ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಭಾನುವಾರ ‘ಕೊಡವಲ್ಯಾಂಡ್’ ಹಕ್ಕೊತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.ಸಿಎನ್‌ಸಿ ಸಂಚಾಲಕ ಎನ್.ಯು.ನಾಚಪ್ಪ ಮಾತನಾಡಿ, ಕೊಡವರು ಯಾವುದೇ ಕಾರಣಕ್ಕಾಗಿ ಭೂಮಿಯನ್ನು ಮಾರಾಟ ಮಾಡಬಾರದು. ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಕೊಡವರು ಉಳಿಸಲು ಪಣ ತೊಡಬೇಕು. ಭೂಮಾಫಿಯಗಳ ಪರಿಸರವಾದಿಗಳಿಂದ ಕೊಡವರ ಭೂಮಿ ಪರಭಾರೆಯಾಗುತ್ತಿದೆ, ಇದನ್ನು ತಡೆಗಟ್ಟಬೇಕು ಎಂದರು.
ಕೊಡಗಿನ ಅರಣ್ಯ ನಾಶಕ್ಕೆ ಮೂಲನಿವಾಸಿಗಳು ಕಾರಣವಲ್ಲ, ಬದಲಿಗೆ ಜಾಗತೀಕರಣದ ಹೆಸರಿನಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು ಕೊಡಗಿನ ಬೃಹತ್ ಕಾಫಿ ತೋಟವನ್ನು ಖರೀದಿಸಿ ರೆಸಾರ್ಟ್, ಹೋಂಸ್ಟೆಗಳನ್ನು ನಿರ್ಮಿಸಿ ಕಾಂಕ್ರೀಟಿಕರಣಗೊಳಿಸುತಿರುವುದರಿಂದ ಕೊಡಗಿನಲ್ಲಿ ಭೂಕುಸಿತವಾಗಲು, ಜಲಪ್ರಳಯವಾಗಲು ಕಾರಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.ಕೊಡವ ಜನಾಂಗದವರನ್ನು ಬುಡಕಟ್ಟು ಮೀಸಲಾತಿಗೆ ಸೇರ್ಪಡೆಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ದಾವೆ ದಾಖಲಿಸಿದೆ ಎಂದೂ ಅವರು ಉಲ್ಲೇಖಿಸಿದರು.
ಎಂ.ಎ.ವಸಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎನ್‌ಸಿಯ ಸದಸ್ಯರಾದ ಪಿ.ಕೆ.ಮುತ್ತಣ್ಣ, ಬೊಟ್ಟೋಳಂಡ ಕುಮಾರ ಉತ್ತಪ್ಪ, ಚಿಕ್ಕಂಡ ಉತ್ತಪ್ಪ, ಚಿಕ್ಕಂಡ ಪೊನ್ನಪ್ಪ, ದಾಸಂಡ ಕಿರಣ್, ಶಿವುಉತ್ತಯ್ಯ, ನಾಗಚೇಟ್ಟಿರ ಮನುಮಂದಣ್ಣ, ನಾಗಚೇಟ್ಟಿರ ನಂದ, ಕೇಚಿರಬಾಗೇಶ್, ಕೆಚೀರ ಪ್ರಿನ್ಸ್, ಕಲ್‌ಮಾಡಂಡ ಸುರೇಶ್, ಕಂಜಿತಂಡ ಐಯ್ಯಣ್ಣ, ದಾಸಂಡ ಜಗದೀಶ್, ಪುಲಿಯಂಡ ಮುತ್ತಣ್ಣ, ರಂಜಿತ್ ಕಾರ್ಯಪ್ಪ, ಕಾಯಪಂಡ ತಮ್ಮಯ್ಯ ಸೇರಿದಂತೆ ವಿವಿಧೆಡೆಗಳಿಂದ ಕೊಡವ ಜನಾಂಗದವರು ಆಗಮಿಸಿದರು.ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.
ಟ್ರಾಫಿಕ್ ಜಾಂ: ಸಂತೆ ದಿನ ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಭಾನುವಾರ ರಜಾದಿನವಾಗಿದ್ದು, ಕೊಡಗಿಗೆ ಪ್ರವಾಸಿಗಾರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ ಬೆಂಗಳೂರು, ಮೈಸೂರು, ಮಂಗಳೂರು, ತಮಿಳುನಾಡು ಸೇರಿದಂತೆ ನೆರೆಯ ರಾಜ್ಯದಿಂದ ಮಡಿಕೇರಿ, ಭಾಗಮಂಡಲ, ಅಬ್ಬಿಪಾಲ್ಸ್, ನಾಲ್ಕುನಾಡು ಅರಮನೆ, ಕೋಟೆ ಪ್ರಾಚ್ಯವಸ್ತು ಸಂಗ್ರಾಹಲಯ, ಗದ್ದಿಗೆಗೆ ಬಹಳಷ್ಟು ಪ್ರವಾಸಿಗರು ಆಗಮಿಸಿದ್ದು, ವಾಹನ ದಟ್ಟಣೆ ಹೆಚ್ಚಾಗಿತ್ತು.