ ವಿಲ್ಲಾ ನಿರ್ಮಾಣಕ್ಕಾಗಿ 9.9 ಕೋಟಿ ರು. ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.ಜು.15ರಂದು ಪೊನ್ನಂಪೇಟೆ ಮತ್ತು ಜು. 24ರಂದು ವಿರಾಜಪೇಟೆಯಲ್ಲಿ ಮಾನವ ಸರಪಳಿ ಜನ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ಸಂದರ್ಭ ತಿಳಿಸಿದರು. ಪೊರಿಮಂಡ ಧನು, ಪಳಗಂಡ ಗೀತಾ ಸುಬ್ಬಯ್ಯ, ಮುಳ್ಳಂಡ ಸುಶೀಲಾ ತಮ್ಮಯ್ಯ, ಚೋಳಪಂಡ ಗಂಗಮ್ಮ ಕಾಳಯ್ಯ, ಕೆಚ್ಚೆಟ್ಟೀರ ರತಿ ಕಾರ್ಯಪ್ಪ, ಅಡಿಕೆರ ಶಾಂತಿ ಜಯ, ಬಲ್ಲಾರಂಡ ಮಲ್ಲಿಗೆ ಚಿಣ್ಣಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗಂಡ ಸುಮಿ ಅಪ್ಪಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಬಿದ್ದಂಡ ಮಾದಯ್ಯ, ಬಟ್ಟೀರ ಕಾಳಪ್ಪ, ಚೋಳಂಡ ಪೂವಯ್ಯ, ಬಟ್ಟೀರ ಪೂಣಚ್ಚ, ಪೊರಿಮಂಡ ದಿನಮಣಿ, ಮುಳ್ಳಂಡ ರತ್ತು, ಮುಳ್ಳಂಡ ಸನ್ನಿ, ಬಲ್ಲಾರಂಡ ಚಿಣ್ಣಪ್ಪ, ಕೊಕ್ಕೇರ ಮಾದಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಕೊಡವರಿಗೊಬ್ಬನೇ ನಾಚಪ್ಪ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ 35ವರ್ಷಗಳಿಂದ ಕೊಡಗಿನ ಹಾಗೂ ಕೊಡವ ಜನಾಂಗದ ಏಳಿಗೆಗಾಗಿ ಹಗಲಿರುಳು ಹೋರಾಡಿದೆ. ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್‌ವರೆಗೆ ನ್ಯಾಯಯುತ ಹೋರಾಟ ನಡೆಸಿ ಜಯ ಸಿಕ್ಕಿದೆ. ಹಿರಿಯ ಸಾಹಿತಿ ಬಿ.ಡಿ.ಗಣಪತಿಯವರು ಬರೆದ ‘ಜಗತ್ತಿಗೊಂದೇ ಕೊಡಗು’ ಎಂಬ ಪುಸ್ತಕದ ಶೀರ್ಷಿಕೆಯಂತೆ ಕೊಡವರಿಗೊಬ್ಬನೇ ಎನ್.ಯು.ನಾಚಪ್ಪ ಎಂದು ಹಿರಿಯ ರಾಜಕೀಯ ಮುತ್ಸದ್ಧಿ ಪೊರಿಮಂಡ ದಿನಮಣಿ ಪೂವಯ್ಯ ಇದೇ ಸಂದರ್ಭ ತಿಳಿಸಿದರು.