ಕನ್ನಡಪ್ರಭ ವಾರ್ತೆ ಬೇಲೂರು
ಸರಿಯಾದ ರಸ್ತೆ ಸಂಪರ್ಕ ಹಾಗೂ ಮೂಲ ಸೌಲಭ್ಯಗಳು ಇಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ತಾಲೂಕಿನ ಬಿಕ್ಕೋಡು ಹೋಬಳಿಯ ಕೋಡಿಹಳ್ಳಿ ಗ್ರಾಮವು ಮೂಲಭೂತ ಸೌಕರ್ಯವಿಲ್ಲದೇ ಸೊರಗಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಕೋಡಿಹಳ್ಳಿ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಗ್ರಾಮದ ಚಂದನ್ ,ಪುಟ್ಟರಾಜು ಮಾತನಾಡಿ ನಮ್ಮ ಗ್ರಾಮವು ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿದೆ. ವಿದ್ಯುತ್ ವ್ಯವಸ್ಥೆ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೇ ಸಾಕಷ್ಟು ತೊಂದರೆಯಾಗಿದೆ. ಮಳೆಗಾಲದಲ್ಲಿ ರಸ್ತೆ ಪರಿಸ್ಥಿತಿ ಹೇಳತೀರದಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದ್ದು, ಅಲ್ಲಲ್ಲಿ ರಸ್ತೆಗಳು ಕೆಸರು ತುಂಬಿದ ಗುಂಡಿಗಳಾಗಿವೆ. ಯಾವುದೇ ವಾಹನಗಳು ತಿರುಗಾಡಲು ಹರಸಾಹಸ ಪಡುವಂತಾಗಿದ್ದು, ರಸ್ತೆಯು ಕೂಡ ಕಿರಿದಾಗಿದೆ. ರಸ್ತೆ ಸರಿ ಇರದ ಕಾರಣ ನಮ್ಮ ಊರಿಗೆ ಆಟೋ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಬೇರೆಲ್ಲಾ ಗ್ರಾಮಗಳು ಅನೇಕ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿಯತ್ತ ಸಾಗುತ್ತಿದ್ದರೆ, ಅವುಗಳಿಗೆ ಹೋಲಿಸಿದರೆ ನಮ್ಮ ಗ್ರಾಮ ಅತಿ ಹಿಂದುಳಿದಿದೆ. ಪಕ್ಕದ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಬಿಕ್ಕೋಡು ಗ್ರಾಪಂ ಅಧಿಕಾರಿಗಳಾಗಲಿ ಅಥವಾ ಅಧ್ಯಕ್ಷರಾಗಲಿ ಹಾಗೂ ಸ್ಥಳೀಯ ಶಾಸಕರಿಗೆ ಸಾಕಷ್ಟು ಸಮಸ್ಯೆ ಬಗ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರಿಗೆ ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದ್ದರೂ ಉಪಯೋಗವಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು . ಇಲ್ಲದಿದ್ದರೆ ಗ್ರಾಪಂ ಹಾಗೂ ತಾಪಂ ಕಚೇರಿ ಮುಂಭಾಗ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಲಕ್ಷ್ಮಣ್ ,ಕಾರ್ತಿಕ್ , ದರ್ಶನ್, ಶಿವಮ್ಮ, ಶೋಭ, ಪವಿತ್ರ, ಹೇಮಾ, ದೇವಿರಮ್ಮ, ಲೊಲಾಕ್ಷಿ, ಸುಶೀಲಾ ಇತರರು ಹಾಜರಿದ್ದರು.