ಕನ್ನಡಪ್ರಭ ವಾರ್ತೆ ಮಡಿಕೇರಿ
ಆದಿಮಸಂಜಾತ ಕೊಡವ ಬುಡಕಟ್ಟು ಜನರ ಸಾಂಪ್ರದಾಯಿಕ ಉಡುಪಿನ ಮಹತ್ವದ ಕುರಿತು ಕಳೆದ 35 ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಾಗೃತಿ ಮೂಡಿಸುತ್ತಲೇ ಬಂದಿದ್ದು, ನಮ್ಮ ಪ್ರಯತ್ನ ಫಲ ನೀಡಿರುವುದಕ್ಕೆ ಕೊಡವರ ಬೃಹತ್ ಪಾದಯಾತ್ರೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವರು ರಾರಾಜಿಸಿರುವುದೇ ಸಾಕ್ಷಿಯಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.ಫೆ.7 ರಂದು ಮಡಿಕೇರಿಯಲ್ಲಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರ ಸಹಸ್ರ ಕೊಡವರು ಕೆಂಪು ತಲೆವಸ್ತ್ರ, ಕುಪ್ಯಚೇಲೆ ಮತ್ತು ಕೊಡವ ಪೊಡೆಯ ಉಡುಪಿನಲ್ಲಿ ಸಾಗುವ ಮೂಲಕ ಧೀರ ಕೊಡವರ ಗಾಂಭೀರ್ಯವನ್ನು ಪ್ರದರ್ಶಿಸಿದ್ದಾರೆ. ಇದಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಕೊಡವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಳೆದ 35 ವರ್ಷಗಳಿಂದ ಆದಿಮಸಂಜಾತ ಕೊಡವ ಲೋಕದ ಅದಮನೀಯ ಧ್ವನಿ ಮತ್ತು ಸ್ಥಿತಿ ಸ್ಥಾಪಕತ್ವದ ಚಳುವಳಿಯ ಮೂಲಕ ಸಿಎನ್‌ಸಿ ಸಂಘಟನೆ ಶ್ರಮಿಸುತ್ತಿದೆ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಸ್ವ-ನಿರ್ಣಯದ ಹಕ್ಕು ಹಾಗೂ ಎಸ್‌ಟಿ ಟ್ಯಾಗ್ ಗಾಗಿ ನಿರಂತರ ಶಾಂತಿಯುತ ಹೋರಾಟವನ್ನು ನಾವು ನಡೆಸುತ್ತಿದ್ದೇವೆ. ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೊಡವರು ವಿಶಿಷ್ಟ ಜನಾಂಗಕ್ಕೆ ಸೇರಿದವರು ಮತ್ತು ತಮ್ಮದೇ ಆದ ಸಾಂಪ್ರದಾಯಿಕ ವಸ್ತ್ರ ವಿನ್ಯಾಸ ಹೊಂದಿದ್ದಾರೆ ಎನ್ನುವುದನ್ನು ಸಾಕ್ಷೀಕರಿಸಲು ಹೋರಾಟ ಆರಂಭವಾದಾಗಿನಿಂದ ಇಂದಿನವರೆಗೆ ಕೆಂಪು ತಲೆ ವಸ್ತ್ರವನ್ನು ಧರಿಸುತ್ತಲೇ ಬಂದಿದ್ದೇವೆ. ಆ ಮೂಲಕ ತಪಸ್ಸಿನಂತೆ ಸಮಸ್ತ ಕೊಡವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ.ಆದಿಮ ಸಂಜಾತ ಕೊಡವ ಜನರ ಶಾಸನಬದ್ಧ ಹಕ್ಕೋತ್ತಾಯಗಳನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಲು ಕೊಡವ ಹೆಗ್ಗರುತುಗಳಾದ ಭಾಷೆ, ಸಂಸ್ಕೃತಿ, ಪರಂಪರೆ, ಉಡುಗೆ ತೊಡುಗೆ, ಆರಾಧಾನಾ ಪದ್ಧತಿಯ ಕುರಿತು ದೇಶದ ಜನರಿಗೆ ಹಾಗೂ ಸರ್ಕಾರಗಳಿಗೆ ಅರಿವಿಕೆ ಮೂಡಿಸುವ ಕಾರ್ಯವಾಗಬೇಕು. ಇದು ಸಂವಿಧಾನದ 51 ಎಎಫ್ ವಿಧಿಯಡಿ ಅಡಕವಾಗಿದೆ. ಕೊಡವರು ವಿಶಿಷ್ಟ ಜನಾಂಗಕ್ಕೆ ಸೇರಿದವರು, ನಮ್ಮ ಹಕ್ಕೊತ್ತಾಯ, ಭಾಷೆ, ಸಂಸ್ಕೃತಿ, ಪರಂಪರೆ ವಿಭಿನ್ನ ಮತ್ತು ಬೇರೆಯೇ ಎನ್ನುವುದನ್ನು ಸಾಬೀತು ಪಡಿಸಲು ಕಳೆದ 35 ವರ್ಷಗಳಿಂದ ನಡೆಸಿದ ನಿರಂತರ ಕಾರ್ಯಕ್ರಮ ಈಗ ಫಲ ನೀಡಿದೆ. ನಮ್ಮ ಹಲವು ಉದ್ದೇಶಗಳಲ್ಲಿ ಉಡುಗೆ ತೊಡುಗೆ ಕೂಡ ಒಂದಾಗಿದ್ದು, ಅದು ಈಗ ಈಡೇರಿದೆ.
ಆದರೆ ನಮ್ಮದೇ ಸಮುದಾಯದವರು ಕೆಂಪುವಸ್ತ್ರ ತೊಡುವುದನ್ನು ವಿರೋಧಿಸಿದರು, ಅಪಹಾಸ್ಯ ಮಾಡಿದರು. ಜಾನಪದ ಪರಂಪರೆಯ ಮಹತ್ವವನ್ನು ನಿರ್ಲಕ್ಷಿಸಿದರು. ಆದರೂ ನಾವು ಅತ್ಯಂತ ತಾಳ್ಮೆಯಿಂದ ಕೊಡವ ಆಚಾರ, ವಿಚಾರವನ್ನು ಅನುಸರಿಸಿಕೊಂಡು ಬಂದಿದ್ದೇನೆ. ಸಿಎನ್‌ಸಿ ಸಂಘಟನೆ ಎಲ್ಲಾ ಕೊಡವ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಇದರಲ್ಲಿ ಬಾಳೆ ಬೆಂಗುವ ಆಚರಣೆ (ಬಾಳೆ ಕಡಿಯುವುದು) ಕೂಡ ಒಂದು. ಈ ಆಚರಣೆಯನ್ನು ಮಾಡುವ ಸಂದರ್ಭ ನಮ್ಮವರಿಂದಲೇ ವಿರೋಧ ವ್ಯಕ್ತವಾಯಿತು. ಕೊಡವರ ಸಾಂಪ್ರದಾಯಿಕ ವಸ್ತ್ರ ಮತ್ತು ಆಚರಣೆಗಳು ಆದಿಮಸಂಜಾತ ಕೊಡವರ ಹೆಗ್ಗುರುತು ಎನ್ನುವುದನ್ನು ಮನದಟ್ಟು ಮಾಡಿಕೊಡಲು 35 ವರ್ಷಗಳೇ ಬೇಕಾಯಿತು ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.