ಕನ್ನಡಪ್ರಭ ವಾರ್ತೆ ಕುಟ್ಟ (ಪೊನ್ನಂಪೇಟೆ ತಾಲೂಕು)
ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಉಡುಗೆ ತೊಡುಗೆಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಅದರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಭಾನುವಾರ ಕೊಡಗು-ಕೇರಳ ಗಡಿಭಾಗವಾದ ಕುಟ್ಟದಲ್ಲಿ ಚಾಲನೆ ದೊರೆಯಿತು.
ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊಡವರು ಹಾಗೂ ಕೊಡವ ಭಾಷಿಕ ಸಮುದಾಯ ಬೃಹತ್ ಪಾದಾಯಾತ್ರೆ ಹಮ್ಮಿಕೊಂಡಿದೆ.ಕುಟ್ಟದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ ಸೇರಿದಂತೆ ವಿವಿಧ ಕೊಡವ ಸಮಾಜಗಳು ಹಾಗೂ ಕೊಡವ ಭಾಷಿಕ ಸಮುದಾಯಗಳ ಮುಖಂಡರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಕೊಡವರು ರಸ್ತೆಯಲ್ಲಿ ಮೂರು ನಾಲ್ಕು ಕಿಲೋ ಮೀಟರ್ ದೂರದ ವರೆಗೆ ರಸ್ತೆ ತುಂಬ ನಡೆದು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಕೊಡವರು ಸ್ವಯಂ ಪ್ರೇರಿತವಾಗಿ ಐನ್ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿದವನ್ನು ಶ್ರೀಮಂಗಲ, ಟಿ. ಶೆಟ್ಟಿಗೇರಿ ಕೊಡವ ಸಮಾಜದವರು ಸ್ವಾಗತಿಸಿದರು. ತಂಪು ಪಾನೀಯ ಹಾಗೂ ವಿವಿಧ ತಿಂಡಿ ತಿನಿಸು, ಹಣ್ಣುಗಳನ್ನು ಸಾವಿರಾರು ಪಾದಯಾತ್ರಿಗಳಿಗೆ ವಿತರಿಸಿದರು.
ಅಲ್ಲಿಂದ ಟಿ. ಶೆಟ್ಟಿಗೇರಿ ವರೆಗೆ ನಡೆದು ಸಮಾವೇಶಗೊಂಡರು. ಮೊದಲ ದಿನದ ಪಾದಯಾತ್ರೆಯಲ್ಲಿ ಒಟ್ಟು 18 ಕಿಲೋ ಮೀಟರ್ ಕ್ರಮಿಸಿದರು.
ಟಿ.ಶೆಟ್ಟಿಗೇರಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್, ಇತ್ತೀಚಿನ ಕೆಲವು ವರ್ಷಗಳಿಂದ ಕೊಡವ ಭಾಷಿಗರ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಖಂಡಿಸಿ ಕೊಡವ ಭಾಷಿಗರು ಪಾದಯಾತ್ರೆ ಆರಂಭಿಸಿದ್ದೇವೆ ಎಂದರು.
ಇದು ಯಾರ ವಿರುದ್ಧವೂ ನಮ್ಮ ಪ್ರತಿಭಟನೆಯಲ್ಲ. ಇದು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಉಡುಗೆ ತೊಡುಗೆಗಳ ರಕ್ಷಣೆಗಾಗಿ ಎನ್ನುತ್ತಲೇ ಅಖಿಲ ಕೊಡವ ಸಮಾಜದ ತಮ್ಮ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದೆ ಎಂದು ಹೇಳಿದರು.ರಸ್ತೆಯುದ್ದಕ್ಕೂ ಕಸ ರಾಶಿ ಬೀಳದಂತೆ ಸ್ವಯಂ ಪ್ರೇರಿತವಾಗಿ ವಾಹನ ವ್ಯವಸ್ಥೆ ಮಾಡಲಾಗಿತ್ತು. ಎರಡು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ವೃದ್ಧರಿಗಾಗಿ ಟೆಂಪೋ ಟ್ರಾವೆಲ್ ವ್ಯವಸ್ಥೆ ಕೂಡ ಮಾಡಲಾಗಿತ್ತು.
........................
ಪಾಯಿಂಟ್ಸ್*ಕುಟ್ಟದಿಂದ ಕೊಡವಾಮೆ ಬಾಳೊ ಪಾದಯಾತ್ರೆ ಆರಂಭ*ಹರಿದು ಬಂದ ಜನ ಸಾಗರ, ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ
*ಕುಟ್ಟ ಬಸ್ ನಿಲ್ದಾಣದಲ್ಲಿ ಆರಂಭವಾದ ಪಾದಯಾತ್ರೆ*2.5 ಕಿ.ಮೀ. ಉದ್ದದ ಪಾದಯಾತ್ರೆ ವ್ಯಾಪ್ತಿ
*ಫೆ.7ರವರೆಗೆ ಕುಟ್ಟದಿಂದ ಮಡಿಕೇರಿಯವರೆಗೆ 82 ಕಿಲೋಮೀಟರ್ ನಡೆಯಲಿರುವ ಪಾದಯಾತ್ರೆ*ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡಿರುವ ಕೊಡವರು ಹಾಗೂ ಕೊಡವ ಭಾಷಿಕರು.ಮಹಿಳೆ, ಮಕ್ಕಳು ಭಾಗಿ, ಕೊಡಗಿನದ್ಯಾಂತ ಆಗಮಿಸಿರುವ ಜನರು........................ಕುಟ್ಟದಿಂದ ಜಿಲ್ಲಾಕೇಂದ್ರ ಮಡಿಕೇರಿವರೆಗೆ ಒಟ್ಟು 80 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದೇವೆ. ಟಿ.ಶೆಟ್ಟಿಗೇರಿ, ಪೊನ್ನಂಪೇಟೆ, ಬಿಟ್ಟಂಗಾಲ, ಮೂರ್ನಾಡು ನಂತರ ಮೇಕೇರಿಗೆ ತಲುಪಿ ಅಲ್ಲಿಂದ ಮಡಿಕೇರಿ ತಲುಪಲಿದೆ. ಫೆ.7ರಂದು ಮಡಿಕೇರಿಯಲ್ಲಿ ಕನಿಷ್ಠ 25 ಸಾವಿರ ಜನರು ಸೇರಲಿದ್ದೇವೆ.। ಪರದಂಡ ಸುಬ್ರಹ್ಮಣಿ, ಅಧ್ಯಕ್ಷ ಅಖಿಲ ಕೊಡವ ಸಮಾಜ