ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆ ಮಂಗಳವಾರ ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ಹಾಗೂ ಅಭಿಪ್ರಾಯಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವಂತೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.
ಕಕ್ಕಡ 18 ಹಾಗೂ ಬೇಲ್ ನಮ್ಮೆ ಕಾರ್ಯಕ್ರಮವನ್ನು ಸಂಸ್ಕೃತಿಯ ಅನಾವರಣದೊಂದಿಗೆ ಮಡಿಕೇರಿ, ಅಮ್ಮತ್ತಿ, ಪೊನ್ನಂಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ನಡೆಸಲು ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.ಮಂಗಳೂರಿನಲ್ಲಿ ಆಯೋಜಿಸಲಿರುವ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯದ ಪ್ರದರ್ಶನಗಳೊಂದಿಗೆ ನಡೆಸುವಂತೆ ಹಾಗೂ ಇದಕ್ಕೆ ಪೂರ್ವಕವಾಗಿ ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಇದರನ್ವಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಚಿತ್ರ ಸ್ಪರ್ಧೆಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮತ್ತು ವಿದ್ಯಾ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಕರ್ನಾಟಕ ಏಕೀಕರಣ ಹಾಗೂ ಕೊಡವ ಭಾಷೆ, ಸಂಸ್ಕೃತಿಯಿಂದ ಕನ್ನಡದ ಬೆಳವಣಿಗೆ ಒಳಗೊಂಡಂತೆ ಮಕ್ಕಳಿಗೆ ಏರ್ಪಡಿಸಲಾಗಿರುವ ಸ್ಪರ್ಧಾ ಕಾರ್ಯಕ್ರಮಗಳಿಗೆ ಪ್ರತಿ ವಿದ್ಯಾಸಂಸ್ಥೆಗಳಿಂದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಿಕೊಡುವಂತೆ ತೀರ್ಮಾನಿಸಲಾಯಿತು. ಎಲ್ಲ ಕಾರ್ಯಕ್ರಮಗಳಿಗೆ ಅಕಾಡೆಮಿಯ ಸದಸ್ಯರ ಸಂಚಾಲಕತ್ವ ಹಾಗೂ ಜಿಲ್ಲೆಯ ನುರಿತ ತಜ್ಞ ವ್ಯಕ್ತಿಗಳನ್ನು ಆಹ್ವಾನಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುವಂತೆ ತೀರ್ಮಾನಿಸಲಾಯಿತು. ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಈಗಾಗಲೇ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಸರ್ವ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆದಿದ್ದು ಆಚರಣೆಯನ್ನು ಯಶಸ್ವಿಗೊಳಿಸುವಲ್ಲಿ ಸರ್ವರ ಸಹಕಾರವನ್ನು ಕೋರಲಾಯಿತು.ಸಭೆಯಲ್ಲಿ ಸ್ಥಾಯಿ ಸಮಿತಿ ಹಾಗೂ ಪ್ರಕಟಣೆ ಸಮಿತಿಗೆ ಅಧ್ಯಕ್ಷರು ಹಾಗೂ ರಿಜಿಸ್ಟ್ರಾರ್ ಒಳಗೊಂಡಂತೆ ನೇಮಿಸಲಾಯಿತು.
ಸಭೆಯಲ್ಲಿ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕೊಡಿಜಮ್ಮಂಡ ಎಂ.ಬಾಲಕೃಷ್ಣ, ಪೊನ್ನೀರ ಯು. ಗಗನ್, ಕುಡಿಯರ ಕಾವೇರಪ್ಪ, ನಾಯಂದೀರ ಆರ್.ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ. ಎ. ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆ ಸಹಾಯಕ ನಿರ್ದೇಶಕರಾದ ಕುಮಾರ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಗಿರೀಶ್ ಹಾಜರಿದ್ದರು.