ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ನಾಮಪತ್ರ ಸಲ್ಲಿಕೆ

KannadaprabhaNewsNetwork | Published : Apr 13, 2024 1:04 AM

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಬಸವರಾಜ ಕೆ. ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಬಸವರಾಜ ಕೆ. ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರವನ್ನು ಬಿ. ಫಾರ್ಮ್‌ನೊಂದಿಗೆ ಅಧಿಕೃತವಾಗಿ ಸಲ್ಲಿಕೆ ಮಾಡಿದ್ದಾರೆಯಾದರೂ ಸಾಂಕೇತಿಕವಾಗಿ ಸಲ್ಲಿಸಿದ್ದಾರೆ. ಏ. 16ರಂದು ಸಾರ್ವಜನಿಕವಾಗಿ ಬೃಹತ್ ರೋಡ್ ಶೋ ನಡೆಸಿ, ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗಿದ್ದಾರೆ.

ಈ ವೇಳೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಇದ್ದರು.

ಕೊಪ್ಪಳದ ಅಭಿವೃದ್ಧಿಗೆ ಆದ್ಯತೆ: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ. ಹೇಳಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ. ಅವರು ದೇಶದ ಅಭಿವೃದ್ಧಿಗಾಗಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ ಎಂದರು.

ಕ್ಷೇತ್ರದಾದ್ಯಂತ ಸುತ್ತಾಡಿದಾಗ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದುವೆ ನಮಗೆ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದು, ಅವುಗಳನ್ನು ಈಡೇರಿಸುವುದಾಗಿ ಹೇಳಿದರು. ನೀರಾವರಿ, ಹೆದ್ದಾರಿ, ರೈಲ್ವೆ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ಸಾಕಷ್ಟು ಅಭಿವೃದ್ಧಿ ಮಾಡುವುದಾಗಿ ಹೇಳಿದರು.

₹14.13 ಕೋಟಿಯ ಒಡೆಯ: ಆಸ್ಪತ್ರೆ, ವಿವಿಧ ಕಂಪನಿಗಳಲ್ಲಿ ಶೇರು ಹೂಡಿಕೆ ಸೇರಿದಂತೆ ಚರ ಮತ್ತು ಸ್ಥಿರಾಸ್ತಿ ಸೇರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ. ಅವರ ಆಸ್ತಿಯ ಮೌಲ್ಯ ಬರೋಬ್ಬರಿ ₹14.13 ಕೋಟಿ. ಸಾಲ ₹5.08 ಕೋಟಿ.ಡಾ. ಬಸವರಾಜ ಅವರು ಕೇವಲ ತಮ್ಮ ಒಬ್ಬರ ವಿವರನ್ನು ಮಾತ್ರ ಸಲ್ಲಿಕೆ ಮಾಡಿದ್ದು, ಅವಲಂಬಿತರ ಮಾಹಿತಿಯ ಕಾಲಂನಲ್ಲಿ ಯಾರು ಇಲ್ಲ ಎಂದು ನಮೂದಿಸಿದ್ದಾರೆ. ಅವರ ಸ್ವಂತ ಒಡೆತನದಲ್ಲಿರುವ ಆಸ್ತಿಯ ಮಾಹಿತಿ ಮಾತ್ರ ನೀಡಿದ್ದಾರೆ.ಡಾ. ಬಸವರಾಜ ಅವರು ಕೈಯಲ್ಲಿ ₹19.34 ಲಕ್ಷ ಇದೆ. ಅವರು 200 ಗ್ರಾಂ ಚಿನ್ನ ಹೊಂದಿದ್ದು, ಅದರ ಮಾರುಕಟ್ಟೆ ಮೌಲ್ಯ ₹14 ಲಕ್ಷ ಎಂದು ನಮೂದಿಸಿದ್ದಾರೆ. ಉಳಿದಂತೆ ಹೂಡಿಕೆ, ಶೇರು ಸೇರಿದಂತೆ ಚರಾಸ್ತಿಯ ಮೌಲ್ಯ ₹10.26 ಕೋಟಿ ಆಗಿದೆ. ನಿವೇಶನ, ಎನ್‌ಎ ಲ್ಯಾಂಡ್ ಸೇರಿದಂತೆ ₹3.82 ಕೋಟಿಯ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.ಡಾ. ಬಸವರಾಜ ಅವರು ₹65 ಲಕ್ಷ ಮೌಲ್ಯದ ಲೆಕ್ಸಸ್ ಕಂಪನಿಯ ಕಾರು ಹೊಂದಿದ್ದಾರೆ.

Share this article